ಸಮಾಜದ ಉದ್ಧಾರಕ್ಕೆ ಕೊಡುಗೆ ನೀಡಿ

ಮೈಸೂರು: ಯಾರೊಬ್ಬರೂ ಸ್ವಾರ್ಥಿಗಳಾಗಬೇಡಿ. ಸಮಾಜದ ಉದ್ಧಾರಕ್ಕಾಗಿ ಕೊಡುಗೆ ನೀಡಿ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕರೆಕೊಟ್ಟರು.

ಸರಸ್ವತಿಪುರಂನ ಶ್ರೀಕೃಷ್ಣಧಾಮದ ರಜತ ಮಹೋತ್ಸವ ಸಂಭ್ರಮಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರೂ ಕೇವಲ ಸುಖ, ವೈಭೋಗ ಅನುಭವಿಸಲು ಅಷ್ಟೇ ಸಿಮೀತವಾಗಿದ್ದು, ಸಾಮಾಜಿಕ ಕರ್ತವ್ಯವನ್ನು ಮರೆತಿದ್ದಾರೆ. ಇದು ಸರಿಯಲ್ಲ. ಸ್ವಾರ್ಥಿಯಾಗುವುದನ್ನು ಬಿಟ್ಟು ಮನುಕುಲದ ಕಲ್ಯಾಣಕ್ಕಾಗಿ ಕೊಡುಗೆ ನೀಡಿ ಎಂದು ಶ್ರೀಕೃಷ್ಣ ಹೇಳಿದ್ದು, ಇದು ಕರ್ತವ್ಯ ಸಂದೇಶವೂ ಹೌದು. ಹೀಗಾಗಿ, ಭಕ್ತಿಯೊಂದಿಗೆ ಕರ್ತವ್ಯ ಜಾಗೃತಿಯೂ ಎಲ್ಲೆಡೆ ಪ್ರಸಾರವಾಗಬೇಕು ಎಂದರು.

ಹೋಮ-ಹವನ ಕೇವಲ ಧಾರ್ಮಿಕ ಕಾರ್ಯವಷ್ಟೇ ಅಲ್ಲ, ಅದು ತ್ಯಾಗದ ಸಂಕೇತ. ಪ್ರತಿಯೊಬ್ಬರೂ ಆಧ್ಯಾತ್ಮದ ಮೂಲಕ ಕರ್ತವ್ಯಶೀಲರಾಗಿ ಹೊರಹೊಮ್ಮಬೇಕು.ಇದರೊಂದಿಗೆ ತ್ಯಾಗ ಜೀವನ ಸಾಗಿಸಬೇಕು ಎಂದರು.

ಆಧ್ಯಾತ್ಮಿಕ ವಿದ್ಯೆ ಮತ್ತು ಆಧುನಿಕ ವಿದ್ಯೆ ಬೇರೆ ಬೇರೆಯಲ್ಲ. ಅವುಗಳೆರಡು ಪರಸ್ಪರ ಪೂರಕ. ಆಧ್ಯಾತ್ಮಿಕ ಸಾರವಿಲ್ಲದ ವಿದ್ಯೆ ನಿರುಪಯುಕ್ತ. ಆಧ್ಯಾತ್ಮಕತೆ ತಾವರೆ ಹೂವು ಇದ್ದಂತೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯರ ಮನದಲ್ಲಿ ಕಮಲ ಅರಳಬೇಕು ಎಂದರು.

ಸಂಸಾರದ ನೌಕೆಯಲ್ಲಿ ದೇವಸ್ಥಾನಗಳು ಲೈಟ್‌ಹೌಸ್‌ಗಳಂತೆ. ಸಮುದ್ರ ದಡೆಯಲ್ಲಿ ಇದು ಇರುತ್ತದೆ. ದೀಪಸ್ತಂಭದ ತುದಿಯಲ್ಲಿ ಮಿನುಗುವ ಬೆಳಕನ್ನು ಗಮನಿಸಿ ಹಡಗುಗಳು ಸರಿಯಾದ ದಿಕ್ಕಿನಲ್ಲಿ ಸಾಗಿ ಬರುತ್ತವೆ. ಅಂತೆಯೇ, ಧಾರ್ಮಿಕ ಕೇಂದ್ರಗಳು ಕೂಡ ಬದುಕಿನ ಬೆಳಕು. ಅದು ಸರಿಯಾದ ಮಾರ್ಗವನ್ನು ತೋರಿಸಿ ಮಾರ್ಗದರ್ಶನದೊಂದಿಗೆ ಜೀವನಕ್ಕೆ ಪ್ರೇರಣೆ ನೀಡುತ್ತದೆ ಎಂದರು.

ವ್ಯಕ್ತಿಗೆ ವಯಸ್ಸಾದರೆ ಭಯ ಆವರಿಸುತ್ತದೆ. ಅದು ಮೃತ್ಯುವಿಗೆ ಸಮೀಪಿಸುತ್ತಿದೆ ಎಂಬ ಅರ್ಥ. ಆದ್ದರಿಂದ ವರ್ಷಾಚರಣೆ ಎಂಬುದು ನಲಿಯಲು, ಕುಣಿಯಲು ಅಲ್ಲ. ವಯಸ್ಸು ಆಗುತ್ತಿದೆ ಎಂದರೆ, ಮಾಡುವ ಕೆಲಸವನ್ನು ಬೇಗ ಪೂರೈಸಬೇಕು ಎಂದು ಶ್ರೀಕೃಷ್ಣ ಹೇಳಿದ್ದಾನೆ. ಆದರೆ, ಒಂದು ಸಂಸ್ಥೆಗೆ ವಯಸ್ಸು ಹೆಚ್ಚಾದರೆ ಧೈರ್ಯ, ಭರವಸೆ ಮೂಡುತ್ತದೆ. ಅಂತೆಯೇ 25 ವಸಂತಗಳನ್ನು ಪೂರೈಸಿರುವ ಶ್ರೀಕೃಷ್ಣಧಾಮ ಇನ್ನಷ್ಟು ಕೆಲಸಕಾರ್ಯ ಮಾಡಲಿ ಎಂದು ಆಶಿಸಿದರು.

ವ್ಯಾಸರಾಯ ಮಠದ ವಿದ್ಯಾಶ್ರೀತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಆಧ್ಯಾತ್ಮಿಕತೆ, ದೈವಭಕ್ತಿ ಕುರಿತು ಅಪಸ್ವರವಿದ್ದು, ಅದು ಪ್ರತಿಗಾಮಿ ಚಿಂತನೆ ಎಂಬ ವಾದ ಸರಿಯಲ್ಲ ಎಂದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿ, ಶಿಕ್ಷಣ ಬೇರೆ, ಆಧ್ಯಾತ್ಮ ಬೇರೆ ಎಂಬ ಜಿಜ್ಞಾಸೆವಿದೆ. ಇದು ತಪ್ಪು ಕಲ್ಪನೆ. ಈ ಎರಡಕ್ಕೂ ಪರಸ್ಪರ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಆಧ್ಯಾತ್ಮದ ಜ್ಞಾನವನ್ನು ಬಿತ್ತಬೇಕು ಎಂದರು.

ಭಾರತೀಯರು ನವನಾಗರಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಆದರೆ, ಪಾಶ್ಚಿಮಾತ್ಯರು ನಮ್ಮ ದೇಸಿ ಸಂಸ್ಕೃತಿಯನ್ನು ಕಲಿಯಲು ಇಲ್ಲಿಗೆ ಬರುತ್ತಿದ್ದಾರೆ. ಮೊದಲು ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ತಿಳಿದುಕೊಂಡು ಮೈಗೊಡಿಸಿಕೊಳ್ಳಬೇಕು. ಆಗಲೇ ಅದರ ಮೌಲ್ಯ ತಿಳಿಯಲಿದೆ ಎಂದರು.

ಶ್ರೀಕೃಷ್ಣ ಮಿತ್ರ ಮಂಡಳಿಯ ಪದಾಧಿಕಾರಿಗಳಾದ ರವಿಶಾಸ್ತ್ರಿ, ಪಿ.ಎಸ್. ಚಂದ್ರಶೇಖರ್, ಪಿ.ಜಿ.ಪ್ರವೀಣ್, ಶ್ರೀಕೃಷ್ಣ ಟ್ರಸ್ಟ್‌ನ ಪದಾಧಿಕಾರಿಗಳಾದ ಪಿ.ಜಯರಾಮ್ ಭಟ್, ಎಚ್.ವಿ. ರಾಘವೇಂದ್ರ ಭಟ್ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *