ಹಣ, ಅಧಿಕಾರ ಇರುವವರಿಗೆ ಸಮಾಜದ ಗೌರವ

  • ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ
  • ಲಯನ್ಸ್ ಸಂಸ್ಥೆಯ 43ನೇ ವಾರ್ಷಿಕ ಜಿಲ್ಲಾ ಸಮಾವೇಶ
  • ದೇಶದ ಅಭಿವೃದ್ಧಿಗೆ ಮೀಸಲಿಟ್ಟ ಹಣ ಭ್ರಷ್ಟರ ಪಾಲು
  • ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ

ಮೈಸೂರು: ಸಮಾಜ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ನನ್ನ ಅರಿವಿಗೆ ಬಂದದ್ದು ನಾನು ಲೋಕಾಯುಕ್ತ ನ್ಯಾಯಮೂರ್ತಿ ಆದ ನಂತರ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317ಎ ಜಿಲ್ಲಾ ಘಟಕದಿಂದ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋ ತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 43ನೇ ವಾರ್ಷಿಕ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.

ನಾನು ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಆದರೆ, ಆ ಸಂದರ್ಭ ನಾನು ಬಾವಿಯೊಳಗಿನ ಕಪ್ಪೆಯಾಗಿದ್ದೆ. ಸಮಾಜ ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳು ನನ್ನ ಅರಿವಿಗೆ ಆ ಸಂದರ್ಭ ಬರಲೇ ಇಲ್ಲ ಎಂದರು.

ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನನಗೆ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸಮಾಜ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದರ ವಾಸ್ತವದ ಅರಿವು ಬಂತು. ಇಲ್ಲಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ. ಹಣ, ಅಧಿಕಾರ ಇರುವವರಿಗೆ ಮಾತ್ರ ಸಮಾಜ ಗೌರವ ನೀಡುತ್ತಿದೆ ಎಂಬ ಸತ್ಯದ ಅರಿವು ನನಗಾಯಿತು. ಆ ನಂತರ ಸಮಾಜದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.

ನಮ್ಮ ಸಮಾಜ ಇಂದು ಶ್ರೀಮಂತಿಕೆ ಮತ್ತು ಅಧಿಕಾರಕ್ಕೆ ಸಲಾಂ ಹೊಡೆಯುತ್ತಿರುವ ಪರಿಣಾಮ ಯಾರ ಮನದಲ್ಲೂ ಸಂತೃಪ್ತಿಯ ಭಾವನೆ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿದ್ದ ಮೌಲ್ಯಗಳು ಕಣ್ಮರೆಯಾಗಿವೆ. ಉತ್ತಮ ಸಮಾಜ ನಿರ್ಮಾಣಕ್ಕೆ ಹಿಂದಿನ ಕಾಲದಲ್ಲಿದ್ದ ಮೌಲ್ಯ ಗಳ ಅವಶ್ಯಕತೆ ಇದ್ದು, ನಾವಿಂದು ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ತೊಡಗಬೇಕೆಂದು ಕರೆ ನೀಡಿದರು.

ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕಾಗಿದ್ದ ಹಣ ಭ್ರಷ್ಟರ ಪಾಲಾಗುತ್ತಿದೆ. ದೇಶದಲ್ಲಿ 50ರ ದಶಕದಿಂದ ಇಲ್ಲಿಯವರೆಗೆ ಸಾಕಷ್ಟು ಹಗರಣಗಳು ಬೆಳಕಿಗೆ ಬಂದಿವೆ. ಜೀಪು ಹಗರಣದಿಂದ ಪ್ರಾರಂಭಗೊಂಡು ಕಲ್ಲಿದ್ದಲು, ಕಾಮನ್‌ವೆಲ್ತ್, 2ಜಿ ಸ್ಪೆಕ್ಟ್ರಾಂ ಹಗರಣಗಳವರೆಗೆ ನಾವು ಸಾಕಷ್ಟು ಹಗರಣಗಳನ್ನು ನೋಡಿದ್ದೇವೆ. ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕಾದ ಕೋಟ್ಯಂತರ ರೂ. ಈ ರೀತಿ ಸೋರಿಕೆಯಾದರೆ ದೇಶ ಅಭಿವೃದ್ಧಿ ಆಗುವುದು ಯಾವಾಗ? ಈ ರೀತಿಯ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಸಂವಿಧಾನದ ಪ್ರಮುಖ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಭ್ರಷ್ಟಾಚಾರದ ಮಸಿ ಬಳಿದುಕೊಂಡಿವೆ. ಮಾಧ್ಯಮವನ್ನು ಸಾರ್ವಜನಿಕರು ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಿದ್ದಾರೆ. ಆದರೆ, ಮಾಧ್ಯಮ ಕೂಡ ಹಾದಿ ತಪ್ಪಿದ್ದು, ಪೇಯ್ಡ ನ್ಯೂಸ್‌ನಿಂದಾಗಿ ಪತ್ರಿಕೋದ್ಯಮ ತನ್ನ ಪಾವಿತ್ರೃತೆ ಉಳಿಸಿಕೊಂಡಿಲ್ಲ. ಸದನದಲ್ಲಿ ಇತ್ತೀಚೆಗೆ ಗಂಭೀರ ಚರ್ಚೆಗಳೇ ನಡೆಯುತ್ತಿಲ್ಲ. ಸಭಾತ್ಯಾಗ ಮಾಡುವುದೇ ಶಾಸಕಾಂಗದ ಬಹುಮುಖ್ಯ ಕರ್ತವ್ಯ ಎಂಬಂತಾಗಿದ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ದೊರೆಯುವುದಿಲ್ಲ. ಹೀಗಾಗಿ ಸರ್ಕಾರಿ ಉದ್ಯೋಗ ಪಡೆದವರು ಭ್ರಷ್ಟ ವ್ಯವಸ್ಥೆಯಲ್ಲಿ ಮುಳುಗದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬಡವರ ಸೇವೆ ಮಾಡಬೇಕು. ಬಡವರಿಗೋಸ್ಕರ ತೆರೆದಿರುವ ಆಸ್ಪತ್ರೆಗಳಲ್ಲಿ ಬಡವರಿಗೆ ಸೂಕ್ತ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ. ಈ ವ್ಯವಸ್ಥೆ ಸುಧಾರಣೆಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕರಾದ ವಿ.ವಿ. ಕೃಷ್ಣ ರೆಡ್ಡಿ, ಕೆ. ವಂಶಿಧರ್ ಬಾಬು, ಜಿಲ್ಲಾ ಗವರ್ನರ್ ವಿ. ರೇಣುಕುಮಾರ್, ಸಂಸ್ಥೆಯ ಕಾರ್ಯದರ್ಶಿ ಎಚ್.ಅಶ್ವತ್ಥ್ ನಾರಾಯಣ, ಖಜಾಂಚಿ ಎಲ್.ವಿ.ಶ್ರೀನಿವಾಸ್, ಮೊದಲ ಜಿಲ್ಲಾ ಗವರ್ನರ್ ಡಾ. ನಾಗರಾಜ್ ವಿ. ಬೈರಿ, ಎರಡನೇ ಜಿಲ್ಲಾ ಗವರ್ನರ್ ಡಾ.ಜಿ.ಎ. ರಮೇಶ್ ಇತರರು ಇದ್ದರು.