‘ಮೈಸೂರು ಪಕ್ಷಿ ಹಬ್ಬ’ಕ್ಕೆ ಜಿಲ್ಲಾಧಿಕಾರಿ ಚಾಲನೆ

ಮೈಸೂರು: ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಯಿಂದ ಆಯೋಜಿಸಿರುವ ‘ಮಾಗಿ’ ಉತ್ಸವದ ಅಂಗವಾಗಿ ಎರಡು ದಿನಗಳ ‘ಮೈಸೂರು ಪಕ್ಷಿ ಹಬ್ಬ’ಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಶುಕ್ರವಾರ ಚಾಲನೆ ನೀಡಿದರು.

ಮೈಸೂರು ಮೃಗಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾವೇ ಛಾಯಾಗ್ರಹಣದ ಮೂಲಕ ಸೆರೆ ಹಿಡಿದಿರುವ ಪಕ್ಷಿಗಳ ಚಿತ್ರಗಳ ಮೂಲಕ ಶಿಬಿರಾರ್ಥಿಗಳಿಗೆ ಪಕ್ಷಿಗಳ ಕುರಿತು ವಿವರಣೆ, ಉಪನ್ಯಾಸ ನೀಡುವ ಮೂಲಕ ತಮ್ಮ ಪಕ್ಷಿ ಪ್ರೀತಿ ವ್ಯಕ್ತಪಡಿಸಿದರು.

ಕಡಿಮೆ ಅವಧಿಯಲ್ಲಿ ಮೈಸೂರು ಪಕ್ಷಿ ಉತ್ಸವವನ್ನು ಸಂಘಟಿಸಲಾಗಿದ್ದು, 100ಕ್ಕೂ ಹೆಚ್ಚು ಜನ ಪಕ್ಷಿ ವೀಕ್ಷಣೆಗೆ ಹೆಸರು ನೊಂದಾಯಿಸಿದ್ದಾರೆ.ಮುಂದಿನ ವರ್ಷದಲ್ಲಿ ಪಕ್ಷಿ ಉತ್ಸವವನ್ನು ಇನ್ನಷ್ಟು ವ್ಯವಸ್ಥಿತವಾಗಿ ಸಂಘಟಿಸುವ ಉದ್ದೇಶ ಹೊಂದಲಾಗಿದೆ. ಆಸಕ್ತಿಯುಳ್ಳವರನ್ನು ಮಾತ್ರ ಈ ಉತ್ಸವದಲ್ಲಿ ಪಾಲ್ಗೊಳ್ಳಲಿ ಎನ್ನುವ ಉದ್ದೇಶದಿಂದ ಮಾತ್ರ ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕೆರೆ, ಅರಣ್ಯ, ಗಿಡಗಗಂಟೆಗಳು, ಉದ್ಯಾನವನ, ಕೃಷಿ ಭೂಮಿ, ಕರಾವಳಿ ಪ್ರದೇಶಗಳಲ್ಲಿ, ಸಮುದ್ರಗಳ ದಡದಲ್ಲಿ, ಕಸ ಸುರಿದಿರುವ ಸ್ಥಳ ಸೇರಿದಂತೆ ವಿವಿಧೆಡೆ ಪಕ್ಷಿಗಳು ಹೆಚ್ಚಾಗಿ ಕಂಡುಬರುತ್ತವೆ. ಪ್ರತಿಯೊಂದು ಪಕ್ಷಿಯ ಜೀವನ ವಿಧಾನವೂ ವಿಭಿನ್ನವಾಗಿರುತ್ತದೆ. ಅವುಗಳನ್ನು ತಿಳಿದುಕೊಳ್ಳುವುದೇ ಒಂದು ವಿಶೇಷ ಅನುಭವ ನೀಡುತ್ತದೆ ಎಂದರು.

ಪಕ್ಷಿ ವೀಕ್ಷಣೆ ಕುರಿತಂತೆ ಪ್ರಾತ್ಯಕ್ಷಿಕೆಯೊಂದಿಗೆ ತಮಗಿರುವ ಪಕ್ಷಿಗಳ ವೀಕ್ಷಣೆ ಹವ್ಯಾಸ, ಪಕ್ಷಿಗಳ ಗುರುತಿಸುವಿಕೆ, ಛಾಯಾಚಿತ್ರಗಳಲ್ಲಿ ಪಕ್ಷಿಗಳ ಗುರುತಿಸುವುದು, ದ್ವನಿಯನ್ನು ಕಂಡು ಹಿಡಿಯುವುದು, ಪಕ್ಷಿಗಳ ವರ್ತನೆಯಲ್ಲಾದ ಬದಲಾವಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿವರಣೆ ನೀಡಿದರು.

ಕೋಗಿಲೆ, ಕೆಂಬೂತ, ಕುಟ್ರಾ ಹಕ್ಕಿ, ಬುಲ್ ಬುಲ್, ನವೀಲು ಸೇರಿದಂತೆ ವಿವಿಧ ಪಕ್ಷಿಗಳ ಶಬ್ದಗಳನ್ನು ಕೇಳಿಸಿ ಅವು ಯಾವ ಪಕ್ಷಿಗಳ ಶಬ್ದ ಎಂದು ಗುರುತಿಸುವಂತೆ ಪ್ರಶ್ನೆ ಕೇಳಿ ಸರಿ ಉತ್ತರ ನೀಡಿದವರಿಗೆ ಚಾಕಲೇಟ್ ಅನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದರು.

ಡಿಸಿಎಫ್ ಸಿದ್ದರಾಮಪ್ಪ ಚಳ್ಕಾಪುರೆ ಮಾತನಾಡಿ, ಎರಡು ದಿನಗಳ ಪಕ್ಷಿ ಹಬ್ಬದಲ್ಲಿ 106 ಜನ ಪಾಲ್ಗೊಂಡಿದ್ದು, 6 ತಂಡಗಳಾಗಿ ವಿಂಗಡಿಸಲಾಗಿದೆ. ಕಾರಂಜಿ ಕೆರೆ, ಲಿಂಗಾಂಬುದಿ ಪಾಳ್ಯ, ಹೆಬ್ಬಾಳ್ ಕೆರೆ, ಲಿಂಗಾಂಬುದಿ ಕೆರೆ, ಗಿರಿ ಬೆಟ್ಟದ ಕೆರೆ, ವರಕೋಡು ಕೆರೆಯಲ್ಲಿ ಪಕ್ಷಿ ವೀಕ್ಷಣೆ ನಡೆಯಲಿದೆ ಎಂದರು.

ಮೈಸೂರು ನೇಚರ್ ಕ್ಲಬ್ ಸಂಸ್ಥಾಪಕ ಶಿವಪ್ರಕಾಶ್ ಮಾತನಾಡಿ, ಪಕ್ಷಿ ವೀಕ್ಷಣೆಗೆ ಮೈಸೂರು ಸೂಕ್ತವಾಗಿದೆ. ಸ್ವಾತಂತ್ರ್ಯಕ್ಕೂ ಮುನ್ನ ಹಾಗೂ ಸ್ವಾತಂತ್ರ್ಯಾನಂತರವೂ ಮೈಸೂರಿನಲ್ಲಿ ಪಕ್ಷಿ ವೀಕ್ಷಣೆಗೆ ಸಂಬಂಧಿಸಿದ ದಾಖಲಿಕರಣ ಮಾಡಲಾಗಿದೆ. ಈ ಹಿಂದೆ ಪುಸ್ತಕಗಳಲ್ಲಿ ಮಾತ್ರ ಪಕ್ಷಗಳ ವೀಕ್ಷಣೆ ಮಾಹಿತಿ ಇರುತ್ತಿತ್ತು. ಆದರೆ 2014ರಿಂದ ‘ಇ-ಬರ್ಡ್ ಅಂತರ್ಜಾಲದ ಮೂಲಕ ಪಕ್ಷಿಗಳ ಬಗ್ಗೆ ಮಾಹಿತಿ ಅರಿತುಕೊಳ್ಳಬಹುದಾಗಿದೆ ಎಂದರು.

ಸುಹೇಲ್ ಖ್ವಾಡರ್ ಅವರಿಂದ ನಾಗರಿಕರ ವಿಜ್ಞಾನದ ಮೂಲಕ ಪಕ್ಷಿಗಳ ಬಗ್ಗೆ ಅರಿಯುವಿಕೆ, ಬಿ.ಆರ್. ಶೇಷಗಿರಿ ಅವರಿಂದ ಮೈಸೂರು ಪ್ರಾಂತ್ಯದಲ್ಲಿ ವಲಸೆ ಹಕ್ಕಿಗಳ ಪ್ರಬೇಧಗಳ ಬಗ್ಗೆ, ಎ. ಶಿವಪ್ರಕಾಶ್ ಅವರು ಮೈಸೂರು ಬರ್ಡ್ಸ್ ಅಟ್ಲಾಸ್ ಪರಿಚಯಿಸಿದರು.

ಮೃಗಾಲಯದ ಉಪ ನಿರ್ದೇಶಕ ಮಂಜುನಾಥ್, ಆರ್‌ಎಫ್‌ಒ ಮಂಜುನಾಥ್ ಇತರರು ಹಾಜರಿದ್ದರು.