More

    ಮೈಷುಗರ್‌ಗೆ 10 ಕೋಟಿ ರೂ ಬಿಡುಗಡೆಗೆ ಮನವಿ: ಸಿಎಂ, ಡಿಸಿಎಂಗೆ ಶಾಸಕರ ಪತ್ರ

    ಮಂಡ್ಯ: ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಗೆ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸಲು ಸರ್ಕಾರದಿಂದ ಧನ ಸಹಾಯ ನೀಡಬೇಕಿದೆ. ಆದ್ದರಿಂದ ತುರ್ತಾಗಿ 10 ಕೋಟಿ ರೂ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಮತ್ತು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದಾರೆ.
    ಅನುದಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮಂಗಳವಾರ ಪತ್ರ ಬರೆದಿರುವ ಶಾಸಕರು, ಕಬ್ಬು ಕಟಾವು ಪ್ರಾರಂಭವಾಗುವ ಮೊದಲು ಕಾರ್ಖಾನೆ ಪ್ರಾರಂಭಿಸಬೇಕಿದೆ. ಅದಕ್ಕಾಗಿ 18 ಕೋಟಿ ರೂ ಅವಶ್ಯಕತೆ ಇದ್ದರೂ, ತುರ್ತಾಗಿ 10 ಕೋಟಿ ರೂ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
    ಕಳೆದ ವರ್ಷ ಆಯವ್ಯಯದಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂ ಘೋಷಣೆ ಮಾಡಿತ್ತು. ಆದರೆ, ಈವರೆಗೆ ಕೇವಲ 32 ಕೋಟಿ ರೂಗಳನ್ನಷ್ಟೇ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕಿದೆ. ಅದರಲ್ಲಿ ಈ ಬಾರಿ ತುರ್ತಾಗಿ 10 ಕೋಟಿ ರೂ ಬಿಡುಗಡೆ ಮಾಡಿಸುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಬೇಕು ಎಂದು ವಿವರಿಸಿದ್ದಾರೆ.
    ರೈತರಿಗೆ ಅನಾನುಕೂಲ: ಮೈಷುಗರ್ ಕಾರ್ಖಾನೆ ರೋಗಗ್ರಸ್ತವಾಗಿದ್ದು, ಕೆಲವು ವರ್ಷಗಳಿಂದ ಕಬ್ಬು ನುರಿಸುವಿಕೆಯನ್ನು ಸ್ಥಗಿತ ಮಾಡಿತ್ತು. ಕಳೆದ ವರ್ಷವಷ್ಟೇ ಕಬ್ಬು ನುರಿಸುವಿಕೆಯನ್ನು ಪುನಃ ಪ್ರಾರಂಭಿಸಿದೆ. ಅಲ್ಲದೆ, ಕಳೆದ ವರ್ಷ ಸರ್ಕಾರವು ಬಜೆಟ್‌ನಲ್ಲಿ ಕಾರ್ಖಾನೆಯ ಪುನಶ್ಚೇತನಕ್ಕೆ ಹಣ ನೀಡುವುದಾಗಿ ಘೋಷಿಸಿತ್ತು. ಆದರೆ, ಘೋಷಿಸಿದಷ್ಟು ನೀಡದ ಪರಿಣಾಮ ರೈತರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದಿದ್ದಾರೆ.
    ಕಾರ್ಖಾನೆಯ ವ್ಯಾಪ್ತಿಯಲ್ಲಿ ಈ ಹಂಗಾಮಿನಲ್ಲಿ 10,002 ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದು, ಸುಮಾರು 5,00,100 ಮೆಟ್ರಿಕ್ ಟನ್ ಕಬ್ಬು ಪೂರೈಕೆ ಮಾಡುವ ಕುರಿತು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. 5,745 ರೈತರು ಕಾರ್ಖಾನೆಗೆ ಕಬ್ಬು ನುರಿಸಲು ನೀಡುವುದಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ರೈತರ ಹಿತ ದೃಷ್ಟಿಯಿಂದ ಹಾಗೂ ಕಾರ್ಖಾನೆಯ ಭವಿಷ್ಯದ ದೃಷ್ಟಿಯಿಂದ ಸಕಾಲದಲ್ಲಿ ಕಬ್ಬು ನುರಿಸಲು ಪ್ರಾರಂಭಿಸಬೇಕಿದೆ. ಕಬ್ಬು ನುರಿಸುವಿಕೆಯ ಸಿದ್ಧತೆಯು ಜೂನ್‌ನಿಂದ ಆರಂಭವಾಗಬೇಕಿದೆ. ಆದರೆ, ಕಾರ್ಖಾನೆಯಲ್ಲಿ ತುರ್ತು ನಿರ್ವಹಣಾ ಕೆಲಸ, ಕಬ್ಬು ಕಟಾವು ಮಾಡುವ ತಂಡಗಳಿಗೆ ಹಣ ಪಾವತಿ, ಸಿಬ್ಬಂದಿ ವೇತನ ಎಲ್ಲ ಸೇರಿ 18.54 ಕೋಟಿ ರೂ ಅಗತ್ಯವಿದೆ. ಹಾಗಾಗಿ ತುರ್ತಾಗಿ 10 ಕೋಟಿ ರೂ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
    ಹಂಗಾಮು ಪೂರ್ವ ನಿರ್ವಹಣೆ ಕೆಲಸ ಪೂರ್ಣ ಮಾಡಲು 5 ಕೋಟಿ ರೂ, ಫ್ಯಾಕ್ಟರಿ ಕಾರ್ಮಿಕರಿಗೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ವೇತನ ಪಾವತಿಗೆ 1,50 ಕೋಟಿ ರೂ, ಸ್ಥಳೀಯ ಹಾಗೂ ಹೊರಗಿನ ಕಬ್ಬು ಕಟಾವು ತಂಡಗಳಿಗೆ ಮುಂಗಡ ಹಣ ಪಾವತಿಗೆ 5,80 ಕೋಟಿ ರೂ, ಕಾರ್ಖಾನೆಗೆ ಕೋಣನಹಳ್ಳಿ ನೀರಿನ ಲೈನ್ ನಿರ್ಮಾಣಕ್ಕೆ 98 ಲಕ್ಷ ರೂ, ಘಟಕದ ಒಳಗೆ ವಿವಿಧ ಸಿವಿಲ್ ಕಾಮಗಾರಿಗಳಿಗೆ 98 ಲಕ್ಷ ರೂ, ಇಆರ್‌ಪಿ ಪ್ರಾಜೆಕ್ಟ್‌ಗೆ 98 ಲಕ್ಷ ರೂ, ನೀರು ಮತ್ತು ಸ್ಟೇಕ್ ಆನ್‌ಲೈನ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಕೆಗೆ 30 ಲಕ್ಷ ರೂ, ಜೂಸ್ ಸಪ್ಲೀಟರ್ ಮತ್ತು ಗೇರ್ ಬಾಕ್ಸ್ ಅಳವಡಿಕೆಗೆ 1 ಕೋಟಿ ರೂ, ಜಿಐ ಶೀಟ್ ಹಾಗೂ ಕಟಾವು ಕಾರ್ಮಿಕರ ಸಾಮಗ್ರಿಗೆ 2 ಕೋಟಿ ರೂ ಅಗತ್ಯವಾಗಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಕೂಡಲೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಶಾಸಕರಿಬ್ಬರು ಪತ್ರದಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts