ನಗರದಲ್ಲಿ ಪ್ರಮುಖರಿಂದ ಮತದಾನ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮತದಾನ ಮಾಡಿದರು.

ಬೋಗಾದಿಯ 2ನೇ ಹಂತದಲ್ಲಿರುವ ರಾಯಲ್ ಕಾಂಕರ್ಡ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಮತಗಟ್ಟೆ ಸಂಖ್ಯೆ 109ಕ್ಕೆ ತೆರಳಿದ ಪ್ರತಾಪ್ ಸಿಂಹ ಪತ್ನಿ ಅರ್ಪಿತಾ ಅವರೊಂದಿಗೆ ಮತ ಚಲಾಯಿಸಿದರು. ಮತಗಟ್ಟೆ ಹೊರಗಡೆ ಅರ್ಪಿತಾ ಅವರು ಪತಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಪ್ರತಾಪ್ ಸಿಂಹ ಮಾತನಾಡಿ, ಎಲ್ಲೆಡೆ ತಮಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದೇಶಕ್ಕೆ ಮೋದಿ ಬೇಕು, ಅವರ ಹಿಂದೆ ನಾವಿದ್ದೇವೆ ಎಂದು ಜನ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ.

ಈ ಬಾರಿ ಬಿಜೆಪಿ ಅಧಿಕ ಸ್ಥಾನ ಗಳಿಸಲಿದೆ. ದೇಶದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ ಸುಮಾರು 8.40 ಕೋಟಿ ಯುವ ಮತದಾರರು ಮೋದಿ ಮತದಾರರಾಗಿದ್ದಾರೆ. ಇದು ಈ ಚುನಾವಣೆಯಲ್ಲಿ ಬಿಜೆಪಿಗೆ ಸಹಕಾರಿಯಾಗಲಿದೆ ಎಂದರು. ಇನ್ನು ಎಲ್ಲ ಪಕ್ಷಕ್ಕೂ ವೋಟ್ ಬ್ಯಾಂಕ್ ಇರುವಂತೆ ಮೋದಿಗೂ ದೊಡ್ಡ ಮಟ್ಟದಲ್ಲಿ ವೋಟ್ ಬ್ಯಾಂಕ್ ಇದೆ ಎಂದರು.

ಮತ್ತೊಬ್ಬ ಅಭ್ಯರ್ಥಿ ಕಾಂಗ್ರೆಸ್‌ನ ಸಿ.ಎಚ್.ವಿಜಯಶಂಕರ್ ಅವರು ಕುಟುಂಬ ಸಮೇತ ವಿಜಯನಗರದ 3ನೇ ಹಂತದಲ್ಲಿರುವ ಸರ್ಕಾರಿ ಶಾಲೆಯಮತಗಟ್ಟೆ ಸಂಖ್ಯೆ 108ಕ್ಕೆ ತೆರಳಿ ಮತ ಚಲಾವಣೆ ಮಾಡಿದರು.


ಗಣ್ಯರ ಮತದಾನ: ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇದೇ ವೇಳೆ ಶ್ರೀಮಠದ ಕಿರಿಯ ಶ್ರೀಗಳಾದ ಜಯರಾಜೇಂದ್ರ ಸ್ವಾಮೀಜಿ ಮೊದಲ ಬಾರಿಗೆ ಮತದಾನ ಮಾಡಿದರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮನಾಥೇಶ್ವರ ಸ್ವಾಮೀಜಿ ಶಾರದಾದೇವಿ ನಗರದ ಇಂದಿರಾ ಶಾಲೆಯ ಮತಗಟ್ಟೆ ಸಂಖ್ಯೆ 163ರಲ್ಲಿ ಮತ ಚಲಾಯಿಸಿದರು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಅವರ ಧರ್ಮಪತ್ನಿ ತ್ರಿಷಿಕಾದೇವಿ ಒಡೆಯರ್ ಅಗ್ರಹಾರದ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಬಳಿಕ ಮಾತನಾಡಿದ ಅವರು, 18ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ಆಡಳಿತಕ್ಕೆ ಅನುವು ಮಾಡಿಕೊಡಬೇಕು ಎಂದರು.

ಚಾಮುಂಡಿಪುರಂನ ಸೇಂಟ್ ಮೇರಿಸ್ ಶಾಲೆಯ ಮತಗಟ್ಟೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಮತ ಚಲಾಯಿಸಿದರು. ಬಳಿಕ ಮಾತನಾಡಿ, ನಮ್ಮ ಮತದಿಂದ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರೂ ಮತದಾನ ಮಾಡಿ. ಜಿಲ್ಲೆಯಲ್ಲಿ ಎರಡು ಕಡೆ ಮತಯಂತ್ರದಲ್ಲಿ ದೋಷ ಕಂಡು ಬಂದಿತ್ತು. ಅದನ್ನು ಬದಲಾಯಿಸಲಾಗಿದೆ ಎಂದರು.

ಶಾಸಕ ಎಲ್.ನಾಗೇಂದ್ರ ಅವರು ಜಯನಗರದಲ್ಲಿರುವ ಬಾಲೋಧ್ಯಾನ ವಿದ್ಯಾಸಂಸ್ಥೆಯಲ್ಲಿರುವ ಮತಗಟ್ಟೆಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ತೆರಳಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತದಾನವಾಗಲಿದ್ದು, ಒಂದು ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುವೆಂಪುನಗರದ ಗೋಕುಲ ಶಾಲೆಯಲ್ಲಿನ ಮತಗಟ್ಟೆಯಲ್ಲಿ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ತಮ್ಮ ಪತ್ನಿ ಸಮೇತ ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಅವರು, ಎಲ್ಲರೂ ಕಡ್ಡಾಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನ ಮಾಡಿ ಉತ್ತಮ ನಾಗರಿಕರಾಗಿ. ಚುನಾವಣೆ ಅನ್ನೋದು ಪ್ರಜಾಪ್ರಭುತ್ವದ ಹಬ್ಬ. ನಾನು ಎಲ್ಲೇ ಇದ್ದರೂ ಯಾವುದೇ ಚುನಾವಣೆಯನ್ನು ಮಿಸ್ ಮಾಡಿಕೊಂಡಿಲ್ಲ. ಎಲ್ಲರೂ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.