23 ರಿಂದ ಶರಣರ ಚಿಂತನಾ ಕಾರ್ಯಕ್ರಮ

ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

ವಿಜಯವಾಣಿ ಸುದ್ದಿಜಾಲ ಮೈಸೂರು
ಬಸವ ತತ್ವ ಪ್ರಚಾರ ಪ್ರತಿಷ್ಠಾನದ ವತಿಯಿಂದ 12ನೇ ಶತಮಾನದ ಬಸವಾದಿ ಶರಣರ ತತ್ವ ವಿಚಾರ, ವಚನ ಸಂಸ್ಕೃತಿಯನ್ನು ಯುವ ಸಮೂಹಕ್ಕೆ ತಿಳಿಸುವ ನಿಟ್ಟಿನಲ್ಲಿ ಏ.23 ರಿಂದ 26 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ವಾಹಿನಿ ನಿರ್ದೇಶಕ ಈ.ಕೃಷ್ಣಪ್ಪ ಹೇಳಿದರು.
ಏ.23 ರಿಂದ 26ರವರೆಗೆ ಬೆಳಗ್ಗೆ 9 ರಿಂದ ರಾತ್ರಿ 9ಗಂಟೆವರೆಗೆ ಕಲಾಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶರಣರ ಚಿಂತನೆಗಳನ್ನು ಪ್ರಚುರಪಡಿಸಿ, ಯುವ ಸಮೂಹದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದನ್ನು ಬಸವ ಟಿವಿಯಲ್ಲಿ ಪ್ರಸಾರ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶರಣ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಒಳಗೊಂಡ ವಚನ ನೃತ್ಯ, ವಚನ ಗಾಯನ, ನಾಟಕಗಳು, ರೂಪಕಗಳು ಹಾಗೂ ಪ್ರವಚನಗಳನ್ನು ಯಾರು ಬೇಕಾದರೂ ನೀಡಬಹುದಾಗಿದೆ. ಕಾರ್ಯಕ್ರಮವನ್ನು ಸ್ಥಳದಲ್ಲಿಯೇ ಚಿತ್ರೀಕರಿಸಿ ರಾಜ್ಯಾದ್ಯಂತ ಪ್ರಸಾರ ಮಾಡಲಿದ್ದು, ಈ ಅವಕಾಶವನ್ನು ಜಿಲ್ಲಾ ವ್ಯಾಪ್ತಿಯ ಕಲಾವಿದರು ಉಪಯೋಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9480329412, 9449022996 ಸಂಪರ್ಕಿಸಬಹುದು ಎಂದು ತಿಳಿಸಿದರು.
ಬಸವ ತತ್ವ ಪ್ರಚಾರ ಪ್ರತಿಷ್ಠಾನದ ಮುಖಂಡರಾದ ಶಿವರುದ್ರಪ್ಪ, ಲಿಂಗರಾಜು, ಜಯಣ್ಣ, ರತ್ನಮ್ಮ, ಶರಣಪ್ಪ ಇದ್ದರು.