ದುಪ್ಪಟ್ಟು ಸಂಭ್ರಮ ಹೆಚ್ಚಿಸಿದ ಯುವ ದಸರಾ

ಮೈಸೂರು: ನಾಡಹಬ್ಬ ದಸರಾಕ್ಕೆ ಶುಕ್ರವಾರದಿಂದ ಯುವಸಮೂಹವನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ‘ಯುವ ದಸರಾ’ ಸೇರ್ಪಡೆಗೊಂಡು ಮತ್ತಷ್ಟು ರಂಗು ತಂದಿತು. ಆರು ದಿನಗಳ ಕಾಲ ಖ್ಯಾತನಾಮರು ರಸದೌತಣ ನೀಡುವ ‘ಯುವ ದಸರಾ’ಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ಗಾಯಕ ವಿಜಯಪ್ರಕಾಶ್ ಅವರ ಗಾಯನ ಮೋಡಿ ಮಾಡಿದರೆ, ಪ್ರೇಕ್ಷಕರು ಕೋರಸ್ ಜತೆಗೆ ಚಪ್ಪಾಳೆ, ಸಿಳ್ಳೆ, ಕೇಕೆ ಮೂಲಕ ಜೋಶ್ ಹೆಚ್ಚಿಸಿದರು.

ಚಿಣ್ಣರಿಗಾಗಿ ಆಯೋಜಿಸಿದ್ದ ಮಕ್ಕಳ ದಸರಾದಲ್ಲಿ, ಮಹಾ ಕಾಳಿ, ಚಾಮುಂಡೇಶ್ವರಿ, ನಾರದ, ಭಗವಾನ್ ಬುದ್ಧರೆಲ್ಲರ ವೇಷಗಳು ಗಮನ ಸೆಳೆದವು. ಕುವೆಂಪುನಗರದ ಸೌಗಂಧಿಕ ಉದ್ಯಾನದಲ್ಲಿ ಆಯೋಜಿಸಿದ್ದ ‘ಯೋಗ ದಸರಾ’, ‘ಮನೆ ಮನೆ ಯೋಗ’ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಚಾಲನೆ ನೀಡಿ ಸೂರ್ಯ ನಮಸ್ಕಾರ ಹಾಕಿದರು.

ಹೀಗೆ ಬಂದು ಹಾಗೆ ಹೋದರು: ಒಂದು ತಾಸು ತಡವಾಗಿ ಬಂದ ಸಚಿವರಾದ ಶಿವಶಂಕರ್​ರೆಡ್ಡಿ, ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್ ಹೀಗೆ ಬಂದು ಹಾಗೆ ಹೋಗಿದ್ದು, ಸಭಿಕರಿಗೆ ನಿರಾಶೆ ಮೂಡಿಸಿತು. ಸಭಾಂಗಣ ಹೊರಗೆ ರಸ್ತೆಯಲ್ಲೇ ನಿಂತು ಬಲೂನ್ ಹಾರಿಸಿದ ಅವರು, ಆತುರದಲ್ಲಿ ವೇದಿಕೆ ಏರಿದರು. ಸ್ವಾಗತದ ವೇಳೆ ಶಿವಶಂಕರ್​ರೆಡ್ಡಿ ಹೆಸರು ಹೇಳದಿದ್ದಕ್ಕೆ ಸಾ.ರಾ. ಮಹೇಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಕರ್ಷಣೀಯ ಮತ್ಸ್ಯೆುೕಳ: ಬೆಂಗಳೂರಿನ ಮಮೇಡ್ ಸಂಸ್ಥೆ ಸಹಯೋಗದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ‘ಮತ್ಸ್ಯ ಮೇಳ’ ಎಲ್ಲರನ್ನೂ ಆಕರ್ಷಿಸುತ್ತಿದೆ.

ಕೊಡಗಿಗಾಗಿ ಕಣ್ಣೀರು: ದಸರಾ ಚಿಗುರು ಕವಿಗೋಷ್ಠಿಯಲ್ಲಿ ಚಿಣ್ಣರು, ‘ಕೊಡಗು’ ಕವಿತೆಯಲ್ಲಿ ಕೊಡಗನ್ನು ಮತ್ತೆ ಕಟ್ಟುವ ಸಂಕಲ್ಪ ತೊಟ್ಟರೆ, ಮತ್ತೆ ಕೆಲವರು ಕೊಡಗಿನ ಸಂಕಷ್ಟಕ್ಕೆ ಮಿಡಿದು ಕಣ್ಣೀರಿಟ್ಟರು. ಪಾರಂಪರಿಕ ಕಟ್ಟಡಗಳ ವೀಕ್ಷಣೆಗೆ ಆಯೋಜಿಸಿರುವ ‘ಟ್ರಿಣ್-ಟ್ರಿಣ್’ ಸೈಕಲ್ ಸವಾರಿಗೆ ಜಿ.ಟಿ. ದೇವೇಗೌಡ ಇತರರು ಸೈಕಲ್ ತುಳಿದು ಚಾಲನೆ ನೀಡಿದರು. ಸಚಿವ ಶಿವಶಂಕರ್​ರೆಡ್ಡಿ ಎತ್ತಿನಗಾಡಿಯಲ್ಲಿ ಸಂಚರಿಸಿ ರೈತ ದಸರಾಕ್ಕೆ ಮೆರಗು ತಂದರು. ಅರಮನೆ ಆವರಣದ ಮುಖ್ಯ ಸಾಂಸ್ಕೃತಿಕ ವೇದಿಕೆಯಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ ತಂಡದ ಸಂಗೀತ ಪ್ರೇಕ್ಷಕರು ಸಂಭ್ರಮಿಸುವಂತೆ ಮಾಡಿತು.

ನಾನು ಪ್ರತಿ ಶಾಸಕರಿಗೆ ಆಹ್ವಾನ ಪತ್ರ ಕಳುಹಿಸಿ ದಸರೆಗೆ ಕರೆದಿದ್ದರೂ ಕೆಲವರು(ಕಾಂಗ್ರೆಸ್) ಗೈರಾಗಿದ್ದಾರೆ. ದಸರಾದಲ್ಲಿ ರಾಜಕೀಯ ಮಾಡದೆ ಎಲ್ಲರೂ ಸೇರಿ ಉತ್ಸವ ಆಚರಿಸಬೇಕು. ಈ ಹಿಂದೆ ಕಾಂಗ್ರೆಸ್ ನಾಯಕರ ಜತೆ ನಾನು ವೇದಿಕೆ ಹಂಚಿಕೊಂಡಿಲ್ಲವೇ? ನೀವೂ ಹಾಗೆ ನಮ್ಮೊಂದಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಿ.

| ಜಿ.ಟಿ.ದೇವೇಗೌಡ ಜಿಲ್ಲಾ ಉಸ್ತುವಾರಿ ಸಚಿವ