ಶೂಟೌಟ್​ಗೆ ಒಬ್ಬ ಬಲಿ: ಅಮಾನ್ಯೀಕರಣಗೊಂಡ ನೋಟು ಬದಲು ದಂಧೆ

ಮೈಸೂರು: ಅಮಾನ್ಯೀಕರಣಗೊಂಡ ನೋಟುಗಳ ಬದಲಾವಣೆ ದಂಧೆ ಮಾಡುತ್ತಿದ್ದರು ಎನ್ನಲಾದ ಗುಂಪಿನ ಮೇಲೆ ಗುರುವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ದಂಧೆಕೋರನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ. ಪಂಜಾಬ್ ಮೂಲದ ಸುಕ್ವಿಂದ್ ಸಿಂಗ್ (40) ಗುಂಡೇಟಿಗೆ ಬಲಿಯಾದವನು. ಗುಂಪಿನಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ.

ಏನಿದು ಘಟನೆ?: ಮುಂಬೈ ಮೂಲದ ದಂಧೆಕೋರರು ಅಮಾನ್ಯೀಕರಣಗೊಂಡ ನೋಟುಗಳನ್ನು ಬದಲಾಯಿಸುವ ದಂಧೆ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ವಿಜಯನಗರ ಠಾಣೆ ಇನ್ಸ್ ಪೆಕ್ಟರ್ ಬಿ.ಜಿ.ಕá-ಮಾರ್ ಸಿಬ್ಬಂದಿಯೊಂದಿಗೆ ದಾಳಿಗೆ ಮುಂದಾದರು. ಈ ವೇಳೆ ನಗರದ ಹಿನಕಲ್ ರಿಂಗ್ ರಸ್ತೆ ಬದಿಯ ಅಪಾರ್ಟ್ ಮೆಂಟ್ ಮುಂದೆ ಮೂವರು ಗುಂಪುಗೂಡಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಕಾರಣ ಅವರ ಮೇಲೆ ದಾಳಿ ಮಾಡಿದ್ದಾರೆ.

ಈ ವೇಳೆ ಪ್ರತಿರೋಧ ತೋರಿದ ದಂಧೆಕೋರರು, ಕಾನ್​ಸ್ಟೇಬಲ್​ಗಳಿಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪೇದೆಗಳನ್ನು ರಕ್ಷಿಸಲು ಹೋದ ಇನ್ಸ್​ಪೆಕ್ಟರ್ ಮೇಲೂ ಹಲ್ಲೆ ಮಾಡಿದ್ದು, ಪರಿಸ್ಥಿತಿ ಕೈಮೀರುವುದನ್ನು ಅರಿತ ಕುಮಾರ್ ಸುಕ್ವಿಂದ್ ಸಿಂಗ್ ಕಾಲಿನತ್ತ ಫೈರ್ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಆತನ ಶ್ವಾಸಕೋಶದ ಭಾಗಕ್ಕೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹಲ್ಲೆಗೊಳಗಾದ ಕಾನ್​ಸ್ಟೇಬಲ್​ಗಳು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯá-ತ್ತಿದ್ದಾರೆ. ಫೈರಿಂಗ್ ಮಾಡಿದ ಪಿಸ್ತೂಲನ್ನು ಮೇಲಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ತನಿಖೆ ಶುರು: ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿ ಪ್ರಕಾರ ಪ್ರಕರಣದ ತನಿಖೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದರು. ಅಮಾನ್ಯೀಕರಣಗೊಂಡ ನೋಟುಗಳ ಬದಲಾಯಿಸುವ ದಂಧೆಕೋರರು ಮೈಸೂರಿಗೆ ಬಂದಿದ್ದಾರೆಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ಮೃತನ ಬಗ್ಗೆ ಮಾಹಿತಿ ಸಿಕ್ಕ ನಂತರ ಅವರ ಕುಟುಂಬದವರಿಗೆ ವಿಷಯ ತಿಳಿಸಲಾಗುವುದು ಎಂದರು.

ಕಾಡುತ್ತಿರುವ ಪ್ರಶ್ನೆಗಳು

ಅಮಾನ್ಯೀಕರಣಗೊಂಡ ನೋಟುಗಳ ಬದಲಾವಣೆ ಇನ್ನೂ ನಡೆಯುತ್ತಿದೆಯೇ?, ಎಲ್ಲಿ ನಡೆಯುತ್ತಿದೆ? ಇಂತಹ ನೋಟು ಗಳ ಬದಲಾವಣೆಯಿಂದ ಪ್ರಯೋಜನ ವೇನು? ಎಂಬ ಪ್ರಶ್ನೆಗಳು ಪೊಲೀಸ್ ಅಧಿಕಾರಿಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಮೂಡಿವೆ.