ಸಿದ್ದು ಟೀಕಿಸಲು ಎಚ್‌ವಿಗೆ ಯಾವ ಅರ್ಹತೆ ಇದೆ

ಮೈಸೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌ಗೆ ಯಾವ ಅಧಿಕಾರ ಇದೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರು. ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಸಾಮರಸ್ಯ ಮೂಡಿಸುವ ಹೇಳಿಕೆಗಳನ್ನು ನೀಡಬೇಕೇ ಹೊರತು ಸಾಮರಸ್ಯ ಕದಡುವ ಹೇಳಿಕೆ ನೀಡಬಾರದು ಎಂದರು.

ವಿಶ್ವನಾಥ್ ಏತಕ್ಕೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ಕಳ್ಳರ ಮನಸ್ಸು ಹುಳ್ಳುಳ್ಳುಗೆ ಇರುತ್ತಲ್ಲ ಅದಕ್ಕೆ ಅವರು ಈ ರೀತಿ ಮಾತಾಡಿರಬಹುದು. ಅವರ ಮಾತು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.

ದೇಶದಲ್ಲಿ ನಿಷ್ಪಕ್ಷಪಾತ ಚುನಾಣೆ ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ ಚುನಾವಣಾ ಆಯೋಗದ ಸಭೆಯಲ್ಲಿ ಆಯೋಗದ ಸದಸ್ಯೆಯೊಬ್ಬರು ಆಯೋಗದ ತೀರ್ಮಾನವನ್ನು ಪ್ರತಿಭಟಿಸಿ ಹೊರ ನಡೆದರು. ನಿಷ್ಪಕ್ಷಪಾತ ಚುನಾವಣೆ ನಡೆದಿದೆಯೇ ಎಂಬ ಅನುಮಾನ ಸ್ವತಃ ಆಯೋಗದ ಸದಸ್ಯರಲ್ಲಿ ಕಾಡುತ್ತಿದೆ ಎಂದರು.

ರಾಮಕೃಷ್ಣನಗರದ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡರೆ ಹಲವರಿಗೆ ಹೊಟ್ಟೆ ಕಿಚ್ಚು. ಅವರ ನೇರ ಮಾತಿಗೆ ಕೆಲವರು ಅವರನ್ನು ದುರಹಂಕಾರಿ ಎಂದು ಟೀಕಿಸುತ್ತಾರೆ. ಆದರೆ, ಸಿದ್ದರಾಮಯ್ಯ ಅವರದು ಸಾತ್ವಿಕ ಸಿಟ್ಟು ಎಂದರು.

ಕೆಲವು ಪಟ್ಟಭದ್ರರಿಗೆ ಸಿದ್ದರಾಮಯ್ಯ ನುಂಗಲಾರದ ತುತ್ತು. ಅಧಿಕಾರ ಇದ್ದಾಗ ಒಂದು ರೀತಿ ಇರುತ್ತಾರೆ. ಅಧಿಕಾರ ಕಳೆದುಕೊಳ್ಳುವ ವಿಚಾರ ತಿಳಿಯುತ್ತಿದ್ದಂತೆಯೇ ಕಲ್ಲು ಹೊಡೆಯುತ್ತಾರೆ. ಇದಕ್ಕೆ ಅವರು ಕಲ್ಲನ್ನು ಜತೆಯಲ್ಲಿಯೇ ಇಟ್ಟುಕೊಂಡಿರುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *