ವಿದ್ಯಾರ್ಥಿನಿ ಹತ್ಯೆ, ಬಾಂಬ್ ಸ್ಫೋಟ ಖಂಡಿಸಿ ಪ್ರತಿಭಟನೆ

ಮೈಸೂರು: ರಾಯಚೂರಿನ ವಿದ್ಯಾರ್ಥಿನಿ ಹತ್ಯೆ, ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಪ್ರತ್ಯೇಕ ಮೂರು ಪ್ರತಿಭಟನೆಗಳು ನಡೆದವು.

ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ, ತಮಿಳುನಾಡಿನ ಪೊನ್ಪರಪಿಯಲ್ಲಿ ದಲಿತರ ಮೇಲೆ ಮೇಲ್ವರ್ಗದವರು ನಡೆಸಿದ ದಾಳಿ ಹಾಗೂ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಖಂಡಿಸಿ ಮಾನಸಗಂಗೋತ್ರಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ರಾಮರಾಜು, ಪ್ರಕಾಶ್, ಮಂಜು, ವಸಂತಕುಮಾರ್, ಕೈಲಾಶ್ ಮೂರ್ತಿ, ಅಕ್ಷತಾ, ಶಿವಕುಮಾರ್ ಪಾಲ್ಗೊಂಡಿದ್ದರು.

ಜನಪರ ವೇದಿಕೆ: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಹತ್ಯೆಗೀಡಾದ ಯುವತಿಗೆ ನ್ಯಾಯ ಒದಗಿಸಿಕೊಡಲು ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಸೋಮೇಗೌಡ, ನಿಂಗಪ್ಪ, ಮಂಜುನಾಥ್ ಇತರರಿದ್ದರು.

ಏಕಾಂಗಿ ಪ್ರತಿಭಟನೆ: ಪ್ರೊಫೇಸರ್ ಆಗಿ ಬಡ್ತಿ ನೀಡುವಂತೆ ಆಗ್ರಹಿಸಿ ಮಹಾರಾಜ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ವಿಶ್ವನಾಥ್ ಏಕಾಂಗಿಯಾಗಿ ಮಾನಸ ಗಂಗೋತ್ರಿಯ ಗಾಂಧಿ ಭವನ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ನನಗೆ ಪ್ರೊಫೇಸರ್ ಆಗಲು ಎಲ್ಲ ಅರ್ಹತೆ ಇದೆ. 2007ರಿಂದ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮೈಸೂರು ವಿವಿಯಲ್ಲಿ ಜಾತಿ ರಾಜಕೀಯ ನಡೆಯುತ್ತಿದ್ದು, ನಾನೊಬ್ಬ ಲಿಂಗಾಯತ ಎಂಬ ಕಾರಣಕ್ಕೆ ನನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ. ಅರ್ಹತೆ ಇಲ್ಲದವರಿಗೆ ವಿವಿ ಪ್ರೊಫೇಸರ್‌ಆಗಿ ಬಡ್ತಿ ನೀಡಲಾಗಿದೆ. ಆದರೆ, ನನ್ನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *