ದಸರಾ ನಾಡಿನಿಂದ ಈಶ್ವರ ಕಾಡಿಗೆ ವಾಪಸ್: ನಗರ ವಾತಾವರಣಕ್ಕೆ ಹೊಂದಿಕೊಳ್ಳದ ಆನೆ, ಮಾವುತರ ಜತೆ ಸಚಿವರ ಉಪಾಹಾರ

ಮೈಸೂರು: ಪ್ರಥಮ ಬಾರಿಗೆ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲು ನಗರಕ್ಕೆ ಅಗಮಿಸಿದ್ದ ಈಶ್ವರ (49) ಆನೆಯನ್ನು ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ.

ದುಬಾರೆ ಶಿಬಿರದಿಂದ ನಗರಕ್ಕೆ ಬಂದು 19 ದಿನ ಕಳೆದರೂ ಈಶ್ವರ ಆನೆಗೆ ನಗರದ ಪರಿಸರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ವಾಪಸ್ ಕಳುಹಿಸಿ, ಬೇರೊಂದು ಆನೆಯನ್ನು ಕರೆಸಲು ಉದ್ದೇಶಿಸಿದ್ದಾರೆ.

ನಿತ್ಯ ನಡೆಯುವ ತಾಲೀಮು ವೇಳೆಯೂ 3-4 ಬಾರಿ ಬೆದರಿ, ಮಾವುತ, ಕಾವಾಡಿ, ಅರಣ್ಯ ಅಧಿಕಾರಿಗಳಲ್ಲಿ ಗಾಬರಿ ಹುಟ್ಟಿಸಿತ್ತು. ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವಾಗ ವಾಹನಗಳು, ಜನರನ್ನು ಕಂಡು ಗಾಬರಿಗೊಳ್ಳುತ್ತಿತ್ತು. ಅಲ್ಲದೆ, ಅರಮನೆ ಅಂಗಳದಲ್ಲಿ ಮತ್ತೊಂದು ಆನೆ ಧನಂಜಯ ಮೇಲೆ ಆಗಾಗ ಜಗಳಕ್ಕಿಳಿಯುತ್ತಿತ್ತು ಎನ್ನಲಾಗಿದೆ.

ದಸರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ಬಂದು ಸೇರುವುದಲ್ಲದೆ ಕಲಾತಂಡಗಳ ಸದ್ದು, ಜನರ ಕೂಗಾಟ ಇರುವುದರಿಂದ ಆನೆ ಮತ್ತಷ್ಟು ಗಾಬರಿಯಾಗುವ ಸಾಧ್ಯತೆ ಇದೆ. ಹಾಗಾಗಿ, ಮುಂಜಾಗ್ರತಾ ಕ್ರಮವಾಗಿ ಈಶ್ವರ ಆನೆಯನ್ನು ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದ್ದಾರೆ.

ಉಪಾಹಾರ ಕೂಟ: ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರಿಗೆ ಮಂಗಳವಾರ ಬೆಳಗ್ಗೆ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಜಿಲ್ಲಾಡಳಿತ, ಅರಮನೆ ಆಡಳಿತ ಮಂಡಳಿ ವತಿಯಿಂದ ಅರಮನೆ ಅಂಗಳದಲ್ಲಿ ಏರ್ಪಡಿಸಿದ್ದ ಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಉಪಾಹಾರ ಬಡಿಸಿ, ಅವರ ಜತೆ ಕುಳಿತು ತಾವೂ ಸೇವಿಸಿದರು.

ಕಿಟ್ ವಿತರಣೆ: ಜಿಲ್ಲಾಡಳಿತದಿಂದ ನೀಡಲಾದ ಮಾವುತ, ಕಾವಾಡಿಗಳಿಗೆ ಖಾಕಿ ಸಮವಸ್ತ್ರ, ಕೊಡೆ, ಜರ್ಕಿನ್, ಟೋಪಿ, ನೀರಿನ ಬಾಟಲ್, ಟಾರ್ಚ್​ಲೈಟ್, ಉತ್ತಮ ದರ್ಜೆಯ ಶೂ ಇರುವ ಕಿಟ್ ಅನ್ನು ಸಚಿವ ವಿ.ಸೋಮಣ್ಣ ವಿತರಿಸಿದರು.

ಆನೆಗಳೊಂದಿಗೆ ಬಂದಿರುವ ಮಾವುತರು, ಕಾವಾಡಿಗಳ 40 ಕುಟುಂಬಕ್ಕೆ ತಲಾ 5 ಸಾವಿರ ರೂ. ನಂತೆ 2 ಲಕ್ಷ ರೂ. ವನ್ನು ಸಚಿವ ವಿ.ಸೋಮಣ್ಣ, ಪತ್ನಿ ಶೈಲಜಾ ಸೋಮಣ್ಣ ಅವರು ವೈಯಕ್ತಿಕವಾಗಿ ನೀಡಿದರು.

One Reply to “ದಸರಾ ನಾಡಿನಿಂದ ಈಶ್ವರ ಕಾಡಿಗೆ ವಾಪಸ್: ನಗರ ವಾತಾವರಣಕ್ಕೆ ಹೊಂದಿಕೊಳ್ಳದ ಆನೆ, ಮಾವುತರ ಜತೆ ಸಚಿವರ ಉಪಾಹಾರ”

Leave a Reply

Your email address will not be published. Required fields are marked *