ಸಮನ್ವಯ ಸಾಧಿಸಲು ಮುಂದಾದ ಸಿದ್ದರಾಮಯ್ಯ

ಮೈಸೂರು: ಹಠಕ್ಕೆ ಬಿದ್ದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಾಧಿಸಲು ಮುಂದಾಗಿದ್ದಾರೆ.

ಪಕ್ಷದ ಅಧಿಕೃತ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮಾ.25ರಂದು ನಾಮಪತ್ರ ಸಲ್ಲಿಸಲಿರುವುದರಿಂದ ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ ಸಿದ್ದರಾಮಯ್ಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದರು.

ಭಾನುವಾರ ಖಾಸಗಿ ಹೋಟೆಲ್‌ಗೆ ಸಿದ್ದರಾಮಯ್ಯ ತೆರಳಿ ತಮ್ಮ ಪಕ್ಷದ ಮುಖಂಡರನ್ನು ಆಹ್ವಾನಿಸಿ ಆಪ್ತ ಸಮಾಲೋಚನೆ ನಡೆಸಿದರು. ಅಲ್ಲದೆ ರಾತ್ರಿಯೂ ಶಾರದಾದೇವಿನಗರದ ತಮ್ಮ ನಿವಾಸದಲ್ಲಿ ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ತೀರ ಖಾಸಗಿಯಾಗಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್‌ಸೇಠ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇತರರು ಭಾಗವಹಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಕಾರ್ಯಕರ್ತರ ಒಗ್ಗಟಿನ ಪ್ರದರ್ಶನ ಹಾಗೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಿದರೆನ್ನಲಾಗಿದೆ.

ನಾಮಪತ್ರ ಸಲ್ಲಿಕೆ: ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರು ಮಾ.25ರಂದು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

ಈ ವೇಳೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್‌ಸೇಠ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕರಾದ ವಾಸು, ಎಚ್.ಪಿ.ಮಂಜುನಾಥ್, ಕೆ.ವೆಂಕಟೇಶ, ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ವಿವಿಧ ನಿಗಮ ಮಂಡಳಿ, ಬ್ಲಾಕ್ ಅಧ್ಯಕ್ಷರು, ಮುಖಂಡರು ಭಾಗವಹಿಸಲಿದ್ದಾರೆ.