ಕೊಳ್ಳೇಗಾಲ: ತಾಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ ನೂರಾರು ಜನರಿಗೆ ಕಳೆದೊಂದು ತಿಂಗಳಿಂದಲೂ ಜ್ವರ ಕಾಣಿಸಿಕೊಳ್ಳುತ್ತಿದ್ದು, ಇದೀಗ ನಿವಾಸಿಗಳ ಮನದಲ್ಲಿ ಜಾಂಡಿಸ್, ಚಿಕೂನ್‌ಗುನ್ಯಾ, ಡೆಂೆ ಭೀತಿ ಆವರಿಸಿದೆ.
ಗ್ರಾಮದ ಬೀದಿಗಳ ರಸ್ತೆ ಮತ್ತು ಚರಂಡಿಗಳಲ್ಲಿ ಸ್ವಚ್ಛತೆ ಕೊರತೆ ಹಿನ್ನೆಲೆ 1 ತಿಂಗಳಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. 150ಕ್ಕೂ ಹೆಚ್ಚು ಜನರು ಇದುವರೆಗೆ ಜ್ವರ, ಕೈಕಾಲುಗಳ ಕೀಲು ನೋವು, ತಲೆ ನೋವಿನಿಂದ ಬಳಲುತ್ತಿದ್ದು, ಗ್ರಾಮದ ಖಾಸಗಿ ಆಸ್ಪತ್ರೆ, ಸಮೀಪದ ಹೋಲಿಕ್ರಾಸ್ ಆಸ್ಪತ್ರೆ ಸೇರಿದಂತೆ ದೊಡ್ಡಿಂದುವಾಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏ.27ರಂದು ವಿವಾಹ ನಿಗದಿಯಾಗಿದ್ದ ಸಿಂಗಾನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಯ್ಯ ಅವರ ಪುತ್ರ ಸಾಗರ್(30)ಗೆ ಡಿ.22ರಂದು ಜ್ವರ ಕಾಣಿಸಿಕೊಂಡಿದ್ದು, ಕಾಮಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜಾಂಡಿಸ್ ಉಲ್ಬಣವಾಗಿ ಚಿಕಿತ್ಸೆಗೆ ಸ್ಪಂದಿಸದೆ ಜ.1ರಂದು ರಾತ್ರಿ ಮೃತಪಟ್ಟರು.
ಬಾರದ ಆರೋಗ್ಯಾಧಿಕಾರಿಗಳು: ಗ್ರಾಮದಲ್ಲಿ ಜನರಿಗೆ ಬಿಟ್ಟು ಬಿಟ್ಟು ಬರವು ಜ್ವರ ಬರುತ್ತಿದೆ. ಕೈಕಾಲು ನೋವು, ತಲೆ ನೋವಿನಿಂದ ಬವಣೆ ಪಡುತ್ತಿರುವ ಗ್ರಾಮಸ್ಥರು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಯಾವುದೇ ಗುಣ ಕಾಣುತ್ತಿಲ್ಲ. ಆದರೆ ಕಾಯಿಲೆ ಯಾವುದೆಂದು ತಿಳಿಯುತ್ತಿಲ್ಲ. ಒಬ್ಬೊಬ್ಬರು ಒಂದೊಂದು ಕಾಯಿಲೆ ಎಂದು ಹೇಳುತ್ತಿರುವುದು ಆತಂಕ ಹೆಚ್ಚಲು ಕಾರಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಆರೋಗ್ಯಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳಾಗಲಿ ಬಂದು ಜನರಿಗೆ ಧೈರ್ಯ ಹೇಳುವ ಕೆಲಸ ಮಾಡಿಲ್ಲ.
ಸಿಂಗಾನಲ್ಲೂರು ಗ್ರಾಮದ ಸಾಗರ್ ಮೃತಪಟ್ಟಿರುವುದು ಕಿಡ್ನಿ ವೈಫಲ್ಯದಿಂದ. ಇದರಿಂದ ಜನರು ಆತಂಕ ಪಡುವ ಅಗತ್ಯ ಇಲ್ಲ. ಕೆಲವರಿಗೆ ಜ್ವರ ಕಾಣಿಸಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಕೀಲು ನೋವು ಸ್ವಲ್ಪ ದಿನ ಇರುತ್ತದೆ. ಅದಕ್ಕೆ ಗಾಬರಿ ಪಡುವ ಅವಶ್ಯಕತೆ ಇಲ್ಲ. ಗ್ರಾಮದಲ್ಲಿ ಎಎನ್‌ಎಂ ಹೇಮಾ ಹಾಗೂ ಆಶಾ ಕಾರ್ಯಕರ್ತರ ತಂಡ ಅಗತ್ಯ ತಪಾಸಣೆ ನಡೆಸುತ್ತಿದ್ದಾರೆ. ಶುಕ್ರವಾರ ತಾವು ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿರುವ ಆತಂಕ ನಿವಾರಿಸಲು ಪ್ರಯತ್ನಿಸುತ್ತೇನೆ.
ಡಾ.ಗೋಪಾಲ್ ತಾಲೂಕು ಆರೋಗ್ಯಾಧಿಕಾರಿ, ಕೊಳ್ಳೇಗಾಲ