ಪರಿಸರ ಅಸಮತೋಲನದಿಂದ ಜೀವ ಸಂಕುಲಕ್ಕೆ ಧಕ್ಕೆ

  • ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಸ್.ಯಾಲಕ್ಕಿ ಆತಂಕ
  • ಬೇಸಿಗೆ ಶಿಬಿರ ಉದ್ಘಾಟನೆ
  • ಪ್ರಕೃತಿ ರಕ್ಷಣೆಗೆ ಹೆಚ್ಚಿನ ಆದ್ಯತೆ ಅನಿವಾರ್ಯ

ಮೈಸೂರು: ಜನಸಂಖ್ಯೆ ಹೆಚ್ಚಿದಂತೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಇದರಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುವುದಲ್ಲದೆ, ವನ್ಯಜೀವಿಗಳ ಸಂಕುಲಕ್ಕೂ ಧಕ್ಕೆಯಾಗುತ್ತಿದೆ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಸ್.ಯಾಲಕ್ಕಿ ಆತಂಕ ವ್ಯಕ್ತಪಡಿಸಿದರು.

ಶ್ರೀ ಚಾಮರಾಜೇಂದ್ರ ಮೃಗಾಲಯ, ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದ ಸಹಯೋಗದಲ್ಲಿ ಮೃಗಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 2019ರ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಳೆದ ಇಪ್ಪತ್ತೈದು ವರ್ಷಗಳಿಂದ ಪರಿಸರ ಸಂರಕ್ಷಣೆ ಮತ್ತು ಅರಣ್ಯ ರಕ್ಷಣೆ ಕುರಿತು ಹೆಚ್ಚಾಗಿ ಮಾತನಾಡುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ಪರಿಸರದ ವಾತಾವರಣದಲ್ಲಿನ ಏರುಪೇರು. ಈಗಿನ ಸಂದರ್ಭದಲ್ಲಿ ನಾವು ಪರಿಸರ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಾದ ಅನಿವಾರ್ಯದಲ್ಲಿದ್ದೇವೆ. ಹೀಗಾಗಿ ಮುಂದಿನ ಪೀಳಿಗೆಗೆ ಅರಣ್ಯ ಸಂರಕ್ಷಣೆಯ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಈ ಬೇಸಿಗೆ ಶಿಬಿರ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಬೇಸಿಗೆ ಶಿಬಿರ ಎಂದರೆ, ಬಂದೂಕು ತರಬೇತಿ, ಹಾಡು, ನಾಟಕ ಹೀಗೆ ನಾನಾ ರೀತಿಯ ಶಿಬಿರಗಳು ನಡೆಯುತ್ತವೆ. ಎಲ್ಲವು ತನ್ನದೇ ಆದ ಮಹತ್ವ ಹೊಂದಿರುತ್ತವೆ. ಆದರೆ, ಮೃಗಾಲಯದಲ್ಲಿ ನಡೆಯುವ ಶಿಬಿರ ವಿಭಿನ್ನವಾಗಿದ್ದು, ಪರಿಸರ ಸಂರಕ್ಷಣೆ, ಕಾಡು, ವನ್ಯ ಜೀವಿ ಸಂರಕ್ಷಣೆ, ಮಣ್ಣು, ಜಲ ಸಂರಕ್ಷಣೆ, ಪ್ರಾಣಿಗಳ ವರ್ತನೆ, ಜೀವನ ಶೈಲಿ ಸೇರಿದಂತೆ ಹಲವಾರು ವಿಷಯಗಳನ್ನು ತಿಳಿಸುತ್ತದೆ ಎಂದರು.

ಪರಿಸರದ ಮಹತ್ವ, ಕಾಡು ಮತ್ತು ವನ್ಯಜೀವಿಗಳು ಇರಬೇಕಾದ ಅಗತ್ಯ ಮತ್ತು ಅವುಗಳ ಜೀವನಕ್ರಮ ಹಾಗೂ ಸಂರಕ್ಷಣೆಯ ವಿಧಾನವನ್ನು ತಿಳಿಸಿದರು.

ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದ ಮುಖ್ಯಸ್ಥ ಡಾ.ಜಿ.ಎನ್.ಇಂದ್ರೇಶ್ ಮಾತನಾಡಿದರು. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಶಿಬಿರದಲ್ಲಿ ಏನೇನು ಇರಲಿದೆ
ಈ ಬಾರಿ ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದ ಸಹಭಾಗಿತ್ವದಲ್ಲಿ ಮೃಗಾಲಯವು ಎರಡು ತಂಡಗಳಲ್ಲಿ ಶಿಬಿರ ಆಯೋಜಿಸಿದೆ. ಮೊದಲ ತಂಡ ಏ.21ರಿಂದ 30ರವರೆಗೆ ಮತ್ತು ಎರಡನೇ ತಂಡಕ್ಕೆ ಮೇ 5ರಿಂದ 14ರವರೆಗೆ ಶಿಬಿರ ನಡೆಯಲಿದೆ. ಪ್ರತಿ ತಂಡದಲ್ಲಿ 65 ವಿದ್ಯಾರ್ಥಿಗಳಿರುತ್ತಾರೆ. ಶಿಬಿರದಲ್ಲಿ ಪರಿಸರ ಸಂರಕ್ಷಣೆ, ಪ್ರಾಣಿ-ಪಕ್ಷಿ ಸಂಕುಲಗಳ ಬಗ್ಗೆ ತಿಳಿವಳಿಕೆ, ಮೃಗಾಲಯದ ವನ್ಯಜೀವಿಗಳ ಪರಿಚಯ, ಪಕ್ಷಿ ವೀಕ್ಷಣೆ, ಕಾರಂಜಿಕೆರೆ ವೀಕ್ಷಣೆ, ಪ್ರಾದೇಶಿಕ ಪ್ರಾಕೃತಿಕ ಸಂಗ್ರಹಾಲಯಕ್ಕೆ ಭೆೇಟಿ, ವನ್ಯಜೀವಿಗಳ ಕಾನೂನು, ಪ್ರಾಣಿಗಳ ವರ್ತನೆ, ಮರಗಿಡಗಳ ಗುರುತಿಸುವಿಕೆ ಸೇರಿದಂತೆ ಅನೇಕ ವಿಷಯಗಳನ್ನು ತಿಳಿಸಿಕೊಡಲಾಗುತ್ತದೆ.

Leave a Reply

Your email address will not be published. Required fields are marked *