ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ: ಮಾಜಿ ಸಿಎಂ ಸಿದ್ದು

ಮೈಸೂರು: ದೇಶದ ರಕ್ಷಣೆಯ ವಿಚಾರವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಆದರೆ, ಬಿಜೆಪಿ ಇಂತಹ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12 ರಿಂದ 13 ಸರ್ಜಿಕಲ್ ಸ್ಟೈಕ್ ನಡೆದಿತ್ತು. ನಾವು ಯಾವುದನ್ನಾದರೂ ಪ್ರಚಾರಕ್ಕೆ ಬಳಸಿಕೊಂಡಿದ್ದೇವಾ? ಇಂದಿರಾ ಗಾಂಧಿ ಅವಧಿಯಲ್ಲಿ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಶರಣಾಗಿದ್ದು ಗೊತ್ತಿಲ್ಲವಾ? ಅದಕ್ಕಿಂತಲೂ ದೊಡ್ಡದ ಈ ಸರ್ಜಿಕಲ್ ಸ್ಟ್ರೈಕ್? ದೇಶದ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಯಾವತ್ತು ರಾಜಕೀಯ ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಜಿಕಲ್ ಸ್ಟ್ರೈಕ್ ಮುಂಚೆ ಮೋದಿ ವರ್ಚಸ್ಸು ಬಿದ್ದು ಹೋಗಿತ್ತಾ?
ಬಿಜೆಪಿಯವರು ಯಾವತ್ತಾದರೂ ಅಭಿವೃದ್ಧಿ ಹಾಗೂ ರೈತರ ವಿಚಾರದಲ್ಲಿ ಮತ ಕೇಳಿದ್ದಾರ? ಬಿಜೆಪಿಯವರು ಬಡತನ, ನಿರುದ್ಯೋಗ ಹಾಗೂ ರೈತರ ಸಮಸ್ಯೆಯಂತ ವಿಚಾರಗಳ ಮೇಲೆ ಚುನಾವಣೆ ಎದುರಿಸಲ್ಲ. ಬದಲಾಗಿ ಭಾವನಾತ್ಮಕ ವಿಚಾರಗಳನ್ನು ಮಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್​ನಿಂದ ತಮಗೆ ಲಾಭವಾಗಿದೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಮುಂಚೆ ಮೋದಿ ವರ್ಚಸ್ಸು ಬಿದ್ದು ಹೋಗಿತ್ತಾ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ಸುಮಲತಾ ಅಂಬರೀಷ್ ಸ್ಪರ್ಧಿಸಲ್ಲ
ಸುಮಲತಾ ಈಗಲೂ ನಮ್ಮ ಪಾರ್ಟಿಯಲ್ಲೇ ಇದ್ದಾರೆ. ಆದರೆ, ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗುವ ಬಗ್ಗೆ ನನಗೆ ಗೊತ್ತಿಲ್ಲ. ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಾಗಿದೆ. ಉಳಿದದ್ದು ಅವರಿಗೆ ಬಿಟ್ಟಿದ್ದು, ಮಂಡ್ಯ, ಹಾಸನ ಎಂದು ಪ್ರತ್ಯೇಕಿಸಬೇಡಿ. 28 ಲೋಕಸಭಾ ಕ್ಷೇತ್ರಗಳಲ್ಲೂ ನಾನು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ಎಲ್ಲಿದ್ದ?
ನಾನು ಮತ್ತು ಎಚ್‌.ಸಿ.ಮಹದೇವಪ್ಪ ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ ಪಡಿಸುವಾಗ ಸಂಸದ ಪ್ರತಾಪ್ ಸಿಂಹ ಎಲ್ಲಿದ್ದ? ಮೈಸೂರಿಗೆ ಅವನ ಕೊಡುಗೆ ಏನು? ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅವನ ಮಟ್ಟಕ್ಕೆ ಇಳಿದು ನಾನು ಮಾತನಾಡುವುದಿಲ್ಲ. ಪ್ರತಾಪ್ ಸಿಂಹ ಮಾತ್ರವಲ್ಲ, ಬಿಜೆಪಿಯ ಯಾವ ಸಂಸದರೂ ಕೆಲಸ ಮಾಡಿಲ್ಲ. ನಮ್ಮ ಧ್ರುವನಾರಾಯಣ್ ಜತೆಗೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬರುತ್ತಾರಾ? ಶೋಭಾ ಕರಂದ್ಲಾಜೆ ಬರುತ್ತಾಳ? ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಹೆಗಡೆ ಚರ್ಚೆಗೆ ಬರುತ್ತಾರಾ? ಏನೂ ಮಾಡದೆ ಸುಮ್ಮನೆ‌ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಗುಡುಗಿದರು. (ದಿಗ್ವಿಜಯ ನ್ಯೂಸ್​)

One Reply to “ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ: ಮಾಜಿ ಸಿಎಂ ಸಿದ್ದು”

  1. Dear Siddu, Nimma party Abhivruddi yenu antha neeve heliddira…. “ಜೆಪಿಯವರು ಬಡತನ, ನಿರುದ್ಯೋಗ ಹಾಗೂ ರೈತರ ಸಮಸ್ಯೆಯಂತ ವಿಚಾರಗಳ ಮೇಲೆ ಚುನಾವಣೆ ಎದುರಿಸಲ್” . Deshakke swathanthra bandu 70 varushagaladaru, innu ee samasyegalu ide andare, neevu mathu nimma Congress party yeshtu abhivruddi madide antha goththaguthhte. Abhivruddi yagirodu, Vadra, Karthik Chidambaram …… George hagu ithare mukhandara value of propertinalli.

Comments are closed.