PHOTOS: ಐತಿಹಾಸಿಕ ಜಂಬೂ ಸವಾರಿ ವೈಭವ ಕಣ್ತುಂಬಿಕೊಂಡ ನಾಡಿನ ಜನತೆ; ಬನ್ನಿ ಮಂಟಪದಲ್ಲಿ ನಡೆಯಿತು ಆಕರ್ಷಣೀಯ ಪಂಜಿನ ಕವಾಯತು

ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ಇಂದು ತೆರೆ ಬಿದ್ದಿದೆ. ವೈಭವಯುತವಾಗಿ ನಡೆದ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿತ್ತು.

ಅರ್ಜುನ ಆನೆ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಬನ್ನಿ ಮಂಟಪವನ್ನು ತಲುಪಿದ ಬಳಿಕ ಅಲ್ಲಿ ಪಂಜಿನ ಕವಾಯತು ನಡೆಯಿತು. ನುರಿತ ಸಾಹಸ ಪ್ರದರ್ಶನಕಾರರು ತಮ್ಮ ಪ್ರತಿಭೆಯನ್ನು ತೋರಿದರು.

ಅಶ್ವಾರೋಹಿ ಪಡೆ ಪ್ರದರ್ಶಿಸಿದ ಟೆಂಟ್​ ಪೆಗ್ಗಿಂಗ್​ ಮತ್ತು ಮಿಲಿಟರಿ ಪಡೆಯ ವಿವಿಧ ಸಾಹಸಗಳು ಆಕರ್ಷಣೀಯವಾಗಿದ್ದವು. ಮುಖ್ಯ ಅತಿಥಿಗಳಾಗಿದ್ದ ರಾಜ್ಯಪಾಲ ವಿ.ಆರ್​.ವಾಲಾ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಕೊನೆಯಲ್ಲಿ 300ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಕಂದೀಲು ಹಿಡಿದು ಪಂಜಿನ ಕವಾಯತು ನಡೆಸುವ ಮೂಲದ ಸಾಂಪ್ರದಾಯಿಕ ದಸರಾಕ್ಕೆ ತೆರೆ ಬಿದ್ದಿತು.

ಜಂಬೂಸವಾರಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ, ವಿವಿಧ ಇಲಾಖೆಗಳ ಒಟ್ಟು 38 ಸ್ತಬ್ಧ ಚಿತ್ರಗಳು ಸಾಥ್​ ನೀಡಿದ್ದವು. ಬಾಲಾಕೋಟ್​ ಏರ್​ಸ್ಟ್ರೈಕ್​, ಚಂದ್ರಯಾನ-2 ಸೇರಿ ಅನೇಕ ಸ್ತಬ್ಧಚಿತ್ರಗಳು ಜನರ ಗಮನಸೆಳೆದವು. 44 ಜಾನಪದ ಕಲಾ ತಂಡಗಳು ಜಂಬೂಸವಾರಿಗೆ ಮೆರುಗು ನೀಡಿದವು. ಹರಿಯಾಣದ ಗೂಮರ್​ ನೃತ್ಯ ಜಾರ್ಖಂಡ್​ನ ಚಾವ್​ ನೃತ್ಯ, ಮಹಾರಾಷ್ಟ್ರದ ಡಾಂಗ್ರಿಗ ಹಾಗೂ ಪುಣೇರಿ ಡೋಲ್​ ನೃತ್ಯಗಳು ಈ ಬಾರಿಯ ದಸರಾದ ವಿಶೇಷತೆಗಳು.

ಇದಕ್ಕೂ ಮೊದಲು ಅರಮನೆ ಎದುರು ವಿಶೇಷ ವೇದಿಕೆಯಲ್ಲಿ ನಿಂತ ಮುಖ್ಯಮಂತ್ರಿ ಯಡಿಯೂರಪ್ಪ ಅರ್ಜುನ ಹೊತ್ತ ಚಿನ್ನದ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ಜಂಬೂಸವಾರಿಗೆ ಚಾಲನೆ ನೀಡಿದರು. ಸಂಜೆ 6.15ಕ್ಕೆ ಜಂಬೂಸವಾರಿ ಬನ್ನಿಮಂಟಪ ತಲುಪಿತು.

 

 

==============================

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ವೈಭವ. ಗಜಪಡೆಯ ಕೇಂದ್ರಬಿಂದು ಅರ್ಜುನ ಮೇಲೆ ವಿರಾಜಮಾನಳಾಗಿ ಕುಳಿತು ಸಾಗುವ ನಾಡದೇವತೆ ಚಾಮುಂಡಿ ದೇವಿಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುವ ಅಸಂಖ್ಯಾತ ಜನರ ಹರ್ಷೋದ್ಘಾರ. ಅರಮನೆ ಮೈದಾನದಿಂದ ಬನ್ನಿಮಂಟಪದ ಮೈದಾನದವರೆಗೂ ಮೇಳೈಸುವ ಕಲಾ ವೈಭವ, ಸಾಂಸ್ಕೃತಿಕ ಮೆರಗು ಹೀಗೆ ಮುಂತಾದ ಕ್ಷಣಗಳ ಕ್ಷಣ ಕ್ಷಣದ ಚಿತ್ರಣ ವಿಜಯವಾಣಿಯಲ್ಲಿ.

7.9PM: ರಾಜ್ಯಪಾಲರಿಂದ ಗೌರವ ವಂದನೆ ಸ್ವೀಕಾರ.

7.7PM- ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ಆರಂಭ.

7.3PM- ಅಂಬಾರಿ ಹೊತ್ತ ಅರ್ಜುನನಿಗೆ ಪೊಲೀಸ್​ ಇಲಾಖೆಯಿಂದ ಗೌರವ ಸಲ್ಲಿಸಲಾಯಿತು. 

7.1PM- ಬನ್ನಿ ಮಂಟಪ ತಲುಪಿದ ಜಂಬೂಸವಾರಿ

6.08 PM- ನಾಡದೇವಿಗೆ ಪೂಜೆ
ಜಂಬೂ ಸವಾರಿಯ ಮಾರ್ಗದ ಮಧ್ಯೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಹಾಗೂ ಮಂಜುನಾಥ ದೇವಸ್ಥಾನ ಸಮಿತಿ ವತಿಯಿಂದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು.

6.07 PM- ಜಂಬೂ ಸವಾರಿ ವೀಕ್ಷಣೆಗೆ ಜನ ಸಾಗರ

 

5.32 PM- ಸೆಲ್ಫಿ ತೆಗೆದುಕೊಂಡು ಸಂಭ್ರಮ
ತಮ್ಮ ಮೊಬೈಲ್ ಫೋನ್​ನಲ್ಲಿ ಜಂಬೂ ಸವಾರಿಯನ್ನು ಚಿತ್ರೀಕರಿಸಿದರು. ಕೆಲವರು ಸೆಲ್ಫಿಯನ್ನೂ ತೆಗೆದುಕೊಂಡರು. ಜಂಬೂ ಸವಾರಿ ನೋಡಿದ ಖುಷಿಯಲ್ಲಿ ಕಿರುಚಾಡಿದರು.. ನಮಸ್ಕರಿಸಿದರು.

5.31 PM- ಜಂಬೂ ಸವಾರಿ ವೀಕ್ಷಣೆಗೆ ಜನ ಸಾಗರ
ರಸ್ತೆ ಬದಿಯಲ್ಲಿ, ಕಟ್ಟಡಗಳ ಮೇಲೆ, ಮರಗಳ ಮೇಲೆ, ರಸ್ತೆ ಬದಿಯಲ್ಲಿ ನಿಲ್ಲಿಸಿದ ವಾಹನಗಳ ಮೇಲೆ ಜನರು ಕೂತು ಜಂಬೂಸವಾರಿ ಕಣ್ತುಂಬಿಕೊಂಡರು. ಜಂಬೂ ಸವಾರಿ ಹತ್ತಿರ ಬರುತ್ತಿದ್ದಂತೆ ತಾಯಿ ಚಾಮುಂಡೇಶ್ವರಿಗೆ ಕೈ ಮುಗಿದು ಭಕ್ತಿ ಮೆರೆದರು. ನಾಡದೇವತೆ ತಾಯಿ ಚಾಮುಂಡೇಶ್ವರಿ ಹಾಗೂ ಅಂಬಾರಿ ಆನೆ ಅರ್ಜುನನಿಗೆ ಜೈ ಕಾರ ಕೂಗಿದರು.

5.30 PM- ಜಂಬೂ ಸವಾರಿ ವೀಕ್ಷಣೆಗೆ ಜನ ಸಾಗರ
ಆರ್ಯವೇದಿಕ್ ವೃತ್ತದಿಂದ ಬನ್ನಿಮಂಟಪ ವೃತ್ತದವರೆಗೆ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಜನಸಾಗರವೇ ನೆರೆದಿದೆ.. ಈ ಬಾರಿ ಹಿಂದಿಗಿಂತ ಹೆಚ್ಚು ಮಂದಿ ಸೇರಿದ್ದಾರೆ. ಆಯುರ್ವೇದಿಕ್ ವೃತ್ತದಿಂದ ಬನ್ನಿಮಂಟಪದವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು.

5.17 PM- ಕುಳಿತಲ್ಲೇ ನೃತ್ಯ
ಅರಮನೆಯಿಂದ ಆಯುರ್ವೇದ ಕಾಲೇಜು ವೃತ್ತದವರೆಗೂ ಕಲಾತಂಡಗಳು ನೃತ್ಯ ಪ್ರದರ್ಶನ ಮಾಡುತ್ತಿದ್ದರೆ ಇತ್ತ ಸಾರ್ವಜನಿಕರು ಕುಳಿತಲ್ಲೇ ನೃತ್ಯ ಮಾಡಿದರು. ಇದನ್ನು ಗಮನಿಸುತ್ತಿದ್ದ ಕೆಲ ಕಲಾವಿದರು ಇನ್ನು ಹೆಚ್ಚಿನ ಪೋತ್ಸಾಹ ನೀಡುತ್ತಿದ್ದರು. ಜತೆಗೆ ತಮಟೆ, ಡೊಳ್ಳು, ನಗಾರಿಗಳನ್ನು ಬಾರಿಸಿ ಸಂಭ್ರಮಿಸಿದರು. ಸಾರ್ವಜನಿಕರು ಕಲಾವಿದರು ಮತ್ತು ಸ್ತಬ್ಧಚಿತ್ರಗಳೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡರು.

5.15 PM- ವಾಲಿದ ಅಂಬಾರಿ
ಜಂಬೂ ಸವಾರಿ ಮೆರವಣಿಗೆಯ ಆರಂಭದಲ್ಲೇ ಅಂಬಾರರಿ ಎಡಭಾಗಕ್ಕೆ ವಾಲಿದ್ದು, ಬೀಳದಂತೆ ಹಗ್ಗಕಟ್ಟಲಾಗಿದೆ‌.

5.12 PM- ಮೇಯರ್ ಕುದುರೆ ಸವಾರಿ

4.52 PM- ಮೇಯರ್ ಕುದುರೆ ಸವಾರಿ
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್ ಮತ್ತು ಮೇಯರ್ ಪುಷ್ಪಲತಾ ಜಗನ್ನಾಥ್ ಮೊದಲ ಬಾರಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದರು. ಜತೆಗೆ ಸಾರ್ವಜನಿಕರ ಕಡೆ ಕೈಬೀಸಿ ಶುಭ ಕೋರಿದರು.

4.46 PM- ಪಾರಂಪರಿಕ ಕಟ್ಟಡದ ಮೇಲೆ ಜನ ಜಂಗುಳಿ
ವಿಶ್ವೇಶ್ವರಯ್ಯ ಭವನ ಮತ್ತು ಕೆಎಸ್ ಆರ್ ಟಿಸಿ ಕಟ್ಟಡ ಬಿಟ್ಟಿ ಎಲ್ಲ ಕಡೆ ಜನ ಇದ್ದರು. ಶಿಥಿಲಾವಸ್ಥೆಯಲ್ಲಿರುವ ಚಾಮುಂಡೇಶ್ವರಿ ಚಿತ್ರಮಂದಿರ ಕಟ್ಟಡ ಸೇರಿ ಹೆಚ್ಚಿನ ಹಳೆಯ ಕಟ್ಟಡಗಳ ಮೇಲೆ ಕುಳಿತು, ನಿಂತು ಜಂಬೂ ಸವಾರಿ ನೋಡಿದರು. ಕಟ್ಟಡಗಳ ಮೇಲೆ ಹತ್ತಿದ್ದ ಜನರನ್ನು ಇಳಿಸಲು ಪೊಲೀಸರು ಹರಸಾಹಸಪಟ್ಟರು. ಪೊಲೀಸರ ಯಾವುದೇ ಬೆದರಿಕೆಗೂ ಜಗ್ಗದ ಜನ ಅಲ್ಲಿಯೇ ನಿಂತು ಜಂಬೂ ಸವಾರಿ ನೋಡಿದರು.

4.44 PM- ಪಾರಂಪರಿಕ ಕಟ್ಟಡದ ಮೇಲೆ ಜನ ಜಂಗುಳಿ
‘ಪಾರಂಪರಿಕ ಕಟ್ಟಡಗಳ ಮೇಲೇರಿ ಜಂಬೂಸವಾರಿ ವೀಕ್ಷಣೆಯನ್ನು ಅನೇಕ ವರ್ಷಗಳಿಂದ ನಿಷೇದಿಸಲಾಗಿದೆ. ಆದರೂ ಜಂಬೂ ಸವಾರಿ ಸಾಗಿದ ಒಂದೆರಡು ಕಟ್ಟಡಗಳನ್ನು ಬಿಟ್ಟಿ ಬಹುತೇಕ ಎಲ್ಲ ಪಾರಂಪರಿಕ ಕಟ್ಟಡದ ಮೇಲೆ ಜನರು ತುಂಬಿದ್ದರು. ಶಿಥಿಲಗೊಂಡಿರುವ ದೇವರಾಜ ಮಾರುಕಟ್ಟೆ ಕಟ್ಟಡ, ಲ್ಯಾನ್ಸ್ ಡೌನ್, ಕೆ.ಆರ್. ವೃತ್ತದ ಪಾಲಿಕೆ ಕಟ್ಟಡಗಳ ಉದ್ದಕ್ಕೂ ಜನ ಇದ್ದರು. ಇನ್ನು ದೇವರಾಜ ಮಾರುಕಟ್ಟೆ ಕಟ್ಟಡ ಎಲ್ಲ ಭಾಗದಲ್ಲೂ ತುಂಬಿ ತುಳುಕಿದ್ದರು.

4.18 PM- ಸಿಎಂ ಬಿ.ಎಸ್​. ಯಡಿಯೂರಪ್ಪ ಪುಷ್ಪಾರ್ಚನೆ
ಅರ್ಜುನ ಹೊತ್ತಿದ್ದ 750 ಕೆ.ಜಿ. ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸಿಎಂ ಬಿ.ಎಸ್​. ಯಡಿಯೂರಪ್ಪ ಜಂಬೂ ಸವಾರಿಗೆ ಚಾಲನೆ ನೀಡಿದರು.

4.10 PM- ಮರದ ಕೊಂಬೆ ಮುರಿದು ಒಬ್ಬನಿಗೆ ಗಾಯ
ಜಂಬೂ ಸವಾರಿ ವೀಕ್ಷಿಸಲು ಮರದ ಮೇಲೆ ಹತ್ತಿದ್ದ ವ್ಯಕ್ತಿ, ಕೊಂಬೆ ಮುರಿದು ಬಿದ್ದಿದ್ದರಿಂದ ಕೆಳಬಿದ್ದಿದ್ದಾನೆ. ಇದರಿಂದ ಆತನಿಗೆ ಗಾಯವಾಗಿದೆ. ಮೈಸೂರು ತಾಲೂಕಿನ ಉದಗಳ್ಳಿಯ ಪ್ರಕಾಶ್​ ಗಾಯಗೊಂಡವ

4.05 PM-ಪೊಲೀಸರ ಲಘು ಲಾಠಪ್ರಹಾರ

4.05 PM-  ಪೊಲೀಸರ ಸಹಾಯ
ಮಹಿಳೆಯರನ್ನು ಪುರುಷರ ಗ್ಯಾಲರಿಯಿಂದ ಬೇರ್ಪಡಿಸಿ ಆರಾಮವಾಗಿ ಜಂಬೂ ಸವಾರಿ ವೀಕ್ಷಿಸಲು ಪೊಲೀಸರು ಅನುವು ಮಾಡಿಕೊಟ್ಟರು. ಜತೆಗೆ ನೂಕುನುಗ್ಗಲಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ರಕ್ಷಿಸಿದರು. ಅವರನ್ನು ಬೇರೆ ಕಡೆ ಕೂರಿಸಿದರು. ಇನ್ನು ಚಿಕ್ಕ ಗಡಿಯಾರದ ಬಳಿ ನೂಕುನುಗ್ಗಲು ಜೋರಾಗಿತ್ತು.

4.04 PM- ಬ್ಯಾರಿಕೇಡ್​ ಜಿಗಿಯಲು ಯತ್ನಿಸಿದ ಜನತೆ
ಚಾಮುಂಡೇಶ್ವರಿ ಸಿನಿಮಾ ಮಂದಿರದ ಪಕ್ಕದ ರಸ್ತೆಗೆ ಹೋಗದಂತೆ ತಡೆಯಲು ನಿರ್ಮಿಸಿದ್ದ ಬ್ಯಾರಿಕೇಡ್ ಹತ್ತಿದ ಜನರು ಜಿಗಿಯಲು ಪ್ರಯತ್ನಿಸಿದರು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ನಿಯಂತ್ರಿಸಿದರು.

4.03 PM-  ಭಾರಿ ನೂಕುನುಗ್ಗಲು
ಜಂಬೂ ಸವಾರಿ ಸಾಗುವ ಮಾರ್ಗವಾದ ಸಯ್ಯಾಜಿ ರಾವ್ ರಸ್ತೆಯ ಚಿಕ್ಕ ಗಡಿಯಾರ ಮತ್ತು ಚಾಮುಂಡೇಶ್ವರಿ ಚಿತ್ರಮಂದಿರದ ಬಳಿ ಭಾರಿ ನೂಕುನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

4.00 PM- ಗದಗ ಜಿಲ್ಲಾ ಸ್ತಬ್ಧಚಿತ್ರ

3.57 PM- ಅಂಬಾರಿ ಹೊತ್ತ ಅರ್ಜುನನ ಆಗಮನ
ನಾಡದೇವತೆ ಚಾಮುಂಡೇಶ್ವರಿಯನ್ನು ಕೂರಿಸಲಾಗಿರುವ ಅಂಬಾರಿ ಹೊತ್ತ ಅರ್ಜುನ ಅರಮನೆ ಆವರಣಕ್ಕೆ ಆಗಮಿಸುತ್ತಿದ್ದಾನೆ. ಕೆಲವೇ ಕ್ಷಣಗಳಲ್ಲಿ ಪುಷ್ಪಾರ್ಚನೆ ಮೂಲಕ ಸಿಎಂ ಬಿ.ಎಸ್​. ಯಡಿಯೂರಪ್ಪ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.

3.55 PM- ಹಾಸನ ಸ್ತಬ್ಧ ಚಿತ್ರ

3.52 PM- 28 ಕಡೆ ಎಲ್​ಸಿಡಿ ಪರದೆಗಳು
ಜಂಬೂ ಸವಾರಿಯ ಆಕರ್ಷಣೆಯಾಗಿ ಚಂದನ ವಾಹಿನಿಯು ನಗರದಲ್ಲಿ 28 ಕಡೆ ಎಲ್.ಸಿ.ಡಿ ಪರದೆಗಳನ್ನು ಅಳವಡಿಸಿದೆ. ಕೆ.ಆರ್. ವೃತ್ತದ ಬಳಿ 4 ಪರದೆಗಳಿದ್ದು, ಸಯ್ಯಾಜಿ ರಾವ್ ರಸ್ತೆ ಮಾರ್ಗವಾಗಿ ಬನ್ನಿಮಂಟಪದವರೆಗೆ ಒಟ್ಟು 28 ಪರದೆಗಳನ್ನು ಅಳವಡಿಸಲಾಗಿದೆ. ಅರಮನೆಯಿಂದ ಚಂದನವಾಹಿನಿಯು ನೇರ ಪ್ರಸಾರ ಮಾಡಲಿದ್ದು, ಈ ಪರದೆಗಳನ್ನು ಜನತೆಯು ಜಂಬೂ ಸವಾರಿಯ ಪ್ರತಿಕ್ಷಣ ವೀಕ್ಷಿಸಬಹುದಾಗಿದೆ. ಕನ್ನಡದಲ್ಲಿ ವೀಕ್ಷಕರ ವಿವರಣೆ ನೀಡಲಾಗುತ್ತಿದೆ‌.


3.50 PM- ಕಲಾತಂಡದ ಪ್ರದರ್ಶನ

3.43 PM- ಕಲಾತಂಡದ ಪ್ರದರ್ಶನ

3.33 PM- ಜಂಬೂಸವಾರಿ ವೀಕ್ಷಿಸಲು ಸೇರಿರುವ ಜನಸ್ತೋಮ

3.31 PM- 36 ರಾಷ್ಟ್ರಗಳಿಂದ ಬಂದಿರುವ ವಿದೇಶಿಗರು
ಬ್ರಿಟನ್​, ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್​ ಸೇರಿ 36 ರಾಷ್ಟ್ರಗಳ ಪ್ರಜೆಗಳು ಜಂಬೂ ಸವಾರಿ ವೀಕ್ಷಣೆಗೆ ಸಜ್ಜಾಗಿದ್ದಾರೆ. ವಿದೇಶಿಯರಿಗೆ ಅನುಕೂಲವಾಗುಂವತೆ ಜಂಬೂ ಸವಾರಿಯ ಮೆರವಣಿಗೆ ಬಗ್ಗೆ ಕನ್ನಡ, ಇಂಗ್ಲಿಷ್ ಎರಡರಲ್ಲೂ ವೀಕ್ಷಕ ವಿವರಣೆ ನೀಡಲಾಗುತ್ತಿದೆ.

3.28 PM- 2 ಸಾವಿರ ವಿದೇಶಿ ಪ್ರವಾಸಿಗರಿಗೆ ಕೂರಲು ಅವಕಾಶ
ಕಲ್ಪವೃಕ್ಷ ಟ್ರಸ್ಟ್ ಮತ್ತು ಜನಚೇತನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯುರ್ವೇದ ಕಾಲೇಜು ವೃತ್ತದಲ್ಲಿ 2 ಸಾವಿರ ವಿದೇಶಿ ಪ್ರವಾಸಿಗರಿಗೆ ಕೂರಲು ಅವಕಾಶ ಕಲ್ಪಿಸಲಾಗಿದೆ. ಅದೇ ಸ್ಥಳದಲ್ಲಿ 1500ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ಮತ್ತು ಹಿರಿಯ ನಾಗರಿಕರು ಜಂಬೂ ಸವಾರಿ ವೀಕ್ಷಿಸಲಿದ್ದಾರೆ. ಅಂಗವಿಕಲ ಮಕ್ಕಳಿಗೆ ವೇದಿಕೆ ವತಿಯಿಂದಲೇ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮತ್ತು ವಿದೇಶಿಗರಿಗೆ ಕುಡಿಯಲು ನೀರು ಮತ್ತು ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿದೆ.

3.26 PM- ಕಲಾತಂಡಗಳ ಪ್ರದರ್ಶನ

3.22 PM- ಚಿಕ್ಕಮಗಳೂರಿನ ಸ್ತಬ್ಧಚಿತ್ರ

3.19 PM- ವಿವಿಧ ಕಲಾತಂಡಗಳಿಂದ ಅರಮನೆ ಆವರಣದಲ್ಲಿ ಪ್ರದರ್ಶನ

3.14 PM- ಸ್ತಬ್ಧಚಿತ್ರಗಳ ವಿವರ

ದಾವಣಗೆರೆ: ಬಾಲಾಕೋಟ್​ ಏರ್​ ಸ್ಟ್ರೈಕ್​; ಚಿಕ್ಕಮಗಳೂರು: ಶಿಶಿಲ ಬೆಟ್ಟ; ಬೀದರ್​: ಫಸಲ್​ ಭೀಮಾ ಯೋಜನೆ; ಚಿತ್ರದುರ್ಗ: ಹೆಣ್ಣು ಭ್ರೂಣ ಹತ್ಯೆ; ದಕ್ಷಿಣ ಕನ್ನಡ: ಮಂಗಳಾದೇವಿ ಮತ್ತು ಪಟ್ರೋಲಿಯೋಂ ಬಾಗಲಕೋಟೆ: ಅತಿವೃಷ್ಠಿ; ಬೆಂಗಳೂರು: ಇಸ್ರೋ ಚಂದ್ರಯಾನ- 2; ಶಿವಮೊಗ್ಗ: ಫಿಟ್​ ಇಂಡಿಯಾ
ಯಾದಗಿರಿ: ಅಂಬಿಗರ ಚೌಡಯ್ಯ; ಕಲಬುರಗಿ: ಆಯುಷ್ಮಾನ್​ ಭಾರತ; ಧಾರವಾಡ: ಸಾಂಸ್ಕೃತಿಕ ವೈಭವ
ಹಾವೇರಿ: ಕನಕದಾಸರ ಸ್ಥಬ್ಧ ಚಿತ್ರ; ಗದಗ: ಬೇಟಿ ಬಚಾವೋ ಬೇಟಿ ಪಡಾವೋ; ಹಾಸನ: ಎತ್ತಿನ ಹೊಳೆ ಯೋಜನೆ; ಉಡುಪಿ: ಶ್ರೀಕೃಷ್ಣ ಮಠ; ಕೊಡಗು: ಗುಡ್ಡ ಕುಸಿತ ಕುರಿತು ಜಾಗೃತಿ; ಕೊಪ್ಪಳ: ಗವಿಸಿದ್ದೇಶ್ವರ ಬೆಟ್ಟ
ತುಮಕೂರು: ಸಮಗ್ರ ಕೃಷಿ ಪದ್ಧತಿ ಮತ್ತು ನಡೆದಾಡುವ ದೇವರು; ಕೋಲಾರ: ಅಂತರಗಂಗೆ ವೌಭವದ ಚಿತ್ರ
ಬೆಳಗಾವಿ: ಅತಿವೃಷ್ಠಿ ಹಾಗೂ ಪ್ರವಾಹ ಕಾರ್ಯ; ಬಳ್ಳಾರಿ: ಹಂಪಿ ವಾಸ್ತುಶಿಲ್ಪ; ಚಾಮರಾಜನಗರ: ಹುಲಿಯ ಸಂತೃಪ್ತ ತಾಣ; ಮಂಡ್ಯ: ಆದಿ ಚುಂಚನಗಿರಿ ಮಠ; ಚಿಕ್ಕಬಳ್ಳಾಪುರ: ರೇಷ್ಮೆ ಮತ್ತು ಎಚ್​ ನರಸಿಂಹಯ್ಯ
ಉತ್ತರ ಕನ್ನಡ: ಮಧುಕೇಶ್ವರ ದೇವಸ್ಥಾನ ಬನವಾಸಿ; ಬೆಂಗಳೂರು ಗ್ರಾಮಾಂತರ: ಸ್ವಚ್ಛತೆಯ ಕಡೆಗೆ ನಮ್ಮ ನಡಿಗೆ; ಕೊಡಗು: ಗುಡ್ಡ ಕುಸಿತ; ಕೋಲಾರ: ಅಂತರಗಂಗೆ; ವಾರ್ತಾ ಇಲಾಖೆ: ಸರ್ಕಾರದ ಸೌಲಭ್ಯಗಳು
ಮೈಸೂರು ವಿವಿ: ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆ; ಮೈಸೂರು ಜಿ.ಪಂ: ಜೆಎಸ್​ಎಸ್​ ಮಠ; ವಿಜಯಪುರ: ಫ.ಗು. ಹಳಕಟ್ಟಿ; ಸ್ತಬ್ಧಚಿತ್ರ ಉಪಸಮಿತಿ: ಮೆಮೋ ರೈಲು; ಚಿಕ್ಕಬಳ್ಳಾಪುರ: ರೇಷ್ಮೆ ಮತ್ತು ಎಚ್​ ನರಸಿಂಹಯ್ಯ

3.12 PM- ಅರಮನೆಯಿಂದ ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭ. 30 ಜಿಲ್ಲೆಗಳ ಒಟ್ಟು 30 ಹಾಗೂ ವಿವಿಧ ಇಲಾಖೆ, ಸಮಿತಿಗಳ 8 ಸ್ತಬ್ಧಚಿತ್ರಗಳ ಸಾಲು

2:46 PM- ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಕಿಕ್ಕಿರಿದು ನಿಂತಿರುವ ಜನಸಾಗರ

2:38 PM- 30 ಜಿಲ್ಲೆಗಳಿಂದ 30 ಸ್ಥಬ್ಧ ಚಿತ್ರಗಳು ಸೇರಿದಂತೆ ಒಟ್ಟು 38 ಸ್ಥಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. 

ಮರದ ಮೇಲೆ ಕುಳಿತುಕೊಳ್ಳಬೇಡಿ ಎಂದು ಹೇಳಿದ್ದರೂ ಕ್ಯಾರೆ ಎನ್ನದೇ ಮರವನ್ನೇರಿರುವ ಜನರು

2:34 PM- 38 ಕಲಾತಂಡಗಳಿಂದ ಕಲಾ ಪ್ರದರ್ಶನ ನಡೆಯುತ್ತಿದ್ದು, ಅರಮನೆಯಲ್ಲಿ ಸಾಂಸ್ಕೃತಿಕ ವೈಭವ ಕಳೆಗಟ್ಟಿದೆ.

2:33 PM- ಅರಮನೆ ಆವರಣದ ಒಳಗಡೆ ಆಕರ್ಷಕ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆಯುತ್ತಿದೆ.

2:29 PM- ವಾಸವಿ ಯುವಜನ ಸಂಘದಿಂದ ಕಳೆದ 15 ವರ್ಷದಿಂದ ಕುಡಿಯುವ ನೀರು, ಐಸ್ ಕ್ರೀಮ್, ಬಿಸ್ಕೇಟ್​ ವಿತರಣೆ ಮಾಡಿಕೊಂಡು ಬರುತ್ತಿದೆ. ಇದೀಗ 5 ಸಾವಿರ ಬಾಟಲ್ ನೀರು ವಿತರಣೆ. ಕಲಾ ತಂಡ ಮತ್ತು ಪೊಲೀಸರಿಗೆ 10 ಸಾವಿರ ಐಸ್ ಕ್ರೀಮ್, ಬನ್ನು ಹಾಗೂ ಬಿಸ್ಕೇಟ್​ ವಿತರಣೆ ಮಾಡಲಾಗುತ್ತಿದೆ.

2:27 PM- ಶ್ರೀರಾಜೇಶ್ವರ್ ಪಟೇಲ್ ಗ್ರೂಪ್ ವತಿಯಿಂದ ಜಂಬೂ ಸವಾರಿಯಲ್ಲಿ ಭಾಗವಹಿಸಿರುವ ಪೊಲೀಸ್, ಪೌರ ಕಾರ್ಮಿಕರು, ಜನರು ಹಾಗೂ ಸ್ವಯಂ ಸೇವಕರಿಗೆ ಉಚಿತವಾಗಿ ನೀರು ವಿತರಿಸಲಾಗುತ್ತಿದೆ. ಒಂದು ಆಟೋದಲ್ಲಿ ಅರ್ಧ ಲೀಟರ್​ನ 8 ಸಾವಿರ ನೀರಿನ ಬಾಟಲ್ ವಿತರಿಸಲು ಮುಂದಾಗಿದ್ದಾರೆ.

2:23 PM- ಜಂಬೂಸವಾರಿ ಮೆರವಣಿಗೆ ಸಾಗುವ ಸಯ್ಯಜಿರಾವ್ ರಸ್ತೆಯಲ್ಲಿ ನಗರ ಪಾಲಿಕೆಯಿಂದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಮಾರ್ಗದ ಸ್ವಚ್ಛತೆಗಾಗಿ 450ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ. ಪೌರಕಾರ್ಮಿಕರು ಆನೆ ಲದ್ದಿ, ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾಪಾಡಲಿದ್ದಾರೆ. ಮಾರ್ಗದಲ್ಲಿ ಯುಜಿಡಿ ಸಮಸ್ಯೆ ಕಂಡುಬಂದರೆ ತಕ್ಷಣ ಸರಿಪಡಿಸಲು ನಾಲ್ಕು ಸಕ್ಕಿಂಗ್ ಆ್ಯಂಡ್ ಜಟ್ಟಿಂಗ್ ಮಿಷನ್‌ ಅನ್ನು ಕೂಡ ನಿಯೋಜಿಸಲಾಗಿದೆ. ಕಸ ತುಂಬಲು 4 ಆಟೋ, 2 ಲಾರಿಯನ್ನು ನಿಯೋಜಿಸಲಾಗಿದೆ‌. ಹೆಜ್ಜೆ ಹೆಜ್ಜೆಗೂ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

2:19 PM- ಮರಗಳ ಮೇಲೆ ಹಾಗೂ ಪಾರಂಪರಿಕ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸಬಾರದು ಎಂದು ದಸರಾ ವಿಶೇಷಾಧಿಕಾರಿ ಅಭಿರಾಮ್ ಜಿ.ಶಂಕರ್, ಪಾಲಿಕೆ ಮತ್ತು ಪೊಲೀಸ್ ಇಲಾಖೆಯಿಂದ ಸೂಚನೆ ನೀಡಿದ್ದರೂ, ಇದನ್ನು ಮೀರಿದ ಜನರು ಮರ ಹಾಗೂ ಹಳೇ ಕಟ್ಟಡಗಳ ಮೇಲೆ ಕುಳಿತು ಬಂಬೂ ಸವಾರಿ ವೀಕ್ಷಣೆ ಮಾಡಲು ಸಿದ್ಧರಾಗಿದ್ದಾರೆ.

2:18 PM- ದಸರಾ ಜಂಬೂ ಸವಾರಿ ಮೆರವಣಿಗೆ ವೀಕ್ಷಿಸಲು ನಟಿ ಶ್ರುತಿ ಹಾಗೂ ನಟ ಶರಣ ಕುಟುಂಬ ಸಮೇತ ಅರಮನೆ ಆವರಣಕ್ಕೆ ಆಗಮಿಸಿದರು. ಅವರು ಆಗಮಿಸುತ್ತಿದ್ದಂತೆ ಸಾರ್ವಜನಿಕರು ಫೋಟೋ, ಸೆಲ್ಫಿಗಾಗಿ‌ ಮುಗಿಬಿದ್ದರು.

2:16 PM- ಅಗ್ನಿಶಾಮಕ ಮತ್ತು ತುರ್ತು ಸೇವೆಗಳ 6 ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಸೇರಿದಂತೆ 120 ಸಿಬ್ಬಂದಿಯನ್ನು ಜಂಬೂ ಸವಾರಿ ಮೆರವಣಿಗೆಯಲ್ಲಿ ನಿಯೋಜಿಸಲಾಗಿದೆ. 12 ಜಲವಾಹನ, 6 ಕ್ಷಿಪ್ರ ಸ್ಪಂದನ ವಾಹನ ಸೇರಿದಂತೆ ವಿವಿಧ ಸೇವೆಯ 29 ತುರ್ತ ಸೇವಾವಾಹನ ನಿಯೋಜಿಸಲಾಗಿದೆ.

2:14 PM- ನಿಗದಿತ ಮೂಹರ್ತಕ್ಕೂ ಮುನ್ನವೇ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್​ವೈ.

2:07 PM- ಅರಮನೆಯ ಆನೆ ಶಿಬಿರದಿಂದ ಅರಮನೆ ಆವರಣಕ್ಕೆ ಆನೆಗಳನ್ನು ಕರೆತರುವ ಸಂದರ್ಭದಲ್ಲಿ ಧನಂಜಯ ಆನೆ ಜನಸ್ತೋಮ ಕಂಡು ಗಾಬರಿಗೊಂಡ. ತಕ್ಷಣ ಮಾವುತ ಆನೆಯನ್ನು ನಿಯಂತ್ರಣ ‌ಮಾಡುವಲ್ಲಿ ಯಶಸ್ವಿಯಾದರು.

2:05 PM- ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ.

ಮೈಸೂರಿಗೆ ಆಗಮಿಸುವ ಮುನ್ನ ಸುತ್ತೂರು ಮಠಕ್ಕೆ ಸಿಎಂ ಬಿಎಸ್​ವೈ ಭೇಟಿ ನೀಡಿದ ಕ್ಷಣ

Leave a Reply

Your email address will not be published. Required fields are marked *