ಸಿದ್ದರಾಮನಹುಂಡಿ ಮತಗಟ್ಟೆಯಲ್ಲಿ ಕೈಕೊಟ್ಟ ವಿವಿಪ್ಯಾಟ್

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬರುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಸರ್ಕಾರಿ ಶಾಲೆಯ ಮತಕೇಂದ್ರ 86ರಲ್ಲಿ ವಿವಿ ಪ್ಯಾಟ್ ಕೈಕೊಟ್ಟಿದ್ದರಿಂದ ಮತದಾನ ಕೆಲ ಹೊತ್ತು ಸ್ಥಗಿತಗೊಂಡಿತ್ತು.

ಬೆಳಗ್ಗೆ ಮತದಾನ ಮಾಡಲು ಆಗಮಿಸಿದ್ದ ಗ್ರಾಮಸ್ಥರು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ, ಮತಗಟ್ಟೆ ಕೇಂದ್ರದ ಸಂಖ್ಯೆ 86ರಲ್ಲಿ ವಿವಿ ಪ್ಯಾಟ್ ಕೈಕೊಟ್ಟಿತ್ತು. ಇದರಿಂದ ಗಲಿಬಿಲಿಗೊಂಡ ಮತಗಟ್ಟೆಯ ಅಧಿಕಾರಿಗಳು, ವಿವಿ ಪ್ಯಾಟ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ, ಮತದಾನಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಗ್ರಾಮಸ್ಥರು ಮತದಾನ ಮಾಡಿದರು.

ಪುತ್ರನಿಗಾಗಿ ಕೆಲ ಹೊತ್ತು ಕಾದ ಮಾಜಿ ಸಿಎಂ
ಕೆಲ ಹೊತ್ತಿನ ಬಳಿಕ ಇಲ್ಲಿಗೆ ಆಗಮಿಸಿದ ಸಿದ್ದರಾಮಯ್ಯ ಮತದಾನ ಮಾಡಿದರು. ಇದಕ್ಕೂ ಮೊದಲು ತಮ್ಮ ಪುತ್ರನ ಆಗಮನಕ್ಕಾಗಿ ಅವರು ಕೆಲ ನಿಮಿಷ ಮತಗಟ್ಟೆ ಕೇಂದ್ರದ ಹೊರಗಡೆಯೇ ಕಾದು ಕುಳಿತಿದ್ದರು. ವರುಣ ಶಾಸಕರಾಗಿರುವ ಡಾ.ಯತೀಂದ್ರ ಬಂದ ಮೇಲೆ ಒಟ್ಟಿಗೆ ತೆರಳಿ ಮತದಾನ ಮಾಡಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಇದರಲ್ಲಿ 10 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಡ್ಲಿ-ವಡೆ, ಸೆಟ್ ದೋಸೆ ಸವಿದ ಮಾಜಿ ಸಿಎಂ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಲು ಹುಟ್ಟೂರಾದ ಸಿದ್ದರಾಮನಹುಂಡಿಗೆ ತೆರಳುವ ಮುನ್ನ, ನಗರದಲ್ಲಿ ಹೋಟೆಲ್‌ನಿಂದ ಉಪಾಹಾರ ತರಿಸಿಕೊಂಡು ಕಾರಿನಲ್ಲಿಯೇ ಸವಿದರು.

ಮತದಾನ ಮಾಡಲು ಕಲಬುರಗಿಯಿಂದ ವಿಶೇಷ ವಿಮಾನದಲ್ಲಿ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ನೇರವಾಗಿ ಚಾಮರಾಜೇಂದ್ರ ಮೃಗಾಲಯದ ಎದುರಿನ ಹೋಟೆಲ್ ಬಳಿ ಬಂದರು. ಕಾರಿನಲ್ಲೇ ಕುಳಿತು ಇಡ್ಲಿ-ವಡೆ ಮತ್ತು ಸೆಟ್ ದೋಸೆ ಸವಿದರು. ಈ ಸಂದರ್ಭದಲ್ಲಿ ಜಮಾವಣೆಗೊಂಡ ಅವರ ಅಭಿಮಾನಿಗಳು, ಕುಶಲೋಪರಿ ವಿಚಾರಿಸಿ ನಂತರ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.

Leave a Reply

Your email address will not be published. Required fields are marked *