ಪಡುಬಿದ್ರಿ: ಪ್ರತಿಮೆ ಮಾಧ್ಯಮದಲ್ಲಿ ದೇವರಿದ್ದು, ಅದರೊಳಗೆ ಸನ್ನಿಹಿತನಾಗಿರುವ ಭಗವಂತನ ಅನುಸಂಧಾನ ಮಾಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪುರಾಣ ಸಂದೇಶ ಜ್ಞಾನ ಸತ್ರ ಕುಂಭ ಮಾಘ ಮೇಳದಲ್ಲಿ ಗುರುವಾರ ಭಾಗವತ, ಹರಿಯ ಉಪದೇಶ ನೀಡಿದರು.
ಪ್ರತಿಮೆಕಾರರ ಅಂಗಳದಲ್ಲಿ ಎಷ್ಟೇ ಸುಂದರ ವಿಗ್ರಹಗಳಿದ್ದರೂ ಅದರ ಅಂದ ಆಸ್ವಾಧಿಸಿಕೊಂಡು ಬರುತ್ತೇವೆಯೇ ಹೊರತು ಪೂಜೆ ಮಾಡುತ್ತಿಲ್ಲ. ಪ್ರತಿಮೆ ದೇವರಲ್ಲ. ಅದೇ ಪ್ರತಿಮೆಯನ್ನು ಗುಡಿಯೊಳಗೆ ತಂದು ಪ್ರಾಣ ಪ್ರತಿಷ್ಠಾಪನೆ ಮಾಡಿ ದೇವರೆಂದು ಪೂಜಿಸುತ್ತೇವೆ. ನಾವಿರುವ ಪ್ರತಿಯೊಂದು ಸ್ಥಳ ದೇಶವೇ ಆಗಿದ್ದು, ರಾಷ್ಟ್ರೀಯ ಹಬ್ಬದ ದಿನ ಪ್ರತೀಕವಾಗಿರುವ ಧ್ವಜಕ್ಕೆ ವಂದನೆ ಸಲ್ಲಿಸಿ ದೇಶಭಕ್ತಿ ಮೆರೆಯುತ್ತೇವೆ ಎಂದರು.
ಪುರಾಣ ಗ್ರಂಥಗಳಿಗೆ ಪೇಜಾವರ ಶ್ರೀಗಳು ಪೂಜೆ ಸಲ್ಲಿಸಿದರು. ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಎನ್.ಮಧ್ವರಾಯ ಭಟ್ ಉಪಸ್ಥಿತರಿದ್ದರು. ವಿದ್ವಾಂಸ ಅಡ್ವೆ ಲಕ್ಷ್ಮೀಶ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಪ್ರೇರಕ ಎಸ್.ನಾಗರಾಜ್ ರಾವ್ ಕಾರ್ಯಕ್ರಮ ನಿರೂಪಿಸಿದರು.