ಆನ್​ಲೈನ್ ಮತದಾನ?

ಮೈಸೂರು: ಪ್ರತಿ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಆಗುತ್ತಿಲ್ಲ. ಮತಗಟ್ಟೆಗೆ ಜನ ಬಾರದಿದ್ದರೆ ಅವರ ಬಳಿಯೇ ಮತಗಟ್ಟೆ ಹೋದರೆ? ಎಂಬ ನಿಟ್ಟಿನಲ್ಲಿ ಚಿಂತನೆ ಆರಂಭವಾಗಿದ್ದು, ಆನ್​ಲೈನ್ ಮತದಾನ ವ್ಯವಸ್ಥೆ ಜಾರಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ನಗರದ ಲಲಿತಮಹಲ್ ಹೋಟೆಲ್​ನಲ್ಲಿ ಮಂಗಳವಾರ ಆರಂಭವಾದ 2 ದಿನಗಳ ರಾಜ್ಯ ಚುನಾವಣಾ ಆಯುಕ್ತರ 27ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಹಾಗೂ ಮಧ್ಯಪ್ರದೇಶ ಚುನಾವಣಾ ಆಯುಕ್ತ ಪರಶುರಾಮ್ ಈ ವಿಚಾರವನ್ನು ಮುಂದಿಟ್ಟು ಚರ್ಚೆಗೆ ಅನುವು ಮಾಡಿಕೊಟ್ಟರು.

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಆನ್​ಲೈನ್ ಮತದಾನ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಕೆಲ ರಾಜ್ಯಗಳು ಚುನಾವಣಾ ವ್ಯವಸ್ಥೆ ಸುಧಾರಣೆಗೆ ಮಹತ್ವದ ಹೆಜ್ಜೆಗಳನ್ನು ಇರಿಸಿವೆ. ಅವುಗಳನ್ನು ಇತರ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಲು ಸಮ್ಮೇಳನದಲ್ಲಿ ರ್ಚಚಿಸಲಾಗುವುದು. ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಆನ್​ಲೈನ್ ಮೂಲಕ ನಾಮಪತ್ರ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಕೆಲವೊಮ್ಮೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಚುನಾವಣೆಗಳು ನಡೆದಾಗ ಇವಿಎಂ ಯಂತ್ರಗಳನ್ನು ಒದಗಿಸುವುದು ಹಾಗೂ ಅವುಗಳ ನಿರ್ವಹಣೆ ದೊಡ್ಡ ಸವಾಲು. ಹೀಗಾಗಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮಲ್ಟಿಪಲ್ ಪೋಲಿಂಗ್ ಮಷಿನ್ ಬಳಸಲಾಗಿದೆ. ಇದರಲ್ಲಿ 3 ಅಭ್ಯರ್ಥಿಗಳನ್ನು ಆರಿಸುವ ಅವಕಾಶ ಇದೆ ಎಂದರು.

ಮಹಾರಾಷ್ಟ್ರ, ಹರಿಯಾಣದಲ್ಲಿ ನೋಟಾವನ್ನು ಒಂದು ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ. ಒಂದು ವೇಳೆ ನೋಟಾ ಉಳಿದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತ ಪಡೆದರೆ ಮರುಮತದಾನಕ್ಕೆ ಅವಕಾಶವಿದೆ. ಇದನ್ನು ಉಳಿದ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಲು ಚಿಂತಿಸಬೇಕೆಂದರು.

19 ರಾಜ್ಯಗಳ ಆಯುಕ್ತರು ಭಾಗಿ: ಸಮ್ಮೇಳನದಲ್ಲಿ 19 ರಾಜ್ಯಗಳ ಚುನಾವಣಾ ಆಯುಕ್ತರು ಪಾಲ್ಗೊಂಡು ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತು ಗಂಭೀರ ಚರ್ಚೆ ನಡೆಸಿದರು. ಸಮ್ಮೇಳನ ಬುಧವಾರ ಅಂತ್ಯಗೊಳ್ಳಲಿದೆ.

ಮೈಲ್ಯಾಕ್ ಶಾಯಿ ಬದಲಿಲ್ಲ: ಮೈಲ್ಯಾಕ್​ನಲ್ಲಿ ಉತ್ಪಾದನೆಯಾಗುವ ಅಳಿಸಲಾಗದ ಶಾಯಿಯನ್ನೇ ಮುಂದಿನ ಚುನಾವಣೆಗಳಲ್ಲೂ ಬಳಕೆ ಮಾಡಲಾಗುವುದು ಎಂದು ಸಮ್ಮೇಳನಾಧ್ಯಕ್ಷ ಪರಶುರಾಮ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತಯಂತ್ರಗಳ ಕೊರತೆ ಇದೆ. ಪ್ರಸ್ತುತ ನಮ್ಮಲ್ಲಿ 1200 ಮತಯಂತ್ರಗಳು ಮಾತ್ರ ಇವೆ. ಜಿ.ಪಂ. ಚುನಾವಣೆಗೆ 65 ಸಾವಿರ ಮತಯಂತ್ರ ಬಳಸಿದ್ದು, ಹೊರರಾಜ್ಯದಿಂದ ತರಲಾಯಿತು. ಇಷ್ಟನ್ನು ರಾಜ್ಯದಲ್ಲಿ ಹೊಂದಬೇಕಾದರೆ ಕನಿಷ್ಠ 75 ಕೋಟಿ ರೂ. ಬೇಕು. ಸರ್ಕಾರದ ಆರ್ಥಿಕ ಪರಿಸ್ಥಿತಿ ನೋಡಿ ಖರೀದಿಸಲಾಗುವುದು.

| ಪಿ.ಎನ್.ಶ್ರೀನಿವಾಸಾಚಾರಿ ರಾಜ್ಯ ಚುನಾವಣಾ ಆಯುಕ್ತ