ಜ್ಞಾನ ಸಂಪಾದಿಸುವತ್ತ ಗಮನಹರಿಸಿ

ಮೈಸೂರು: ಜ್ಞಾನವೊಂದರ ಹೊರತಾಗಿ ಯಾವ ಆಸ್ತಿಯೂ ನಿಮ್ಮೊಂದಿಗೆ ಇರುವುದಿಲ್ಲ. ಆದ್ದರಿಂದ ಜ್ಞಾನ ಸಂಪಾದಿಸುವತ್ತ ಗಮನಹರಿಸುವಂತೆ ಗುಲ್ಬರ್ಗಾ ವಿವಿ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಸಲಹೆ ನೀಡಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಉಪಯುಕ್ತವಾಗುವಂತೆ ಬುಧವಾರದಿಂದ 2 ದಿನ ಆಯೋಜಿಸಿರುವ ಬೌದ್ಧಿಕ ಕೌಶಲಾಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ದೇಶದ ಸುಮಾರು 50 ಸಾವಿರ ಪ್ರತಿಭಾವಂತರು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಸಂಶೋಧನೆ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಸಂಶೋಧನಾರ್ಥಿಗಳಿಗೆ 1 ಲಕ್ಷ ರೂ.ವರೆಗೆ ಫೆಲೋಶಿಪ್ ನೀಡುತ್ತಾರೆ. ಆದರೆ, ನಮ್ಮಲ್ಲಿ ನೀಡುವುದಿಲ್ಲ.

ಅವರೆಲ್ಲರೂ ನಮ್ಮ ದೇಶದಲ್ಲಿಯೇ ಇದ್ದರೆ ನಮ್ಮ ದೇಶದ ಸಾಧನೆ ಮತ್ತಷ್ಟು ಹೆಚ್ಚುತಿತ್ತು. ಆದರೆ, ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಲಿ, ಕಾಲಕಾಲಕ್ಕೆ ನೇಮಕಾತಿಯಾಗಲಿ ಸರಿಯಾಗಿ ಆಗದೆ ಇರುವುದು ಪ್ರತಿಭಾವಂತರು ದೇಶ ಬಿಡುವುದಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ದೇಶದಲ್ಲಿ 950 ವಿಶ್ವವಿದ್ಯಾಲಯಗಳು, 40 ಸಾವಿರ ಕಾಲೇಜುಗಳಿವೆ. ಆದರೂ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸಂಶೋಧನೆಯ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಸಕಾಲಕ್ಕೆ ಹುದ್ದೆಗಳ ನೇಮಕಾತಿ ಆಗದೆ, ಓದಲು ಮೂಲ ಸೌಕರ್ಯಗಳನ್ನು ಕಲ್ಪಿಸದೆ ಇರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಅಸಡ್ಡೆ ತೋರುತ್ತಿದ್ದಾರೆ ಎಂದರು.

ನ್ಯಾಕ್‌ನಲ್ಲಿ ಕೇವಲ 25ರಿಂದ 26 ವಿದ್ಯಾಲಯಗಳು ಮಾತ್ರ ಪ್ರಥಮ ಮತ್ತು ದ್ವಿತೀಯ ಗ್ರೇಡ್‌ನಲ್ಲಿದ್ದು, ಮೈಸೂರು ವಿ.ವಿ ಮುಂದೆ ನ್ಯಾಕ್‌ಗೆ ಹೋಗಬೇಕಿದೆ. ನ್ಯಾಕ್ ನೀಡುವ ಗ್ರೇಡ್ (ರೇಟಿಂಗ್) ಗಳ ಮೇಲೆ ವಿವಿಗಳು ನಿಂತಿವೆ. ಪ್ರಾಧ್ಯಾಪಕರೇ ಎಲ್ಲವನ್ನೂ ಹೇಳಿಕೊಡಲಾಗುವುದಿಲ್ಲ, ತರಗತಿಯ ಪಾಠದಲ್ಲಿ ಎಲ್ಲವೂ ಸಿಗುವುದಿಲ್ಲ, ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿಲಬಸ್ ಓದುವುದೇ ಬೇರೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದೇ ಬೇರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಎಲ್ಲ ವಿಷಯಗಳಲ್ಲೂ ಕನಿಷ್ಟ ಜ್ಞಾನ ಹೊಂದಿರಬೇಕು. ನಮ್ಮ ದೇಶಕ್ಕೆ ಅತ್ಯುತ್ತಮ ನೀತಿ ರೂಪಿಸುವವರು, ಆಡಳಿತಗಾರರ ಅಗತ್ಯವಿದೆ. ಮುಂದುವರಿದ ರಾಷ್ಟ್ರಗಳನ್ನು ಹೋಲಿಕೆ ಮಾಡಿಕೊಂಡು ನಮ್ಮ ದೇಶದ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸುವ, ಆಡಳಿತ ನಡೆಸುವವರು ಬೇಕಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಿದ್ಧರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.

ಸಿಂಡಿಕೇಟ್ ಸದಸ್ಯ ಪ್ರೊ.ಎ.ಬಾಲಸುಬ್ರಮಣ್ಯನ್ ಮಾತನಾಡಿ, ಮೈಸೂರು ವಿವಿ ವಿದ್ಯಾರ್ಥಿಗಳನ್ನು ಉನ್ನತ ಹುದ್ದೆಗಳಲ್ಲಿ ನೋಡಬಯಸುವ ಉದ್ದೇಶದಿಂದ 1998-99ರಿಂದ ಈ ಕಾರ್ಯಾಗಾರ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಲ್ಲ ರೀತಿಯಲ್ಲೂ ಸಿದ್ಧರಾಗಬೇಕು. ಹೇಗೆ ಸಿದ್ಧರಾಗಬೇಕು ಎಂಬುದನ್ನು ಸಂಪನ್ಮೂಲ ವ್ಯಕ್ತಿಗಳು ತಿಳಿಸಲಿದ್ದಾರೆ. 2020ಕ್ಕೆ ದೇಶದಲ್ಲಿ ಸುಮಾರು 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಮೊದಲ 10 ಸಾವಿರ ಹುದ್ದೆಗಳನ್ನು ಮೈಸೂರು ವಿವಿ ವಿದ್ಯಾರ್ಥಿಗಳು ಪಡೆಯಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಮೈಸೂರು ವಿ.ವಿ.ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಸಹಾಯಕ ಕುಲಸಚಿವ ಮಹದೇವಮೂರ್ತಿ, ಯುವರಾಜ ಕಾಲೇಜು ಪ್ರಾಂಶುಪಾಲ ಡಾ.ಸಿ.ರುದ್ರಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕ ಡಾ.ಸಿ.ರಾಮಸ್ವಾಮಿ ಇತರರು ಇದ್ದರು.

ನಮ್ಮಲ್ಲಿ ಆಯ್ಕೆಗಳು ಸಾಕಷ್ಟು ಇವೆ. ಎಷ್ಟೋ ವಿದ್ಯಾರ್ಥಿಗಳಿಗೆ ಬಯಸಿದ ಉದ್ಯೋಗ ಸಿಗುವುದಿಲ್ಲ. ಇಂತಹ ಸಮಯದಲ್ಲಿ ಎದೆಗುಂದಬೇಡಿ. ತಮಗೆ ಸಿಕ್ಕಿದ್ದರಲ್ಲೇ ಸಾಧನೆ ಮಾಡಿ, ಜ್ಞಾನ ಸಂಪಾದನೆಯತ್ತ ನಿರತರಾಗಿ.
ಪ್ರೊ.ಎಸ್.ಆರ್.ನಿರಂಜನ, ಗುಲ್ಬರ್ಗಾ ವಿವಿ ಕುಲಪತಿ