ನಗರದಲ್ಲಿ ಜಲಕ್ಷಾಮದ ಭೀತಿ

ಸದೇಶ್ ಕಾರ್ಮಾಡ್ ಮೈಸೂರು

ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಅತಿವೇಗದಲ್ಲಿ ಬೆಳೆಯುತ್ತಿರುವ ನಗರಗಳ ಪೈಕಿ ಮುಂಚೂಣಿಯಲ್ಲಿರುವ ಮೈಸೂರು ನಗರಕ್ಕೆ ಮುಂದಿನ ದಿನಗಳಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ.


ನಗರ ಬೆಳೆಯುತ್ತಿದ್ದಂತೆಯೇ ಅಂತರ್ಜಲ ಬಳಕೆಯ ಪ್ರಮಾಣ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ನಗರ ಹಾಗೂ ತಾಲೂಕಿನಲ್ಲಿ ಅಂತರ್ಜಲ ಮಟ್ಟ ‘ಕ್ಲಿಷ್ಟಕರ’ ಪರಿಸ್ಥಿತಿಯಲ್ಲಿದೆ. ಜಿಲ್ಲೆಯ ಏಳು ತಾಲೂಕುಗಳ ಪೈಕಿ ಮೈಸೂರು ತಾಲೂಕು ಮಾತ್ರ ಇಂಥದೊಂದು ಆತಂಕವನ್ನು ಎದುರಿಸುತ್ತಿದೆ.

ಒಂದು ವೇಳೆ ತೀವ್ರ ಕ್ಷಾಮ ಎದುರಾಗಿ ಕೆಆರ್‌ಎಸ್ ಜಲಾಶಯ ಸಂಪೂರ್ಣ ಬರಿದಾದರೆ 12 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮೈಸೂರು ನಗರದ ನಿವಾಸಿಗಳು ಹನಿನೀರಿಗೂ ಹಾಹಾಕಾರ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ. ಕೆಆರ್‌ಎಸ್ ಬರಿದಾದರೆ ತಾತ್ಕಾಲಿಕವಾಗಿ ನಗರ ಹಾಗೂ ನಗರದ ಹೊರ ಭಾಗದಲ್ಲಿರುವ ಕೊಳವೆಬಾವಿಗಳನ್ನು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬಹುದು. ಆದರೆ, ಮೈಸೂರು ತಾಲೂಕಿನಲ್ಲಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೊಳವೆ ಬಾವಿಗಳು ಕೂಡ ಬೇಸಿಗೆಯಲ್ಲಿ ಸಂಪೂರ್ಣ ಬರಿದಾಗುವ ಆತಂಕ ಎದುರಾಗಿದೆ.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ನೀರಿಲ್ಲದ ನಗರವೆಂದು ಘೋಷಣೆಯಾಗಿದೆ. ಇದು ಜಗತ್ತಿನ ಮೊಟ್ಟ ಮೊದಲ ನೀರಿಲ್ಲದ ನಗರವಾಗಿದೆ. ಮೈಸೂರಿನಲ್ಲಿ ಅಂತರ್ಜಲ ಸಂರಕ್ಷಣಾ ಕಾರ್ಯಕ್ಕೆ ಒತ್ತು ನೀಡದೆ ಇದ್ದರೆ ಮುಂದೊಂದು ದಿನ ಮೈಸೂರು ಕೂಡ ಕೇಪ್‌ಟೌನ್ ಹಾದಿ ತುಳಿಯುವ ಆತಂಕ ಎದುರಿಸುತ್ತಿದೆ.

ಅಂತರ್ಜಲದ ಸ್ಥಿತಿಗತಿ: ಜಿಲ್ಲೆಯಲ್ಲಿ ಮೈಸೂರು ತಾಲೂಕು ಅತಿ ಕಡಿಮೆ ಮತ್ತು ತಿ.ನರಸೀಪುರ ತಾಲೂಕು ಅತಿ ಹೆಚ್ಚು ಅಂತರ್ಜಲ ಹೊಂದಿದೆ. ತಿ.ನರಸೀಪುರದಲ್ಲಿ 13,206 ಮೀಟರ್ ಅಂತರ್ಜಲ ಲಭ್ಯವಿದ್ದು, ನೀರಾವರಿಗೆ 4,603, ಗೃಹ ಮತ್ತು ಔದ್ಯೋಗಿಕ ಉದ್ದೇಶಕ್ಕೆ 312 ಮೀಟರ್‌ನಷ್ಟು ನೀರು ಬಳಕೆಯಾಗುತ್ತಿದೆ.

ಮೈಸೂರು ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕಡಿಮೆ ಇದ್ದರೂ ಜನಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬಳಕೆ ಪ್ರಮಾಣ ಹೆಚ್ಚಾಗಿದೆ. ತಾಲೂಕಿನಲ್ಲಿ ಕೇವಲ 5,473.39 ಮೀಟರ್‌ನಷ್ಟು ಅಂತರ್ಜಲ ಲಭ್ಯವಿದೆ. ಈ ಪೈಕಿ 3,553.30 ಮೀಟರ್‌ನಷ್ಟು ನೀರಾವರಿಗೆ, 1,399 ಮೀಟರ್‌ನಷ್ಟು ಗೃಹ ಮತ್ತು ಔದ್ಯೋಗಿಕ ಉದ್ದೇಶಕ್ಕೆ ಬಳಕೆಯಾಗುತ್ತಿದೆ.

ಕೆ.ಆರ್. ನಗರದಲ್ಲಿ 7,991.34 ಮೀಟರ್ ಅಂತರ್ಜಲವಿದ್ದು, 1,521 ನೀರಾವರಿಗೆ, 241 ಗೃಹ ಮತ್ತು ಔದ್ಯೋಗಿಕಕ್ಕೆ, ನಂಜನಗೂಡಿನಲ್ಲಿ 10,938 ಮೀಟರ್ ಅಂತರ್ಜಲವಿದ್ದು, 3,746 ನೀರಾವರಿಗೆ, 406 ಗೃಹ ಮತ್ತು ಔದ್ಯೋಗಿಕಕ್ಕೆ, ಪಿರಿಯಾಪಟ್ಟಣದಲ್ಲಿ 7,053 ಮೀಟರ್ ಅಂತರ್ಜಲವಿದ್ದು, 2,898 ನೀರಾವರಿಗೆ, 712 ಗೃಹ ಮತ್ತು ಔದ್ಯೋಗಿಕಕ್ಕೆ, ಎಚ್.ಡಿ. ಕೋಟೆಯಲ್ಲಿ 7528 ಮೀಟರ್ ಅಂತರ್ಜಲವಿದ್ದು, 4,096 ನೀರಾವರಿಗೆ, 588 ಗೃಹ ಮತ್ತು ಔದ್ಯೋಗಿಕಕ್ಕೆ, ಹುಣಸೂರು ತಾಲೂಕಿನಲ್ಲಿ 6220 ಮೀಟರ್ ಅಂತರ್ಜಲ ಲಭ್ಯವಿದ್ದು, ಈ ಪೈಕಿ 3101 ನೀರಾವರಿಗೆ, 386 ಗೃಹ ಮತ್ತು ಔದ್ಯೋಗಿಕ ಉದ್ದೇಶಕ್ಕೆ ಬಳಕೆಯಾಗುತ್ತಿದೆ.

ಅಂತರ್ಜಲ ಬಳಕೆ ಪ್ರಮಾಣ: ಮೈಸೂರಿನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆಯಾಗುತ್ತಿದೆ. ಮೈಸೂರು ತಾಲೂಕಿನಲ್ಲಿ ಶೇ.90, ಎಚ್.ಡಿ. ಕೋಟೆಯಲ್ಲಿ ಶೇ.62, ಪಿರಿಯಾಪಟ್ಟಣದಲ್ಲಿ ಶೇ.51, ಹುಣಸೂರಿನಲ್ಲಿ ಶೇ.56, ನಂಜನಗೂಡಿನಲ್ಲಿ ಶೇ.38, ತಿ.ನರಸೀಪುರದಲ್ಲಿ ಶೇ.37 ಹಾಗೂ ಕೆ.ಆರ್. ನಗರ ತಾಲೂಕಿನಲ್ಲಿ ಶೇ.22ರಷ್ಟು ಅಂರ್ಜಲ ಬಳಕೆಯಾಗುತ್ತಿದೆ.

ಕೊಳವೆ ಬಾವಿಗಳ ಸ್ಥಿತಿಗತಿ: ಜಿಲ್ಲೆಯಲ್ಲಿ ಒಟ್ಟು 49,239 ಕೊಳವೆ ಬಾವಿಗಳು ಇವೆ. ಈ ಪೈಕಿ ಎಚ್.ಡಿ. ಕೋಟೆ ತಾಲೂಕು 6,344, ಹುಣಸೂರು 7,532, ಕೆ.ಆರ್. ನಗರ 7,348, ಮೈಸೂರು 6,669, ನಂಜನಗೂಡು 6,414, ಪಿರಿಯಾಪಟ್ಟಣ 8,773, ತಿ.ನರಸೀಪುರ ತಾಲೂಕು 6,159 ಕೊಳವೆ ಬಾವಿಗಳನ್ನು ಹೊಂದಿದೆ.
ಎಚ್.ಡಿ. ಕೋಟೆ ತಾಲೂಕಿನ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ 15.97 ಮೀಟರ್ (ಭೂಮಟ್ಟದಿಂದ ಕೆಳಗೆ), ಹುಣಸೂರಿನಲ್ಲಿ 13.93, ಹುಣಸೂರಿನಲ್ಲಿ 13.93, ಕೆ.ಆರ್. ನಗರದಲ್ಲಿ 8.10, ಮೈಸೂರಿನಲ್ಲಿ 8.83, ನಂಜನಗೂಡಿನಲ್ಲಿ 9.48, ಪಿರಿಯಾಪಟ್ಟಣದಲ್ಲಿ 8.52, ತಿ.ನರಸೀಪುರ ತಾಲೂಕಿನಲ್ಲಿ 8.73 ಮೀಟರ್‌ನಷ್ಟು ಅಂತರ್ಜಲ ಪ್ರಮಾಣವಿದೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವೃದ್ಧಿಗೆ ಜಿ.ಪಂ.ನಿಂದ ಚೆಕ್‌ಡ್ಯಾಂ ನಿರ್ಮಾಣ, ಕೊಳವೆ ಬಾವಿಗಳಿಗೆ ಜಲಮರುಪೂರಣ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧೆಡೆ ಖಾಸಗಿಯವರು ಅನಧಿಕೃತವಾಗಿ ಕೊಳವೆಬಾವಿಗಳನ್ನು ನಿರ್ಮಿಸುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದ್ದು, ಈ ಕುರಿತು ಶಿಸ್ತು ಕ್ರಮ ಜರುಗಿಸಲು ಕ್ರಮ ವಹಿಸಲಾಗುವುದು.
ಕೆ. ಜ್ಯೋತಿ ಸಿಇಒ ಜಿಲ್ಲಾ ಪಂಚಾಯಿತಿ

Leave a Reply

Your email address will not be published. Required fields are marked *