ವಿಜಯಶಂಕರ್​ಗೆ ಅಗ್ನಿಪರೀಕ್ಷೆ: ಮೋದಿ ಅಲೆ ನೆಚ್ಚಿಕೊಂಡಿರುವ ಪ್ರತಾಪ್​ಸಿಂಹ

ಪ್ರತಿಷ್ಠಿತ ಕಣವಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮೈತ್ರಿಯಲ್ಲಿರುವ ಜೆಡಿಎಸ್- ಕಾಂಗ್ರೆಸ್​ಗಳೆಂಬ ಜೋಡೆತ್ತುಗಳೊಂದಿಗೆ ಕಮಲ ಪಡೆ ಏಕಾಂಗಿ ಹೋರಾಟಕ್ಕಿಳಿದಿದೆ. ಒಗ್ಗೂಡಿ ಹೆಜ್ಜೆ ಹಾಕಲಾರದೆ ತೊಡರುತ್ತಿದ್ದ ಮಿತ್ರಪಕ್ಷಗಳು, ಭಾನುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟಿನ ಮಂತ್ರ ಪಠಿಸಿರುವುದು ಕದನಕಣಕ್ಕೆ ಹೊಸ ಟ್ವಿಸ್ಟ್ ನೀಡಿದೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಜಿದ್ದಾಜಿದ್ದಿ ಅಖಾಡದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಸದ್ಯದ ಕೌತುಕ.

ಕಣದ ಕಲಿಗಳು: ಚುನಾವಣಾ ಅಖಾಡದಲ್ಲಿ 22 ಅಭ್ಯರ್ಥಿಗಳು ಸೆಣಸಾಡುತ್ತಿದ್ದಾರೆ. ಈ ಪೈಕಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ನಡುವೆ ನೇರ ಮತಸಮರದ ಪೈಪೋಟಿ ಇದೆ. ಬಿಎಸ್​ಪಿಯ ಬಿ.ಚಂದ್ರ, ಎಸ್​ಯುುಎಸ್​ಐನ ಪಿ.ಎಸ್.ಸಂಧ್ಯಾ, ಕರ್ನಾಟಕ ಪ್ರಜಾ ಪಾರ್ಟಿಯ ಪಿ.ಕೆ.ಬಿದ್ದಪ್ಪ, ಉತ್ತಮ ಪ್ರಜಾಕೀಯ ಪಕ್ಷದ ವಿ.ಆಶಾರಾಣಿ ತಮ್ಮದೇ ಆದ ಲೆಕ್ಕಾಚಾರದಲ್ಲಿ ಮತ ಸೆಳೆಯಲು ಪ್ರಯತ್ನಿಸಿದ್ದಾರೆ. ಆದರೆ, ಈ ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ಕಾಣುತ್ತಿಲ್ಲ.

ಮೈತ್ರಿಯಲ್ಲಿ ತಳಮಳ: ಇಲ್ಲಿ ದೋಸ್ತಿಗಳ ನಡುವೆ ತಾಳ-ಮೇಳ ಕೂಡಿಬರುತ್ತಿಲ್ಲ. ಉಭಯ ಪಕ್ಷಗಳು ‘ನಾನೊಂದು ತೀರ, ನೀನೊಂದು ತೀರ’ ಎಂಬುವಂತೆ ಬಿಗುಮಾನದಿಂದ ವರ್ತಿಸುತ್ತಿವೆ. ತಳಮಟ್ಟದ ಕಾರ್ಯಕರ್ತರ ನಡುವೆ ಸಮನ್ವಯತೆ ಬೆಸುಗೆ ಆಗುತ್ತಿಲ್ಲ. ಕಳೆದ ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆಯ ಕಿಚ್ಚು ಈಗಲೂ ಬೂದಿಮುಚ್ಚಿದ ಕೆಂಡದಂತೆ ಕುದಿಯುತ್ತಿದೆ. ಈಚೆಗೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಸಭೆಯಲ್ಲಿ ಉಂಟಾದ ಗದ್ದಲ, ಗಲಾಟೆ ಇದಕ್ಕೆ ಸಾಕ್ಷಿ. ಇದು ದಳ-ಕೈ ಮತಗಳ ಕ್ರೋಡೀಕರಣಕ್ಕಿಂತ ವಿಭಜಿಸುವ ಭೀತಿ ತಂದಿಟ್ಟಿದೆ. ಹೀಗಾಗಿ, ಮಿತ್ರನಾದ ಕಾಂಗ್ರೆಸ್​ಗಿಂತ ರಾಜಕೀಯ ವೈರಿ ಬಿಜೆಪಿ ಮೇಲೆ ಜೆಡಿಎಸ್ ಪಾಳಯದಲ್ಲಿ ಒಲವು ಕಂಡುಬರುತ್ತಿದೆ. ಇದು ಕಾಂಗ್ರೆಸ್​ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.

ಕಳೆದ ಬಾರಿಯೂ ಇದೇ ರೀತಿ ವಿಚಿತ್ರ ಒಲವು ವ್ಯಕ್ತವಾಗಿತ್ತು. ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ಕಟುಟೀಕೆ ಮಾಡುತ್ತಿದ್ದ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಅವರನ್ನು ಸೋಲಿಸಲು ಬಿಜೆಪಿಯ ಹೊಸಮುಖ ಪ್ರತಾಪ್ ಸಿಂಹ ಅವರನ್ನು ಜೆಡಿಎಸ್ ಕಾರ್ಯಕರ್ತರು ಅಪ್ಪಿಕೊಂಡಿದ್ದರು. ಇಂಥ ಚಮತ್ಕಾರ ಈಗಲೂ ಪುನರಾವರ್ತನೆಯಾದರೂ ಅಚ್ಚರಿ ಇಲ್ಲ. ಏಕೆಂದರೆ, ಪಾತ್ರಧಾರಿಗಳು ಬದಲಾದರೂ ಈಗಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.

ಕಳೆದ ಬಾರಿ ಎಚ್.ವಿಶ್ವನಾಥ್ ಮೇಲೆ ಜೆಡಿಎಸ್ ಕಾರ್ಯಕರ್ತರ ಸಿಟ್ಟಿತ್ತು, ಈ ಸಲ ಸಿದ್ದರಾಮ್ಯಯ ಅವರ ಮೇಲಿದೆ. ಈ ಸಿಟ್ಟು ವಿಜಯಶಂಕರ್ ಅವರಿಗೆ ತಟ್ಟಬಹುದು. ತವರೂರಿನಲ್ಲೇ ಸಿದ್ದರಾಮಯ್ಯ ಅವರನ್ನು ಮುಖಭಂಗ ಮಾಡಲು ದಳದ ಕಾರ್ಯಕರ್ತರು ಕಾರ್ಯತಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ಕ್ಷೇತ್ರದ ಪ್ರಮುಖ ಸಮಸ್ಯೆಗಳು

ತಂಬಾಕು ಬೆಳೆಗಾರರ ಸಮಸ್ಯೆ ಗಂಭೀರವಾಗಿದೆ. ನಿಷೇಧದ ಭೀತಿಯಲ್ಲಿರುವ ಇದಕ್ಕೆ ಪರ್ಯಾಯ ಬೆಳೆ ಬೆಳೆಯಲು ರೈತರನ್ನು ಸಜ್ಜುಗೊಳಿಸುತ್ತಿಲ್ಲ, ತಂಬಾಕಿಗೂ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಲೈಸೆನ್ಸ್ ಹೊಂದಿಲ್ಲದ ರೈತರ ಶೋಷಣೆ ತಪ್ಪಿಲ್ಲ. ಇವರಿಗೆ ಪರವಾನಗಿ ಕೊಟ್ಟು, ಅನಧಿಕೃತ ತಂಬಾಕಿನ ಮೇಲೆ ವಿಧಿಸುತ್ತಿರುವ ದಂಡ ರದ್ದು ಮಾಡಿಲ್ಲ. ಕೊಡಗು ಜಿಲ್ಲೆಯ ಕಾಫಿ-ಕರಿಮೆಣಸು ಬೆಳೆಗಾರರ ಸಮಸ್ಯೆಗೂ ಸ್ಪಂದಿಸಿಲ್ಲ. ಪ್ರಕೃತಿ ವಿಕೋಪದಿಂದ ಆಸ್ತಿಪಾಸ್ತಿ ಕಳೆದುಕೊಂಡ ಕೊಡಗಿನ ಸಂತ್ರಸ್ತರಿಗೆ ಪುನರ್ವಸತಿಯಾಗಿಲ್ಲ. ಚುನಾವಣೆ ವೇಳೆ ಘೊಷಣೆಯಾದ ಕೊಡಗಿಗೆ ರೈಲು ಸಂಪರ್ಕ (ಮೈಸೂರು-ಕುಶಾಲನಗರ) ಕಾರ್ಯಗತವಾಗಿಲ್ಲ. ಇದು ಜಾರಿಯಾದರೂ ಪೂರ್ಣಪ್ರಮಾಣದಲ್ಲಿ ಈ ಜಿಲ್ಲೆಗೆ ರೈಲ್ವೆ ಸೇವೆ ಸಿಗುವುದಿಲ್ಲ. ಪ್ಯಾರಿಸ್ ಮಾದರಿಯಲ್ಲಿ ಮೈಸೂರನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸುವ ನರೇಂದ್ರ ಮೋದಿ ಚುನಾವಣಾಪೂರ್ವ ಭರವಸೆ ಈಡೇರಿಲ್ಲ. ಮೈಸೂರಿಗೆ ‘ಪಾರಂಪರಿಕ ನಗರಿ’ ಮನ್ನಣೆ ಸಿಕ್ಕಿಲ್ಲ. ಸ್ವಚ್ಛ ನಗರಿ ಹಿರಿಮೆ ಪಡೆದ ಮೈಸೂರಿಗೆ ವಿಶೇಷ ಅನುದಾನ ಮಂಜೂರಾಗಲಿಲ್ಲ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಯಾಗಿಲ್ಲ. 2016-17ನೇ ಸಾಲಿನ ಬಜೆಟ್​ನಲ್ಲಿ ಘೊಷಣೆಯಾದ 200 ಕೋಟಿ ರೂ. ವೆಚ್ಚದ ಜವಳಿ ಪಾರ್ಕ್ ಸ್ಥಾಪನೆ ಆಗಲಿಲ್ಲ.

ನನ್ನ ಗೆಲುವಿಗೆ ಮೋದಿ ಒಬ್ಬರೇ ಸಾಕು. ಮೋದಿ ಅವರ ಕೆಲಸ ಮೆಚ್ಚಿರುವ ಜನ ನಮಗೆ ಮತ ನೀಡುತ್ತಾರೆ. ಜೆಡಿಎಸ್, ಕಾಂಗ್ರೆಸ್​ನಲ್ಲಿರುವ ಮೋದಿ ಅಭಿಮಾನಿಗಳೂ ನಮಗೆ ಮತ ಹಾಕುತ್ತಾರೆ. ದೋಸ್ತಿಗಳ ನಡುವಿನ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಬಿಜೆಪಿಗೆ ಲಾಭ ಖಚಿತ.

| ಪ್ರತಾಪ್ ಸಿಂಹ ಬಿಜೆಪಿ ಅಭ್ಯರ್ಥಿ

ನಿರ್ಣಾಯಕ

ಒಕ್ಕಲಿಗ, ಎಸ್​ಸಿ, ಅಲ್ಪಸಂಖ್ಯಾತ, ಒಬಿಸಿ ಮತ್ತು ಲಿಂಗಾಯತ ಮತದಾರರೇ ನಿರ್ಣಾಯಕರು. ದೋಸ್ತಿಗಳಲ್ಲಿನ ಗೊಂದಲದಿಂದ ಮತ ವಿಭಜನೆಯಾದರೆ ಬಿಜೆಪಿಗೆ ಮುನ್ನಡೆ, ಇಲ್ಲದಿದ್ದರೆ ಕಾಂಗ್ರೆಸ್​ಗೆ ಗೆಲುವು.

ನಾನು ಸಾಂಕೇತಿಕ ಅಭ್ಯರ್ಥಿ. ನನ್ನ ಗೆಲುವು ಕಾಂಗ್ರೆಸ್-ಜೆಡಿಎಸ್​ನ ಗೆಲುವು. ಎರಡು ಪಕ್ಷಗಳೂ ಪರಸ್ಪರ ಹೊಂದಾಣಿಕೆಯಿಂದ ಚುನಾವಣೆ ಎದುರಿಸುತ್ತಿರು ವುದರಿಂದ 2 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸುತ್ತೇನೆಂಬ ವಿಶ್ವಾಸವಿದೆ.

| ಸಿ.ಎಚ್.ವಿಜಯಶಂಕರ್ ಮೈತ್ರಿ ಅಭ್ಯರ್ಥಿ

ಮೋದಿ ಪ್ರಭಾವ

ಮೈಸೂರು ಪ್ರಾಂತ್ಯದ ಚುನಾವಣಾ ಅಖಾಡದಲ್ಲಿ ಧೂಳೆಬ್ಬಿಸಲು ಪ್ರಧಾನಿ ಮೋದಿ ಏ.9ರ ಸಂಜೆ ನಗರಕ್ಕೆ ಆಗಮಿಸಲಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲೂ ಮೈಸೂರಿನಲ್ಲಿ ಮೋದಿ ಪ್ರಚಾರ ಭಾಷಣ ಮಾಡಿದ್ದರು. ಇದು ಮೈಸೂರು ಪ್ರಾಂತ್ಯದಲ್ಲಿ ಮೋದಿ ಅಲೆ ಸೃಷ್ಟಿಯಾಗಲು ಕಾರಣವಾಗಿತ್ತು.

ಒಗ್ಗಟ್ಟು ಪ್ರದರ್ಶಿಸಿದರೂ ಸಿಗದ ಉತ್ತರ

ಭಾನುವಾರ ದೋಸ್ತಿ ಪಾಳಯದಲ್ಲಿ ರಾಜಕೀಯ ತಿರುವು ಸಿಕ್ಕಿದೆ. ಉಭಯ ಪಕ್ಷಗಳ ಜಿಲ್ಲಾಮಟ್ಟದ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಾಹ್ಯವಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದೇ ರೀತಿ ತಳಮಟ್ಟದ ಕಾರ್ಯಕರ್ತರು ನಡೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗಿನ್ನೂ ಉತ್ತರ ಸಿಕ್ಕಿಲ್ಲ. ಮೈತ್ರಿಯ ಜೋಡೆತ್ತು ತಳಮಟ್ಟದಲ್ಲಿ ಒಂದಾಗಿ ದುಡಿದರೆ ಬಿಜೆಪಿ ಧೂಳೀಪಟವಾಗುವುದು ನಿಶ್ಚಿತ. ಮೈತ್ರಿಯಲ್ಲಿನ ಬಿರುಕು ಮುಂದುವರಿದರೆ ಬಿಜೆಪಿಗೆ ಆನೆಬಲ ಸಿಗುವುದು ಖಚಿತ. ಆದರೆ, ಕಾಂಗ್ರೆಸ್ ಕೋಟೆಯಲ್ಲಿ ಈ ವರೆಗೆ ಸತತ 2 ಬಾರಿ ಯಾರೂ ಸಂಸದರಾಗಿ ಗೆದ್ದಿಲ್ಲ. ಈ ಚರಿತ್ರೆಯನ್ನು ಪ್ರತಾಪ್ ಮುರಿಯಲಿದ್ದಾರೆಯೇ? ಎಂಬುದಕ್ಕೆ ಮೇ 23ರಂದು ಉತ್ತರ ಸಿಗಲಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ತಲಾ 2 ಸೋಲು-ಗೆಲುವು ಕಂಡಿರುವ ವಿಜಯಶಂಕರ್​ಗೆ ಇದು ಅಗ್ನಿಪರೀಕ್ಷೆ. ಗೆದ್ದರೆ ಮತ್ತೆ ರಾಜಕೀಯದ ಮುಖ್ಯವಾಹಿನಿಗೆ, ಸೋತರೆ ನೇಪಥ್ಯಕ್ಕೆ ಸರಿಯವುದು ನಿಶ್ಚಿತ.

One Reply to “ವಿಜಯಶಂಕರ್​ಗೆ ಅಗ್ನಿಪರೀಕ್ಷೆ: ಮೋದಿ ಅಲೆ ನೆಚ್ಚಿಕೊಂಡಿರುವ ಪ್ರತಾಪ್​ಸಿಂಹ”

  1. ಸಂಸದರ ಬಗ್ಗೆ ಅಭಿಪ್ರಾಯ ಸತ್ಯಕ್ಕೆ ದೂರವಾಗಿದೆ.

Leave a Reply

Your email address will not be published. Required fields are marked *