ಮಂಡ್ಯ: ಮೈಷುಗರ್ ಕಾರ್ಖಾನೆಯ ಸುಮಾರು 350 ನಿವೃತ್ತ ಕಾರ್ಮಿಕರಿಗೆ ನೀಡಬೇಕಾಗಿರುವ ವೇತನ ಪರಿಷ್ಕರಣೆಯ ಹಿಂಬಾಕಿ ಇದೆ. ಈ ಸಂಬಂಧ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಸಾಧ್ಯವಾಗುತ್ತಿಲ್ಲ, ಪ್ರಭಾರ ಎಂಡಿ ಅವರು ಸ್ಪಂದಿಸುತ್ತಿಲ್ಲ. ಇನ್ನು ಅಧಿಕಾರಿಗಳನ್ನು ಭೇಟಿ ಮಾಡಲು ಹೋದರೆ ನಮ್ಮನ್ನು ಕಾರ್ಖಾನೆ ಒಳಕ್ಕೆ ಸೇರುತ್ತಿಲ್ಲ. ನಾವೇನು ಭಯೋತ್ಪಾದಕರಾ?. ಹಲವು ವರ್ಷ ಸೇವೆ ಸಲ್ಲಿಸಿರುವ ನಮಗೆ ಇದು ಬೇಸರ ಮೂಡಿಸಿದೆ ಎಂದು ಮೈಷುಗರ್ ನಿವೃತ್ತ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಶಿವಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.
ಕಾರ್ಖಾನೆಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ನಿವೃತ್ತಿ ಪಡೆದಿರುವ ನಮಗೆ ಇಳಿವಯಸ್ಸಾಗಿದೆ. ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಕಾರ್ಮಿಕನಿಗೆ 2 ರಿಂದ 3 ಲಕ್ಷ ರೂ ವೇತನ ಪರಿಷ್ಕರಣೆಯ ಹಿಂಬಾಕಿ ನೀಡಬೇಕು. ಇಲ್ಲದಿದ್ದರೆ ಕಾರ್ಖಾನೆ ಮುಂದೆ ಅ.9ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಸಮಿತಿಯ ಉಪಾಧ್ಯಕ್ಷ ವೀರಭದ್ರಸ್ವಾಮಿ, ಸಹ ಕಾರ್ಯದರ್ಶಿ ಸೂರ್ಯನಾರಾಯಣ್, ಮುಖಂಡರಾದ ಎಂ.ಕೆ.ನಾಗೇಶ್, ವೆಂಕಟೇಶ್ ಇದ್ದರು.