ದಸರೆ ಸಂಭ್ರಮಕ್ಕೆ ಅಂತಿಮ ಕಸರತ್ತು

*ಭರದಿಂದ ಸಾಗಿದ ಅಂತಿಮ ಹಂತದ ಸಿದ್ಧತೆ*ನಗರದೆಲ್ಲೆಡೆ ಗರಿಗೆದರಿದ ದಸರಾ ಸಂಭ್ರಮ

ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ನಗರದೆಲ್ಲೆಡೆ ದಸರಾ ಸಂಭ್ರಮ ಗರಿಗೆದರತೊಡಗಿದೆ. ಈ ಹಿನ್ನೆಲೆಯ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಗುರುವಾರ ನಡೆಯಿತು.

ಅಧಿಕಾರಿಗಳ ಸಮ್ಮುಖದಲ್ಲಿ ಬೆಳಗ್ಗೆ 10ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1 ರವರೆಗೆ ನಡೆಯಿತು. ಅರಮನೆಯ ಭದ್ರತಾಕೋಣೆಯಲ್ಲಿ ಜೋಪಾನವಾಗಿದ್ದ ಸಿಂಹಾಸನವನ್ನು ಪ್ರಸಕ್ತ ವರ್ಷದ ಉತ್ಸವಕ್ಕೆ ಸಿದ್ಧಪಡಿಸಲಾಯಿತು. ಗೆಜ್ಜನಹಳ್ಳಿಯ ನಿವಾಸಿಗಳು ಈ ಸಿಂಹಾಸನದ ಬಿಡಿಭಾಗಗಳನ್ನು ಜೋಡಿಸಲು ನೆರವಾದರು. ಬಳಿಕ ವಿಧಿವತ್ತಾಗಿ ಪೂಜೆ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ನವರಾತ್ರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಂಹಾಸನದ ದರ್ಶನ ಲಭ್ಯವಾಗಲಿದೆ.

ಸಂಜೆ ಮಾನಸಗಂಗೋತ್ರಿ ಬಯಲುರಂಗಮಂದಿರದಲ್ಲಿ 5ನೇ ದಿನದ ಯುವ ಸಂಭ್ರಮದಲ್ಲಿ ವಿವಿಧ ಕಾಲೇಜು ತಂಡಗಳು ನೃತ್ಯ, ಹಾಡುಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವು. ನೃತ್ಯದ ಮೂಲಕ ಕನ್ನಡ ಸಂಸ್ಕೃತಿ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಸಂಕರಕ್ಷಣೆ, ಜಾನಪದ ಕಲೆ, ಮಹಿಳಾ ಸಬಲೀಕರಣದ ಬಗ್ಗೆ ಅರಿವು ಮೂಡಿಸಿದರು.

ನಗರದಲ್ಲಿ ದಸರಾ ಹಬ್ಬದ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ನಗರದ ಎಲ್ಲ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆ ಸೇರಿ ನಗರದ ಎಲ್ಲ ಪಾರಂಪರಿಕ ಕಟ್ಟಡಗಳು ಸಿಂಗಾರಗೊಳ್ಳುತ್ತಿವೆ. ನಗರದ ಪ್ರಮುಖ ಬೀದಿಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.

ಇಂದು ಜಲಸಾಹಸ ಕ್ರೀಡೆ ಉದ್ಘಾಟನೆ
ಇಷ್ಟು ವರ್ಷ ದಸರಾ ಮಹೋತ್ಸವದ 9 ದಿನಗಳು ಮಾತ್ರ ಜಲಕ್ರೀಡೆಗಳು ನಡೆಯುತ್ತಿದ್ದವು. ಈ ವರ್ಷದಿಂದ ವರ್ಷಪೂರ್ತಿ ‘ಜಲ ಸಾಹಸ ಕ್ರೀಡೆ’ ಆಯೋಜಿಸುತ್ತಿರುವುದು ಸಾಹಸ ಕ್ರೀಡಾಸಕ್ತರಲ್ಲಿ ಸಂಭ್ರಮ ಹೆಚ್ಚಿಸಿದೆ.
ನಾಡಹಬ್ಬ ದಸರಾ ಆಚರಣೆ ಜತೆಗೆ ವರ್ಷಪೂರ್ತಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಮುಂದಾಗಿರುವ ಜಿಲ್ಲಾಡಳಿತ ಈ ವರ್ಷದಿಂದ ವರ್ಷ ಪೂರ್ತಿ ತಿ.ನರಸೀಪುರ ರಸ್ತೆಯ ವರುಣ ಕೆರೆಯಲ್ಲಿ ಜಲಕ್ರೀಡೆ ಆಯೋಜಿಸಿದೆ. ಮೈಸೂರಿನ ಔಟ್ ಬ್ಯಾಕ್ ಎಂಬ ಸಾಹಸ ಕ್ರೀಡಾ ಸಂಸ್ಥೆಗೆ ಪ್ರವಾಸೋದ್ಯಮ ಇಲಾಖೆ ತಿ.ನರಸೀಪುರ ರಸ್ತೆಯ ವರುಣ ಕೆರೆಯಲ್ಲಿ ವರ್ಷಪೂರ್ತಿ ‘ಜಲ ಸಾಹಸ ಕ್ರೀಡೆ’ ಆಯೋಜಿಸಲು ಟೆಂಡರ್ ನೀಡಿದೆ. ಟೆಂಡರ್ ಪಡೆದಿರುವ ಔಟ್ ಬ್ಯಾಕ್ ಸಂಸ್ಥೆ ‘ಜಲ ಸಾಹಸ ಕ್ರೀಡೆ’ ಆಯೋಜಿಸುವ ಸಂಬಂಧ ಈಗಾಗಲೇ ವರುಣ ಕೆರೆಯಲ್ಲಿ ಸಿದ್ಧತೆ ಕೈಗೊಂಡಿದೆ. ಅ.5 ರಂದು ‘ಜಲ ಸಾಹಸ ಕ್ರೀಡೆ’ಗೆ ಚಾಲನೆ ದೊರೆಯಲಿದೆ.

ಅ.7ಕ್ಕೆ ಟ್ರಯಥ್ಲಾನ್ ಸ್ಪರ್ಧೆ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಅ.7 ರಂದು ಟ್ರಯಥ್ಲಾನ್ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಗೆ ಸಿದ್ಧತೆ ನಡೆಯುತ್ತಿವೆ. ಈಜು, ಸೈಕ್ಲಿಂಗ್ ಹಾಗೂ ಓಟದ ವಿಭಾಗಗಳನ್ನು ಒಳಗೊಂಡಿರುವ ಟ್ರಯಥ್ಲಾನ್ ಸ್ಪರ್ಧೆಯನ್ನು ಪ್ರವಾಸೋದ್ಯಮ ಇಲಾಖೆ ಆಯೋಜಿಸಲಿದೆ. ಮೈಸೂರು ವಿಶ್ವವಿದ್ಯಾಲಯದ ಸರಸ್ವತಿಪುರಂ ಈಜುಕೊಳದಲ್ಲಿ ಈಜು ಸ್ಪರ್ಧೆ ನಡೆಯಲಿದೆ. ಬಳಿಕ ವಿವಿ ಆವರಣ, ಕುಕ್ಕರಹಳ್ಳಿ ಕೆರೆ ರಸ್ತೆ, ಹುಣಸೂರು ರಸ್ತೆಯಲ್ಲಿ ಸೈಕ್ಲಿಂಗ್ ಹಾಗೂ ಓಟದ ಸ್ಪರ್ಧೆಗಳು ನಡೆಯಲಿವೆ.