ಖಾಸಗಿ ವ್ಯಕ್ತಿಗಳಿಂದ ಭೂ ಕಬಳಿಕೆ ಆರೋಪ

ದಲಿತರೊಡಗೂಡಿ ಭೂ ಮಾಲೀಕನಿಂದ ಪ್ರತಿಭಟನೆ

ಮೈಸೂರು: ದಲಿತರಿಗೆ ಸೇರಿದ ಭೂಮಿಯನ್ನು ಸ್ಕಿಲ್‌ಟೆಕ್ ಸಂಸ್ಥೆ ಹಾಗೂ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಜಂಟಿಯಾಗಿ ಒತ್ತುವರಿ ಮಾಡಿಕೊಂಡು ವಂಚಿಸಿವೆ ಎಂದು ಆರೋಪಿಸಿ ಭೂಮಾಲೀಕರೊಬ್ಬರು ದಲಿತರೊಡಗೂಡಿ ಗುರುವಾರ ಪ್ರತಿಭಟನೆ ಮಾಡಿದರು.
ಬನ್ನೂರು ವರ್ತುಲ ರಸ್ತೆಯ ಮಾನಸ ನಗರದಲ್ಲಿ ಕಬಳಿಕೆಯಾದ ಜಮೀನಿನಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿದರು.
ಹಂಚ್ಯಾ ಗ್ರಾಮ ಪಂಚಾಯಿತಿಯ ಸರ್ವೇ ನಂ.174, 176/1ಬಿ ಮತ್ತು 176/2ಬಿ ಭೂಮಿಯನ್ನು ಸ್ಕಿಲ್‌ಟೆಕ್ ಸಂಸ್ಥೆ ಮಾಲೀಕರಾದ ಶಿವಶಂಕರ್ ಹಾಗೂ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಜಂಟಿಯಾಗಿ ಸುಳ್ಳು ದಾಖಲೆ ಸೃಷ್ಟಿಸಿ ನನ್ನನ್ನು ವಂಚಿಸಿದ್ದಾರೆ ಎಂದು ಭೂಮಾಲೀಕ ಪುಟ್ಟಯ್ಯ ಆರೋಪಿಸಿದರು.
ಕಬಳಿಕೆಯಾದ ಭೂಮಿಯನ್ನು ಉಳುಮೆ ಮಾಡಲು ಅವಕಾಶ ನೀಡಿ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಆಲನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕಮಹದೇವ, ನಾಗನಹಳ್ಳಿ ಪ್ರಸಾದ್, ಪಾಲಿಕೆ ಸದಸ್ಯ ಶ್ರೀಧರ್, ಮುಖಂಡರಾದ ಎಂ.ನಾಗರಾಜು, ಕೇಬಲ್ ಬಾಬಣ್ಣ, ತಮಟೆ ನಂಜಪ್ಪ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *