ಜಂಬೂ ಸವಾರಿ ಅದ್ದೂರಿ

ಮೈಸೂರು: ನಾಡಿನ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಮೇಳೈಸಿಕೊಂಡ ದಸರಾ ಜಂಬೂ ಸವಾರಿ ಸಿರಿವೈಭವವನ್ನು ದೇಶ, ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ವಿಜಯದಶಮಿ ಅಂಗವಾಗಿ ಶುಕ್ರವಾರ ನಡೆದ ಮೆರವಣಿಗೆಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಮೂರ್ತಿಯನ್ನು ಹೊತ್ತು ರಾಜಪಥದಲ್ಲಿ ಸಾಗಿದ ಗಜನಾಯಕ ಅರ್ಜುನ ಎಂದಿನಂತೆ ಜನಮನಸೂರೆಗೊಂಡ. ಅಧಿದೇವತೆ ಚಾಮುಂಡಿದೇವಿ ಕಂಡ ಲಕ್ಷಾಂತರ ಜನ ಭಕ್ತಿ-ಭಾವ ಪರವಶರಾಗಿ ತಾಯಿಗೆ ಉಘೕ ಉಘೕ ಎನ್ನುತ ಧನ್ಯತಾ ಭಾವ ತಳೆದರು. ಬಿರುಬಿಸಿಲನ್ನೂ ಲೆಕ್ಕಿಸದೇ ಅವರೆಲ್ಲ ಮೆರವಣಿಗೆ ದೃಶ್ಯವನ್ನು ಕಣ್ತುಂಬಿಕೊಂಡರು.

ಮೆರವಣಿಗೆ ಕೊನೆಯಲ್ಲಿ ರಂಗಪ್ರವೇಶ ಮಾಡುತ್ತಿದ್ದ ಅಂಬಾರಿಯನ್ನು ಈ ಸಲ ಮಧ್ಯದಲ್ಲೇ ಕರೆದೊಯ್ಯಲು ಅವಕಾಶ ಮಾಡಿಕೊಡುವ ಮೂಲಕ ರಾಜ್ಯ ಸರ್ಕಾರ ಸಂಪ್ರದಾಯವನ್ನು ಮುರಿದಿದ್ದು, ಕೆಲ ಅವ್ಯವಸ್ಥೆಗೆ ಕಾರಣವಾಯಿತು.

ರಾಜಮನೆತನ ಗೈರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಾಯಿ ಮತ್ತು ನಾದಿನಿ ವಿಜಯದಶಮಿ ದಿನವೇ ನಿಧನರಾದ ಹಿನ್ನೆಲೆಯಲ್ಲಿ ಸರ್ಕಾರಿ ದಸರಾದಲ್ಲಿ ರಾಜಮನೆತನದವರು, ಪ್ರತಿನಿಧಿಗಳು ಭಾಗವಹಿಸಲಿಲ್ಲ.

ದೇವಿಗೆ ಪುಷ್ಪ ನಮನ

ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಧ್ಯಾಹ್ನ 3ಕ್ಕೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಪೂಜೆ ಸಲ್ಲಿಸಿದರು. ನಂತರ ಸಂಜೆ 4.13ರ ಸುಮಾರಿಗೆ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಮೂರು ಬಾರಿ ಕನಕಾಂಬರ, ಮಲ್ಲಿಗೆ ಪುಷ್ಪಾರ್ಚನೆ ಮಾಡಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಪಿ.ಸುಬ್ರಮಣ್ಯೇಶ್ವರಾವ್ ಕೂಡ ಪುಷ್ಪ ಸಮರ್ಪಿಸಿದರು. ಮೇಯರ್ ಚುನಾವಣೆ ನಡೆಯದ ಕಾರಣಕ್ಕೆ ಮೈಸೂರಿನ ಪ್ರಥಮ ಪ್ರಜೆ ಇರಲಿಲ್ಲ. ಪುಷ್ಪಾರ್ಚನೆಗೂ ಕ್ಷಣ ಮುಂಚೆ ಪೊಲೀಸ್ ವಾದ್ಯ ತಂಡ ನುಡಿಸಿದ ಸುಶ್ರಾವ್ಯ ರಾಷ್ಟ್ರಗೀತೆಗೆ ಹಿಮ್ಮೇಳದಂತೆ ಸಿಡಿಸಿದ 21 ಕುಶಾಲು ತೋಪುಗಳು ಅರಮನೆಯ ಆವರಣದಲ್ಲಿ ಅನುರಣಿಸಿದವು.

ಕನ್ನಡದಲ್ಲಿ ಶುಭ ಕೋರಿದ ರಾಷ್ಟ್ರಪತಿ

ನವದೆಹಲಿ: ದೇಶದೆಲ್ಲೆಡೆ ಸಂಭ್ರಮದಿಂದ ದಸರಾ ಹಬ್ಬ ಆಚರಿಸಲಾಯಿತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರೆಸಿಡೆಂಟ್ ಆಫ್ ಇಂಡಿಯಾ ಟ್ವಿಟರ್ ಖಾತೆಯಲ್ಲಿ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಶುಭಾಶಯ ಹೇಳಿದ್ದು ವಿಶೇಷ. ‘ದೇಶದ ಜನತೆಗೆ ದಸರಾ ಹಬ್ಬದ ಶುಭಾಶಯಗಳು. ಸಮಾಜದಲ್ಲಿನ ದುಷ್ಟಶಕ್ತಿಗಳ ಮೇಲೆ ಶಿಷ್ಟಶಕ್ತಿಗಳ ಗೆಲುವಿನ ವಿಜಯೋತ್ಸವದ ಸಂಕೇತ ಈ ಹಬ್ಬ. ಸರ್ವರಿಗೂ ದಸರಾ ಶುಭ ತರಲಿ’ ಎಂದು ಕನ್ನಡದಲ್ಲಿ ಶುಭ ಕೋರಿದ್ದಾರೆ. ಪ್ರಧಾನಿ ಮೋದಿ, ಎಲ್ಲರಿಗೂ ವಿಜಯದಶಮಿ ಶುಭಾಶಯಗಳು ಎಂದು ಟ್ವೀಟ್ ಮಾಡಿದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಪ್ರತಿಯೊಬ್ಬರಿಗೂ ದಸರಾ ಹಬ್ಬದ ಶುಭಾಶಯಗಳು’ ಎಂದು ಟ್ವೀಟ್ಟಿಸಿದ್ದಾರೆ.

ಆನೆಗಳ ದಿಬ್ಬಣ

ನಂದಿ ಪೂಜೆಯೊಂದಿಗೆ ವೀರಭದ್ರನ ಕುಣಿತ ಪ್ರಾರಂಭವಾಯಿತು. ಬೆನ್ನಲ್ಲಿಯೇ ಮೆರವಣಿಗೆಯ ಮುಂಚೂಣಿಯಲ್ಲಿ ನಿಶಾನೆ ಆನೆ ಬಲರಾಮ, ನೌಪತ್ ಆನೆ ಅಭಿಮನ್ಯುವನ್ನು ವಿಜಯ, ಪ್ರಶಾಂತ್, ಧನಂಜಯ್, ದ್ರೋಣ, ಚೈತ್ರಾ, ಗೋಪಿ ಆನೆಗಳು ಅನುಸರಿಸಿದವು. ಪಟ್ಟದ ಆನೆ ವಿಕ್ರಮ್ ಹೆಜ್ಜೆ ಹಾಕಿತು. ಸಾಲಾನೆಗಳ ಹಿಂದೆಯೇ ಅಂದಾಜು 95 ಕಲಾತಂಡಗಳು, 90 ಸ್ತಬ್ಧ ಚಿತ್ರಗಳು ಸಾಗಿದವು. ಮುಂದಲೆ ಪಟ್ಟಿ, ಕತ್ತಿನ ಗಂಟೆ, ಕತ್ತಿನ ಸರ, ಸಿಂಗೋಟಿ, ಚಮರೀ ಬಾಲ, ವರ್ಣರಂಜಿತ ಛತ್ರಿ, ರೇಷ್ಮೆ ಕುಸುರಿಯ ಜೂಲಾಗಳಿಂದ ಅಲಂಕೃತಗೊಂಡ 12 ಆನೆಗಳ ಸೊಬಗನ್ನು ಜನರು ತದೇಕಚಿತ್ತದಿಂದ ವೀಕ್ಷಿಸಿದರು. ಅರಮನೆ ಆವರಣದಲ್ಲಿ ಪೂಜೆಗಾಗಿ ನಿರ್ವಿುಸಿದ್ದ ಅಟ್ಟಣಿಗೆಯತ್ತ ಎಡಕ್ಕೆ ವರಲಕ್ಷ್ಮಿಹಾಗೂ ಬಲಕ್ಕೆ ಕಾವೇರಿ ಕುಮ್ಕಿ ಆನೆಗಳೊಂದಿಗೆ ಸರ್ವಾಲಂಕೃತನಾಗಿ ಠೀವಿಯಿಂದ ಬಂದ 53ರ ಹರೆಯದ ಅರ್ಜುನ, 7ನೇ ಬಾರಿಗೆ ದಸರಾ ಅಂಬಾರಿ ಹೊತ್ತ ಹೆಗ್ಗಳಿಕೆಯೊಂದಿಗೆ ಪೂಜೆಗೆ ಸಹಕರಿಸಿದ. ಅರ್ಜುನನ ಸಾರಥಿ ಮಾವುತ ವಿನು 2ನೇ ಬಾರಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡರು.

ಗೊಂದಲ, ಅವ್ಯವಸ್ಥೆ ಗೂಡು

ವಿಜಯದಶಮಿ ಮೆರವಣಿಗೆ ಮಧ್ಯಾಹ್ನ 3.40ರಿಂದ 4.10ಕ್ಕೆ ನಿಗದಿಯಾಗಿತ್ತು. ಈ ಸಲ ಎರಡು ನಿಮಿಷ ತಡವಾಯಿತು. ಸಂಪ್ರದಾಯದಂತೆ ಕೊನೆಯಲ್ಲಿ ನೆರವೇರುತ್ತಿದ್ದ ಅಂಬಾರಿಯಲ್ಲಿ ಪ್ರತಿಷ್ಠಾಪಿತ ಚಾಮುಂಡಿದೇವಿಗೆ ಮಧ್ಯದಲ್ಲೇ ಪುಷ್ಪಾರ್ಚನೆ ನೆರವೇರಿಸಲಾಯಿತು. ಅರಮನೆ ಹಾಗೂ ಚಾಮರಾಜೇಂದ್ರ ವೃತ್ತದಲ್ಲಿ 15 ನಿಮಿಷಗಳ ಕಾಲ ಅಂಬಾರಿ ಹೊತ್ತುಕೊಂಡು ಅರ್ಜುನನನ್ನು ಕಾಯಿಸಲಾಯಿತು. ಕೊನೇ ಸಾಲಿನಲ್ಲಿ ಬರಬೇಕಾಗಿದ್ದ ಪೊಲೀಸ್ ವಾಹನಗಳು, ಫಿರಂಗಿ ಗಾಡಿಗಳು, ತುರ್ತು ಚಿಕಿತ್ಸಾ ವಾಹನಗಳು ಕಲಾತಂಡಗಳ, ಸ್ತಬ್ಧಚಿತ್ರಗಳ ಜಾಗ ಆಕ್ರಮಿಸಿಕೊಂಡು ಮಧ್ಯದಲ್ಲೇ ನುಸುಳಿದವು. ಇದು ಮೆರವಣಿಗೆಗೆ ಆಭಾಸ ಎನಿಸಿತು. ಈ ಎಡವಟ್ಟು ಸರಿಪಡಿಸಲು ಅವುಗಳನ್ನು ಪಕ್ಕಕ್ಕೆ ಕಳುಹಿಸಿ ತಡೆಹಿಡಿದಿದ್ದ ಕಲಾತಂಡಗಳು, ಸ್ತಬ್ಧಚಿತ್ರಗಳನ್ನು ಮುಂದೆ ಸಾಗಲು ಅವಕಾಶ ಮಾಡಿಕೊಡಲಾಯಿತು. ಆದರೆ, ಅಂಬಾರಿ ಮುಂದೆ ಸಾಗುತ್ತಿದ್ದಂತೆ ಇವುಗಳು ಕಳೆ ಕಳೆದುಕೊಂಡವು. ಇವುಗಳನ್ನು ವೀಕ್ಷಿಸಲು ಬಂದ ಜನಸಮೂಹವೂ ಕರಗಿಹೋಯಿತು. ಕೆಲಕಡೆ ಅವ್ಯವಸ್ಥೆ ಕಣ್ಣಿಗೆ ರಾಜಿತು. ಜನಜಂಗುಳಿ ಅಂಬಾರಿ ಆನೆಯ ಹಿಂದೆಯೇ ರಸ್ತೆಗೆ ನುಗ್ಗಿದ್ದರಿಂದ ಹಿಂದಿದ್ದ ಸ್ತಬ್ಧಚಿತ್ರಗಳು, ಕಲಾತಂಡಗಳು ಮುಂದೆ ಸಾಗಲು ಹರಸಾಹಸಪಡಬೇಕಾಯಿತು. ಇದು ಮೆರವಣಿಗೆ ಅಂದವನ್ನು ಮಂಕು ಮಾಡಿತು.

ವಾಲಿದ ಅಂಬಾರಿ

ಬಲರಾಮ ದ್ವಾರದ ಮೂಲಕ ಹೊರಟ ಅಂಬಾರಿ ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೆದ ವಿದ್ಯಾಲಯ, ಬಂಬೂ ಬಜಾರ್ ಹಾಯ್ದು ಹೈವೇ ವೃತ್ತ ಬಳಿ ಸಾಗುತ್ತಿದ್ದಂತೆ ವಾಲಿಕೊಂಡಿತು. ಮಂಜುನಾಥ ದೇವಸ್ಥಾನ ಬಳಿ ಪೂಜೆ ಸಲ್ಲಿಸುವ ವೇಳೆ ವಾಲಿದ ಅಂಬಾರಿಯನ್ನು ಸರಿಪಡಿಸಲಾಯಿತು. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಮತ್ತೆ ವಾಲಿಕೊಂಡ ಅಂಬಾರಿ ಹಾಗೇ ಸಾಗಿತು. ಅಂಬಾರಿ ಸಾಗಲು ಕಲಾ ತಂಡಗಳು, ಸ್ತಬ್ಧಚಿತ್ರಗಳು ಅಡಚಣೆ ಉಂಟು ಮಾಡಿದವು. ದಾರಿಯುದ್ದಕ್ಕೂ ಅದು ಅಲ್ಲಲ್ಲಿ ನಿಂತುಕೊಂಡು ಸಾಗಿತು. ಹೀಗಾಗಿ, ಅರ್ಜುನ 4.7 ಕಿಲೋ ಮೀಟರ್ ಮಾರ್ಗ ಕ್ರಮಿಸಲು ಬರೋಬರಿ 2 ಗಂಟೆ 13 ನಿಮಿಷ ತೆಗೆದುಕೊಂಡ. ಅವ್ಯವಸ್ಥೆ ನಡುವೆಯೂ ಮೆರವಣಿಗೆಯು ಸಂಜೆ 6.25ಕ್ಕೆ ಬನ್ನಿಮಂಟಪ ತಲುಪಿತು. ಬನ್ನಿಮಂಟಪದಲ್ಲಿ ಸಂಜೆ ನಡೆದ ಪಂಜಿನ ಕವಾಯಿತು ಕಾರ್ಯಕ್ರಮವು ಅಶ್ವಾರೋಹಿಗಳ ಸಾಹಸ ಕಸರತ್ತು, ಹೊನಲು ಬೆಳಕಿನ ಮಾಯಾಲೋಕ, ಯಕ್ಷಲೋಕವನ್ನು ಸೃಜಿಸಿ ಹತ್ತು ದಿನಗಳ ಕಾಲ ನಡೆದ ದಸರಾ ಉತ್ಸವಕ್ಕೆ ಮಂಗಳ ಹಾಡಿತು.

ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ

ಮೈಸೂರು: ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರು ಸಂತೃಪ್ತಿ, ಸುಭಿಕ್ಷೆಯಿಂದ ಇರಲಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಡಿನ ಜನತೆಗೆ ವಿಜಯದಶಮಿ ಸಂದೇಶ ನೀಡಿದರು. ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಜೋಡಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಮುಗಿಸಿದ್ದು ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸಲಾಗಿದೆ. ಉತ್ತಮ ಮಳೆ, ಬೆಳೆಯಾದರೆ ರೈತರು ನೆಮ್ಮದಿಯ ಜೀವನ ನಡೆಸುತ್ತಾರೆ. ರೈತರ ಬೆನ್ನೆಲುಬಾಗಿ ಸರ್ಕಾರ ಇದ್ದು, ಯಾರೂ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಕೆಲಸಕ್ಕೆ ಕೈ ಹಾಕಬಾರದು ಎಂದು ಕೋರಿದರು.

ಜನರ ಜತೆ ಸವಾರಿ ವೀಕ್ಷಿಸಿದ ನಟ ಶಿವರಾಜ್​ಕುಮಾರ್

ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು ನಟ ಶಿವರಾಜ್​ಕುಮಾರ್ ಕುಟುಂಬಸಹಿತರಾಗಿ ವೀಕ್ಷಿಸಿದರು. ನಗರದ ಗ್ರ್ಯಾಂಡ್ ಮರ್ಕ್ಯೂರಿ ಹೋಟೆಲ್ ಬಳಿ ಶಿವರಾಜ್​ಕುಮಾರ್ ಪತ್ನಿ ಗೀತಾ ಅವರೊಂದಿಗೆ ಸಾರ್ವಜನಿಕರ ನಡುವೆ ಕುಳಿತು ಮೆರವಣಿಗೆ ವೀಕ್ಷಿಸಿ ಸಂಭ್ರಮಿಸಿದರು. ‘ದಿ ವಿಲನ್’ ಚಿತ್ರದಲ್ಲಿ ನೆಚ್ಚಿನ ನಟನಿಗೆ ಸೂಕ್ತ ಪಾತ್ರ ನೀಡಲಿಲ್ಲ ಎಂದು ರಾಜ್ಯಾದ್ಯಂತ ಅಭಿಮಾನಿಗಳು ಆಕ್ರೋಶದಲ್ಲಿ ಮುಳುಗಿದ್ದರೆ, ಶಿವರಾಜ್​ಕುಮಾರ್ ಈ ಯಾವ ವಿಚಾರಗಳನ್ನು ತಲೆಗೆ ಹಾಕಿಕೊಳ್ಳದೆ ಜಂಬೂಸವಾರಿ ವೀಕ್ಷಿಸುವಲ್ಲಿ ತಲ್ಲೀನರಾಗಿದ್ದರು.

ಗಜಪಡೆಗೆ ವಿಶೇಷ ಪೂಜೆ

ಮೈಸೂರು: ಆಯುಧ ಪೂಜೆ ಹಿನ್ನೆಲೆಯಲ್ಲಿ ಗುರುವಾರ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಣ್ಯ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ಆನೆಗಳನ್ನು ನಿಯಂತ್ರಿಸುವ ಅಂಕುಶಗಳನ್ನಿಟ್ಟು ಪೂಜೆ ನೆರವೇರಿಸಲಾಯಿತು. ಗಜಗಳಿಗೆ ಕಬ್ಬು, ಬೆಲ್ಲ, ಕಾಯಿ, ಬಾಳೆಹಣ್ಣು ನೀಡಿ ಅರಣ್ಯ ಸಿಬ್ಬಂದಿ ಸತ್ಕರಿಸಿದರು.

ದರ್ಗಾದಲ್ಲಿ ಗಜಪಡೆಗೆ ಪೂಜೆ: ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಹಾಗೂ ದುಷ್ಟಶಕ್ತಿ ನಿವಾರಣೆಗೆ ಪ್ರಾರ್ಥಿಸಿ ನಗರದ ಕೃಷ್ಣವಿಲಾಸ ರಸ್ತೆಯಲ್ಲಿರುವ ಇಮಾಮ್ ಷಾ ವಲಿ ದರ್ಗಾದಲ್ಲಿ ಗುರುವಾರ ರಾತ್ರಿ ದಸರಾ ಆನೆಗಳಿಗೆ ಧರ್ಮಗುರು ನಕೀಬ್ ಗಜಪಡೆಗೆ ಪೂಜೆ ಸಲ್ಲಿಸಿದರು. ಗಜಪಡೆ ಸಾರಥಿ ಅರ್ಜುನ ಸೇರಿ ಎಲ್ಲ 12 ಆನೆಗಳು ಭಾಗವಹಿಸಿದ್ದವು. ಆನೆಗಳನ್ನು ನೋಡುವ ಸಲುವಾಗಿ ನೂರಾರು ಜನ ಜಮಾಯಿಸಿದ್ದರು.

ಮತ್ತೊಂದೆಡೆ, ಅರಮನೆಯಲ್ಲಿರುವ ಫಿರಂಗಿಗಳಿಗೆ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್ ಪೂಜೆ ಮಾಡಿದರು. ರಾಜವಂಶಸ್ಥರ ಸಂಬಂಧಿಕರ ಅನಾರೋಗ್ಯದ ನಿಮಿತ್ತ ರಾಜಮನೆತನದಿಂದ ಈ ಸಲ ಆಯುಧ ಪೂಜೆಯನ್ನು ಸರಳವಾಗಿ ನೆರವೇರಿಸಲಾಯಿತು. ಪುರೋಹಿತರಿಂದ ಶಾಸ್ತ್ರೋಕ್ತವಾಗಿ ಚಂಡಿಕಾ ಹೋಮ ನಡೆಯಿತು. ಸೋಮೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಅರಮನೆಯ ಕಲ್ಯಾಣಮಂಟಪದಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ, ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿ ಚಿನ್ನದ ಪಲ್ಲಕ್ಕಿ, ಬೆಳ್ಳಿ ಪಲ್ಲಕ್ಕಿ, ಆಯುಧಗಳಿಗೆ ಅರಮನೆ ಪುರೋಹಿತರ ವೇದ ಘೊಷಗಳೊಂದಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆಗೈದರು.

ಜನಪ್ರತಿನಿಧಿಗಳ ಕುಟುಂಬದ ಸವಾರಿ!

ಜಂಬೂಸವಾರಿಯಲ್ಲಿ ಜನಪ್ರತಿನಿಧಿಗಳ ಕುಟುಂಬದ ಸವಾರಿಯೂ ನಡೆಯಿತು. ಈ ಹಿಂದೆ ಜನಪ್ರತಿನಿಧಿಗಳ ಕುಟುಂಬಸ್ಥರು ನಿಗದಿತ ಸ್ಥಳಕ್ಕೆ ಅವಧಿಗೆ ಮುನ್ನವೇ ಬಂದು ಕುಳಿತುಕೊಂಡಿರುತ್ತಿದ್ದರು. ಇದು ಯಾರಿಗೂ ಕಿರಿಕಿರಿ ಉಂಟು ಮಾಡುತ್ತಿರಲಿಲ್ಲ. ಆದರೆ, ಈ ಸಲ ಇದು ಎದ್ದು ಕಂಡಿತು. ಸಿಎಂ ಕುಮಾರಸ್ವಾಮಿ ಕುಟುಂಬದವರೇ ಹೆಚ್ಚಿದ್ದು, ಅರಮನೆಗೆ ಕರೆ ತಂದ ಬಸ್​ನಲ್ಲಿ ಅವರ ಸಂಬಂಧಿಕರೇ ಅಧಿಕ ಸಂಖ್ಯೆಯಲ್ಲಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅವರ ಪತ್ನಿ ಚನ್ನಮ್ಮ, ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ, ಅವರ ಸಂಬಂಧಿ ಪ್ರೊ.ಕೆ.ಎಸ್.ರಂಗಪ್ಪ ಪತ್ನಿ, ಸಚಿವ ಜಿ.ಟಿ.ದೇವೇಗೌಡ ಪತ್ನಿ ಲಲಿತಾ ಅವರೆಲ್ಲರೂ ರಾಜಪಥದಲ್ಲೇ ಸಾಗಿ ಬಂದಿದ್ದು ಚರ್ಚೆಗೆ ಗ್ರಾಸವಾಯಿತು.

ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ

ಮೈಸೂರು: ವಿಜಯದಶಮಿ ದಿನವೇ ರಾಜಮನೆತನದ ಇಬ್ಬರು ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿತು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ (98) ನಗರದ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿ ರೆಳೆದರೆ, ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಿರಿಯ ಸಹೋದರಿ ವಿಶಾಲಾಕ್ಷಿ ದೇವಿ (56) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಉತ್ಸವ ಸಂಭ್ರಮದಲ್ಲಿ ಮುಳುಗಿರುವ ಹೊತ್ತಲ್ಲೇ ಸಾವಿನ ಸುದ್ದಿ ಬಂತು. ತಕ್ಷಣ ರಾಜಪುರೋಹಿತರ ಸಲಹೆ ಮೇರೆಗೆ ಎಲ್ಲ ಆಚರಣೆಗಳನ್ನು ಮುಂದೂಡುವ ತೀರ್ಮಾನ ಕೈಗೊಳ್ಳಲಾಯಿತು. ಅರಮನೆ ಆವರಣದಲ್ಲಿ ಜಿಲ್ಲಾಡಳಿತ ಜಂಬೂಸವಾರಿ ಮೆರವಣಿಗೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಚಿನ್ನಮ್ಮಣ್ಣಿ ಮೃತದೇಹವನ್ನು ಆಸ್ಪತ್ರೆಯಿಂದ ನೇರ ಮನುವನಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು. ವಿಶಾಲಾಕ್ಷಿ ದೇವಿಯವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಮಧುವನದಲ್ಲಿ ನಡೆಯಲಿದೆ.

22ಕ್ಕೆ ಮುಂದೂಡಿಕೆ: ಶುಕ್ರವಾರ ನಡೆಯಬೇಕಾಗಿದ್ದ ವಜ್ರಮುಷ್ಠಿ ಕಾಳಗ, ವಿಜಯದಶಮಿ ಮೆರವಣಿಗೆಯನ್ನು ಅ.22ಕ್ಕೆ ಮುಂದೂಡಲಾಯಿತು.


ಸರ್ವ ಋತು ಸಂಪಲೇ ನಾಡು ತಂಪಲೇ ಪರಾಕ್

ರಾಣೆಬೆನ್ನೂರ: ತಾಲೂಕಿನ ದೇವರಗುಡ್ಡದ ಸುಕ್ಷೇತ್ರ ಶ್ರೀ ಮಾಲತೇಶ ಸ್ವಾಮಿ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಅಂಗವಾಗಿ ಗುರುವಾರ ಜರುಗಿದ ಕಾರ್ಯಕ್ರಮದಲ್ಲಿ ಗೊರವಯ್ಯ ನಾಗಪ್ಪಜ್ಜ ಮುರ್ವಿು ‘ಸರ್ವ ಋತು ಸಂಪಲೇ, ನಾಡು ತಂಪಲೇ ಪರಾಕ್’ ಎಂದು ಕಾರ್ಣಿಕ ನುಡಿದಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ನುಡಿಯುವ ಕಾರ್ಣಿಕವನ್ನು ವರ್ಷದ ಭವಿಷ್ಯವಾಣಿ ಎಂದೇ ಕರೆಯಲಾಗುತ್ತದೆ. ಗುರುವಾರ ನುಡಿದ ಕಾರ್ಣಿಕವನ್ನು ಈ ಭಾಗದಲ್ಲಿ ರೈತರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ, ನಾಡು ಸಮೃದ್ಧಿಯಾಗುತ್ತದೆ. ಯಾವುದೇ ಸಮಸ್ಯೆಗಳು ಜನರನ್ನು ಕಾಡುವುದಿಲ್ಲ ಎಂದು ಅರ್ಥೈಸಲಾಗಿದೆ. ಈ ಭಾಗದಲ್ಲಿ ರೈತರು ಕೃಷಿಗೆ ಪೂರಕವಾಗಿ ಕಾರ್ಣಿಕವನ್ನು ವಿಶ್ಲೇಷಿಸುವುದು ವಾಡಿಕೆಯಾಗಿದೆ.

ತಾಲೂಕು ಸೇರಿ ನೆರೆಯ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕಾರ್ಣಿಕ ಕೇಳಲು ಆಗಮಿಸಿದ್ದರು. ಈ ಭಾಗದ ಆರಾಧ್ಯ ದೈವವಾದ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಹೆಚ್ಚಿನ ಪ್ರಸಿದ್ಧಿ ಪಡೆದುಕೊಂಡಿದೆ. ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡ ಅಷ್ಟೇ ಹೆಸರುವಾಸಿಯಾಗಿದೆ.


ದಾವಣಗೆರೆಯಲ್ಲಿ ಮುಂದಿನ ದಸರಾ ಧರ್ಮಸಮ್ಮೇಳನ

| ಮಾನವ ಧರ್ಮ ಮಂಟಪ

ಲಕ್ಷ್ಮೇಶ್ವರ: 2019ರಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ 28ನೇ ಶರನ್ನವರಾತ್ರಿ ದಸರಾ ಮಹೋತ್ಸವ ದಾವಣಗೆರೆಯಲ್ಲಿ ನಡೆಯಲಿದೆ. ಪಟ್ಟಣದಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ದಸರಾ ಧರ್ಮ ಸಮ್ಮೇಳನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಈ ಕುರಿತು ಮಾಹಿತಿ ನೀಡಿದರು.

ಸಂಕೀರ್ಣ ಮನಸ್ಥಿತಿಯಿಂದ ಹೊರಬಂದು ಕೂಡಿ ಬಾಳುವ ಸ್ನೇಹ ದೀಕ್ಷೆಯ ಭಾವೈಕ್ಯ ಸಂಕಲ್ಪ ಹೊಂದುವುದೇ ವಿಜಯದಶಮಿಯ ಮೂಲ ಆಶಯ. ಅನಂತ ಬೇಡಿಕೆಗಳ ವ್ಯೂಹದಲ್ಲಿ ಸಿಲುಕಿ ನರಳುತ್ತಿರುವ ಮಾನವನಿಗೆ ಬದುಕು ಅರ್ಥವಾಗುವುದಿಲ್ಲ. ತನ್ನೊಳಗಿನ ರಾಕ್ಷಸಿ ಪ್ರವೃತ್ತಿ, ತಾಮಸೀ ಗುಣ ಸ್ವಭಾವ ಕಳೆದುಕೊಂಡು ಶ್ರೇಷ್ಠ ಸಂಸಾರದ ಉತ್ಕೃಷ್ಟ ಮೌಲ್ಯಗಳ ಅನುಪಾಲನೆಯೊಂದಿಗೆ ಸಾತ್ವಿಕ ಗುಣ ಹೊಂದುವುದು ನವರಾತ್ರಿ ಆಚರಣೆಯ ಪರಮ ಗುರಿಯಾಗಿದೆ ಎಂದರು.

ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಯಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ್, ಜಿ.ಎಸ್.ಗಡ್ಡದ್ದೇವರಮಠ, ಮಳಲಿ, ಬನ್ನಿಕೊಪ್ಪ, ಸಂಗೊಳ್ಳಿ, ಕಪಿಲಾಧಾರಾ, ಮೊರಬ, ಸಿದ್ಧರಬೆಟ್ಟ ಮತ್ತಿತರ ಮಠಾಧೀಶರು ಪಾಲ್ಗೊಂಡಿದ್ದರು.

ಅಡ್ಡಪಲ್ಲಕ್ಕಿ ಮಹೋತ್ಸವ ಸಂಪನ್ನ: ದಸರಾ ಧರ್ಮ ಸಮ್ಮೇಳನದಲ್ಲಿ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತ ಸಮೂಹದ ಸಮ್ಮುಖ ವೈಭವೋಪೇತವಾಗಿ ನಡೆಯಿತು. ಪಟ್ಟಣದ ಆದಿದೈವ ಶ್ರೀಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ವಿಜಯದಶಮಿ ದಿನ ರಾತ್ರಿ ಕಾರ್ಣಿಕ ನುಡಿಯುವ ನಾಗಪ್ಪ ಬಿಂಗಿ ಅವರಿಗೆ (ಆಯುಧ) ಉಕ್ಕಿನ ಖಡ್ಗ ಹಸ್ತಾಂತರಿಸಿದರು. ಬಳಿಕ ಜಗದ್ಗುರುಗಳು ಬೆಳ್ಳಿ-ಚಿನ್ನ ಲೇಪಿತ, ಪುಷ್ಪಾಂಲಕೃತ ಅಡ್ಡಪಲ್ಲಕ್ಕಿಯಲ್ಲಿ ಚಿನ್ನದ ಕಿರೀಟ, ರಾಜಪೋಷಾಕು ಧರಿಸಿ ವಿರಾಜಮಾನರಾಗುತ್ತಿದ್ದಂತೆ ಭಕ್ತರು ವಿಶ್ವ ಮಾನವ ಸಂದೇಶದ ಘೊಷಣೆ ಕೂಗಿದರು. ಬಳಿಕ ದಸರಾ ಮಹೋತ್ಸವ ಸಮಿತಿಯವರಿಂದ ಶಮೀ ಕಾಣಿಕ ಸಮರ್ಪಣೆ ಮೂಲಕ 27ನೇ ದಸರಾ ಧರ್ಮ ಸಮ್ಮೇಳನ ಸಂಪನ್ನಗೊಂಡಿತು.