ತ್ಯಾಜ್ಯ ವಿಂಗಡಿಸದಿದ್ದರೆ ದಂಡ

ಮೈಸೂರು: ತಾಜ್ಯವನ್ನು ಹಸಿ ಕಸ, ಒಣ ಕಸವಾಗಿ ಮೂಲದಲ್ಲಿಯೇ ಬೇರ್ಪಡಿಸಿ ನೀಡಬೇಕೆಂದು ಪಾಲಿಕೆ ಸಾಕಷ್ಟು ಬಾರಿ ಮನವಿ ಮಾಡಿಕೊ ಂಡರೂ ಸಾಕಷ್ಟು ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಇನ್ನು ಮುಂದೆ ಈ ವಿಚಾರದಲ್ಲಿ ನಿರ್ಲಕ್ಷೃ ತೋರುವಂತಿಲ್ಲ. ಒಂದು ವೇಳೆ ನಿರ್ಲಕ್ಷೃ ತೋರಿದರೆ ದಂಡ ನಿಶ್ಚಿತ.

ಸ್ವಚ್ಛತೆಯಲ್ಲಿ ಸಾಂಸ್ಕೃತಿಕ ನಗರಿ ಪ್ರತಿ ವರ್ಷ ದೇಶದ ಗಮನ ಸೆಳೆಯುತ್ತದೆ. ಆದರೆ, ಸ್ವಚ್ಛ ನಗರಿಯಲ್ಲಿ ಮತ್ತಷ್ಟು ಸ್ವಚ್ಛತೆ ಕಾಪಾಡಲು ನಗರದ ಜನರಿಂದ ಹೆಚ್ಚಿನ ಪ್ರಮಾಣದ ಸಹಕಾರ ದೊರೆಯುತ್ತಿಲ್ಲ. ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ನೀಡುವ ವಿಚಾರದಲ್ಲಿ ನಗರದ ಜನರಲ್ಲಿ ಜಾಗೃತಿ ಮೂಡಿದಂತೆ ಕಾಣುತ್ತಿಲ್ಲ.

ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ನೀಡಲು ನಗರ ಪಾಲಿಕೆ ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ಬಕೆಟ್‌ಗಳನ್ನು ಉಚಿತವಾಗಿ ನೀಡಿತ್ತು. ಜನರು ಈ ಬಕೆಟ್‌ಗಳನ್ನು ತ್ಯಾಜ್ಯ ಬೇರ್ಪಡಿಸಲು ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ಅಕ್ಕಿ ಹಿಟ್ಟು, ದಿನಸಿ ಸಂಗ್ರಹಿಸಿಡಲು ಹಾಗೂ ಶೌಚಗೃಹಕ್ಕೆ ಬಳಕೆ ಮಾಡುತ್ತಿದ್ದಾರೆ.

ಸಾಕಷ್ಟು ಜನರು ಹಸಿ ಕಸ, ಒಣ ಕಸವನ್ನು ಮಿಶ್ರಣ ಮಾಡಿ ನೀಡುತ್ತಿದ್ದಾರೆ. ಪೌರ ಕಾರ್ಮಿಕರು ಮಿಶ್ರಣವಾದ ತ್ಯಾಜ್ಯವನ್ನು ಅನಿವಾ ರ್ಯವಾಗಿ ಸ್ವೀಕರಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ವ್ಯವಸ್ಥೆ ಬದಲಾಗಲಿದ್ದು, ಜನರು ಹಸಿ ಕಸ ಮತ್ತು ಒಣಕಸವನ್ನು ಬೇರ್ಪಡಿಸಿ ನೀಡಲೇಬೇಕು. ಒಂದು ವೇಳೆ ನೀಡದೆ ಇದ್ದರೆ ಕಸವನ್ನು ಪಾಲಿಕೆ ಸಿಬ್ಬಂದಿ ಸ್ವೀಕರಿಸುವುದಿಲ್ಲ. ಅಲ್ಲದೆ ಸ್ಥಳದಲ್ಲಿಯೇ ದಂಡ ವಿಧಿಸಲು ಪಾಲಿಕೆ ಮುಂದಾಗಿದೆ.

ದಂಡದ ಪ್ರಮಾಣ ನಿಗದಿ
ನಗರ ಪಾಲಿಕೆ ಪ್ರಸಕ್ತ ವರ್ಷ ಪ್ಲಾಸ್ಟಿಕ್ ಬಳಕೆ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಿದವರಿಂದ ಒಟ್ಟು 4 ಲಕ್ಷ ರೂ. ದಂಡ ವಸೂಲಾತಿ ಮಾಡಿದೆ. ಆದರೆ, ಇದುವರೆಗೆ ಎಷ್ಟು ಪ್ರಮಾಣದಲ್ಲಿ ದಂಡ ವಿಧಿಸಬೇಕೆಂಬ ನಿಯಮ ಇರಲಿಲ್ಲ. ಹೀಗಾಗಿ ಪಾಲಿಕೆ ಅಧಿಕಾರಿಗಳು ತಾಜ್ಯದ ಪ್ರಮಾಣದ ಆಧಾರದ ಮೇಲೆ ಮನಸ್ಸಿಗೆ ತೋಚಿದಷ್ಟು ದಂಡ ವಿಧಿಸುತ್ತಿದ್ದರು. ಇದು ಸಾರ್ವಜನಿಕರು ಹಾಗೂ ಜನರ ನಡುವೆ ಆಕ್ರೋಶಕ್ಕೆ ಕಾರಣವಾಗುತಿತ್ತು. ಇನ್ನು ಮುಂದೆ ದಂಡವನ್ನು ಯಾವ ಪ್ರಮಾಣದಲ್ಲಿ ವಿಧಿಸಬೇಕೆಂಬ ವಿಚಾರದಲ್ಲಿ ಸ್ಪಷ್ಟತೆ ಬರಲಿದೆ.

ವಿಂಗಡಿಸಿದರೆ ಹೊರೆ ಕಡಿಮೆ
ನಗರದ ಸೂಯೇಜ್ ಫಾರಂಗೆ ನಿತ್ಯ 400 ಟನ್ ತ್ಯಾಜ್ಯ ಬರುತ್ತಿದ್ದು, ಈ ಪೈಕಿ 200 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಇಲ್ಲಿಗೆ ಬರುವಾಗ ಹಸಿ ಕಸ, ಒಣಕಸ ವಿಂಗಡಣೆಯಾಗಿರುವುದಿಲ್ಲ. ಹೀಗಾಗಿ ಇಲ್ಲಿ ತ್ಯಾಜ್ಯ ಬೆಟ್ಟದ ರೀತಿಯಲ್ಲಿ ಬೆಳೆಯುತ್ತಿದೆ. ಮನೆಯಲ್ಲಿಯೇ ತ್ಯಾಜ್ಯ ವಿಂಗಡಣೆ ಮಾಡಿ ನೀಡಿದರೆ ಹಸಿಕಸವನ್ನು ತಕ್ಷಣ ಸಂಸ್ಕರಣೆ ಮಾಡಿ ಒಣಕಸವನ್ನು ಮತ್ತಷ್ಟು ದಿನ ಇಟ್ಟುಕೊಂಡು ಸಂಸ್ಕರಣೆ ಮಾಡಬಹುದು.

ಯಾವಾಗ ಜಾರಿ?: ನಗರ ಪಾಲಿಕೆ ಅಧಿಕಾರಿಗಳು ಈಗಾಗಲೇ ದಂಡದ ಪ್ರಮಾಣವನ್ನು ಅಂತಿಮಗೊಳಿಸಿದ್ದು, ಇದನ್ನು ಶೀಘ್ರದಲ್ಲಿ ಯೇ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ತಿಳಿಸಿ ಆಕ್ಷೇಪಗಳು, ಸಲಹೆಗಳನ್ನು ಆಹ್ವಾನಿಸಲಿದ್ದಾರೆ. ಸಾರ್ವಜನಿಕರ ಪ್ರತಿಕ್ರಿಯೆ ಸ್ವೀಕರಿಸಿದ ನಂತರ ಪಾಲಿಕೆ ಕೌನ್ಸಿಲ್‌ನ ಒಪ್ಪಿಗೆ ಪಡೆದು ಅನುಷ್ಠಾನಗೊಳಿಸಲಾಗುವುದು.