ಶೂನ್ಯ ಭಾರತೀಯರು ಕಟ್ಟಿಕೊಟ್ಟ ತಾತ್ವಿಕ ಸಿದ್ಧಾಂತ

ಮೈಸೂರು: ಸೊನ್ನೆ ಎಂದರೆ ಶೂನ್ಯ, ಏನೂ ಇಲ್ಲ ಎಂದರ್ಥ. ಆದರೆ, ಸೊನ್ನೆ ಎಂಬುದು ಭಾರತೀಯರು ಕಟ್ಟಿಕೊಟ್ಟ ಒಂದು ತಾತ್ವಿಕ ಸಿದ್ಧಾಂತ. ಆನಂತರ ಸೊನ್ನೆ ಗಣಿತದೊಳಗೆ ಸೇರಿತು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಬಿ.ವಾಲಿಕರ್ ಅಭಿಪ್ರಾಯಪಟ್ಟರು.
ನಗರದ ಊಟಿ ರಸ್ತೆ ಬಳಿಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ವತಿಯಿಂದ ಕಾಲೇಜಿನ ಸುವರ್ಣ ಮಹೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ಗಣಿತಶಾಸ್ತ್ರದಲ್ಲಿ ಹೊಸ ಪ್ರವೃತ್ತಿಗಳು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪುರಾತನ ಭಾರತ ಕಾಲದಲ್ಲಿ ವಿಜ್ಞಾನ ಯಾವ ರೀತಿ ಪ್ರಗತಿ ಸಾಧಿಸಿತು ಎಂಬ ಬಗ್ಗೆ ಈಗಿನ ರಾಜಕಾರಣಿಗಳು ಮಾತನಾಡುತ್ತಾರೆ. ನಾವು ವಿಶ್ವಕ್ಕೆ ಸೊನ್ನೆ ಪರಿಕಲ್ಪನೆ ಕೊಟ್ಟೆವು. ವಿಶ್ವಕ್ಕೆ ನಮ್ಮ ಕೊಡುಗೆ ಅಪಾರ ಎಂದು ಹೋದ ಕಡೆಯಲ್ಲೆಲ್ಲ ಪ್ರಶಂಸಿಸಿಕೊಳ್ಳುತ್ತಾರೆ. ಆದರೆ, ಇವರಿಗೆ ಸೊನ್ನೆ ಎಂದರೇನು, ಗಣಿತದಲ್ಲಿ ಅದು ಹೇಗೆ ಹುಟ್ಟಿತು ಎಂಬ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲ. ಮೊದಲು ಸೊನ್ನೆ, ಅದರ ಇತಿಹಾಸ ತಿಳಿದುಕೊಳ್ಳುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು ಎಂದರು.
ಅಂಬರದೊಳಗೊಂದು ಅಡವಿ ಹುಟ್ಟಿತ್ತು ಎಂದು ಅಲ್ಲಮ ಹೇಳುತ್ತಾನೆ. ಆದರೆ, ಆಕಾಶದಲ್ಲಿ ಅಡವಿ ಹುಟ್ಟಲು ಸಾಧ್ಯವೇ ಎಂಬ ಪ್ರಶ್ನೆ ಬರುತ್ತದೆ. ಆದರೆ, ಸಂಸ್ಕೃತದಲ್ಲಿ ಅಂಬರ ಎಂದರೆ ಶೂನ್ಯ. ಶೂನ್ಯದಲ್ಲಿ ಅಡವಿ ಹುಟ್ಟಿತು ಎಂದರೆ ವಿಶ್ವ ಹುಟ್ಟಿತ್ತು ಎಂದರ್ಥ. ಅಲ್ಲಮರ ಈ ಪರಿಕಲ್ಪನೆ ಖ್ಯಾತ ಖಗೋಳವಿಜ್ಞಾನಿ ಸ್ಟಿಫನ್ ಹಾಕಿಂಗ್ ಅವರ ಶೂನ್ಯದಲ್ಲಿ ವಿಶ್ವ ಹುಟ್ಟಿತು ಎಂಬ ಪ್ರಯೋಗದಲ್ಲಿ ಉಲ್ಲೇಖವಾಗಿದೆ. ಅಲ್ಲಮ ತನ್ನ ಅನುಭವದಲ್ಲಿ ಇದನ್ನು ಹೇಳಿದರು. ಆದರೆ, ಹಾಕಿಂಗ್ ಗಣಿತದ ಮೂಲಕ ಸಾಬೀತುಪಡಿಸುತ್ತಾರೆ ಎಂದು ತಿಳಿಸಿದರು.
ಕಾಲೇಜು ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಲಿಂಗಣ್ಣ, ಕಾರ್ಯಕ್ರಮ ಆಯೋಜನಾ ಕಾರ್ಯದರ್ಶಿ ಎನ್.ರವಿಕುಮಾರ್ ಇತರರು ಇದ್ದರು.