ಮೈಸೂರು ವಿವಿ ಅರೆಕಾಲಿಕ, ಅತಿಥಿ ಉಪನ್ಯಾಸಕರ ಸೇವೆ ಕಾಯಂ

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಅಥವಾ ಅತಿಥಿ ಉಪನ್ಯಾಸಕರಾಗಿ 10 ವರ್ಷಕ್ಕೂ ಅಧಿಕ ಅವಧಿ ಪೂರ್ಣಗೊಳಿಸಿರುವವರನ್ನು ಕಾಯಂಗೊಳಿಸುವಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸೇವೆ ಕಾಯಂಗೊಳಿಸಲು ರಾಜ್ಯ ಸರ್ಕಾರ ಹಾಗೂ ಮೈಸೂರು ವಿವಿಗೆ ನಿರ್ದೇಶಿಸುವಂತೆ ಕೋರಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಅಟ್ಟಿಹಳ್ಳಿಯ ಡಾ.ಎಂ. ಕಾಂತರಾಜು ಸೇರಿ 50ಕ್ಕೂ ಅಧಿಕ ಉಪನ್ಯಾಸಕರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಈ ತೀರ್ಪು ನೀಡಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ – 1976ರ ಸೆಕ್ಷನ್ 51ಬಿ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ – 2000ದ ಸೆಕ್ಷನ್ 56ರ ಅನುಸಾರ ಅತಿಥಿ ಉಪನ್ಯಾಸಕರು ಅಥವಾ ಅರೆಕಾಲಿಕ ಉಪನ್ಯಾಸಕರನ್ನು ಒಂದು ಸಲದ ಕ್ರಮವಾಗಿ ತಕ್ಷಣವೇ ಕಾಯಂಗೊಳಿಸಬೇಕು. ತೀರ್ಪು ನೀಡಿದ ದಿನದಿಂದ ಆರು ತಿಂಗಳ ಒಳಗೆ ಸೇವೆ ಕಾಯಂಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ಮೈಸೂರು ವಿವಿಗೆ ಆದೇಶಿಸಿದೆ.

ತೀರ್ಪಿನಲ್ಲೇನಿದೆ?: ಸೇವಾ ಕಾಯಂ ನಿಯಮ 2004 ಅನ್ನು 2007ರ ಫೆ.7ರಂದು ಅಸೂಚನೆ ಹೊರಡಿಸಲಾಗಿದೆ. ಆದರೆ ಆನಂತರವೂ ವಿವಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ – 2000ದ ಸೆಕ್ಷನ್ 56 ಅನ್ವಯ ತಾತ್ಕಾಲಿಕ ನೇಮಕಗಳನ್ನು ಮುಂದುವರಿಸಿದೆ. ಸೆಕ್ಷನ್ 56ರ ಉಪ ನಿಯಮ (1)ರ ಅನ್ವಯ ಮಂಜೂರಾದ ಹುದ್ದೆಗಳಿಗೆ ವಿಳಂಬ ಮಾಡದೆ ನೇಮಕಾತಿಗಳನ್ನು ಮಾಡಿಕೊಳ್ಳಬೇಕಿತ್ತು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ತೀರ್ಪಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಸೇವಾ ಕಾಯಂ ನಿಯಮದಂತೆ 10 ವರ್ಷಕ್ಕೂ ಅಧಿಕ ಅವಧಿ ಸೇವೆ ಸಲ್ಲಿಸಿರುವ ಉಪನ್ಯಾಸಕರನ್ನು ಕಾಯಂಗೊಳಿಸಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಯುಜಿಸಿ ನಿಯಮದಂತೆ ಎನ್​ಇಟಿ/ಎಸ್​ಎಲ್​ಇಟಿ ಸೇರಿ ಅಗತ್ಯ ವಿದ್ಯಾರ್ಹತೆಗಳನ್ನು ಪಡೆಯಲು ನಿಗದಿತ ಅವಧಿಯಲ್ಲಿ ಅಗತ್ಯ ವಿದ್ಯಾರ್ಹತೆ ಪಡೆದುಕೊಳ್ಳಲು ಷರತ್ತುಗಳನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದೆ.

ಸೇವೆ ಕಾಯಂ ವೇಳೆ ವಿಶ್ವವಿದ್ಯಾಲಯ ರೋಸ್ಟರ್ ಮತ್ತು ಮೀಸಲು ನಿಯಮ ಪಾಲಿಸಬೇಕು ಎಂದು ಹೇಳಲಾಗಿದೆ.