ನೇಪಥ್ಯಕ್ಕೆ ಸರಿದ ಪ್ರೀಮಿಯರ್​

ಕನ್ನಡ, ಹಿಂದಿ, ತೆಲುಗು, ತಮಿಳು, ಇಂಗ್ಲಿಷ್ ಮತ್ತಿತರ ಭಾಷೆಗಳ ನೂರಾರು ಚಲನಚಿತ್ರಗಳ ಚಿತ್ರೀಕರಣಕ್ಕೆ ವೇದಿಕೆ ಒದಗಿಸಿದ್ದ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಇತ್ತೀಚೆಗಷ್ಟೆ ನೆಲಸಮವಾಗಿದೆ. ಕಳೆದ ಆರೂವರೆ ದಶಕಗಳಿಂದ ಚಟುವಟಿಕೆಯ ಕೇಂದ್ರವಾಗಿದ್ದ ಈ ಸ್ಟುಡಿಯೋ ಕಾಲಗರ್ಭಕ್ಕೆ ಸೇರಿಹೋದ ಸಂದರ್ಭದಲ್ಲಿ ಅದರ ಒಡಲಿನಲ್ಲಿ ನಡೆದಿದ್ದ ಕೆಲವು ಘಟನೆಗಳ ಮೆಲುಕು ಇಲ್ಲಿದೆ.

| ಗಣೇಶ್ ಕಾಸರಗೋಡು

1954ರ ಆಗಸ್ಟ್ 6ನೇ ತಾರೀಕಿನಂದು ಕನ್ನಡ ಚಿತ್ರರಂಗಕ್ಕೆ ಆಶಾದೀಪದ ರೂಪದಲ್ಲಿ ಆರಂಭವಾದ ಮೈಸೂರಿನ ಹೆಮ್ಮೆಯ ಪ್ರೀಮಿಯರ್ ಸ್ಟುಡಿಯೋ ಹೆಚ್ಚುಕಮ್ಮಿ 65 ವರ್ಷಗಳ ಸರ್ವೀಸಿನ ನಂತರ ಮೊನ್ನೆಯಷ್ಟೆ ನೆಲಸಮವಾಗಿದೆ. ಕನ್ನಡನಾಡಿನ ಚರಿತ್ರಾರ್ಹ ಕುರುಹು ಕಾಲನ ಜೊತೆ ಪೈಪೋಟಿ ನಡೆಸಲಾಗದೆ ಸೋತು ಮುಗ್ಗರಿಸಿ ಬಿದ್ದು ಹೋಗಿದೆ.

ಈ ಸ್ಟುಡಿಯೋದ ಮಹತ್ವವೇನು? ಇದನ್ನು ಕಟ್ಟಿ ಬೆಳೆಸಿದ ಸಾಹಸಿ ಬಸವರಾಜಯ್ಯನವರ ಶ್ರಮದ ಬೆಲೆಯೇನು ಎನ್ನುವುದನ್ನು ತಿಳಿಯಲು ಇತಿಹಾಸದ ಪುಟಗಳ ಫ್ಲಾಶ್​ಬ್ಯಾಕ್​ಗೆ ಹೋಗಬೇಕು.

ಇಂಥಾದ್ದೊಂದು ಅದ್ಭುತ ದಾಖಲೆಯ ಪ್ರತಿಷ್ಠಿತ ಸ್ಟುಡಿಯೋವನ್ನು ಮುಚ್ಚುವ ನಿರ್ಧಾರಕ್ಕೆ ಬಸವರಾಜಯ್ಯನವರು ಬಂದದ್ದಾದರೂ ಯಾಕೆ? ಪ್ರಮುಖ ಕಾರಣಗಳ ಪಟ್ಟಿಯಲ್ಲಿ ಮೊದಲಿನದ್ದು ‘ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’. ಸಂಜಯ್ ಖಾನ್ ನಿರ್ದೇಶನದ ಈ ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ನಡೆದ ಅಗ್ನಿ ದುರಂತವೇ ಈ ಸ್ಟುಡಿಯೋ ಮುಚ್ಚಲು ಮೊದಲ ಕಾರಣ. ಈ ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾದವರ ಸಂಖ್ಯೆ 60ಕ್ಕೂ ಹೆಚ್ಚು.

ಹೊರಾಂಗಣ ಚಿತ್ರೀಕರಣ ಶುರುವಾದಾಗಿನಿಂದ ಒಳಾಂಗಣಕ್ಕೆ ಬೇಡಿಕೆ ಕಡಿಮೆಯಾದದ್ದು ಮತ್ತೊಂದು ಕಾರಣ. ಸದಾ ಬಿಜಿಯಾಗಿದ್ದುಕೊಂಡು ಜನರಿಂದ ತುಂಬಿ ತುಳುಕುತ್ತಿದ್ದ ಸ್ಟುಡಿಯೋ ಇದ್ದಕ್ಕಿದ್ದಂತೆಯೇ ಭಣಗುಡಲು ಆರಂಭಿಸಿದಾಗಲೇ ಬಸವರಾಜಯ್ಯನವರು ಸ್ಟುಡಿಯೋ ಮುಚ್ಚುವ ನಿರ್ಧಾರಕ್ಕೆ ಬಂದಿದ್ದರು!

ಒಂದೊಂದೇ ಫ್ಲೋರ್ ಮುಚ್ಚುತ್ತಿರುವಂತೆಯೇ ಪತ್ರಕರ್ತರು, ಪತ್ರಿಕೆಗಳು, ಹಿತಶತ್ರುಗಳು ಬಸವರಾಜಯ್ಯನವರ ಕಾಲೆಳೆದದ್ದೂ ಸ್ಟುಡಿಯೋ ಮುಚ್ಚುವ ಅವರ ನಿರ್ಧಾರವನ್ನು ಅಚಲಗೊಳಿಸಿತು. ಕ್ರಮೇಣ ಕ್ಷೀಣಿಸಿದ ಬಸವರಾಜಯ್ಯನವರ ಆರೋಗ್ಯವೂ ಸ್ಟುಡಿಯೋ ಮುಚ್ಚಲು ಇನ್ನೊಂದು ಕಾರಣ. ಅತ್ಯಾಧುನಿಕ ಸ್ಟುಡಿಯೋ ಸಲಕರಣೆ, ಪರಿಕರಗಳನ್ನು ಖರೀದಿಸುವ ಬಗೆಗಿನ ಬಸವರಾಜಯ್ಯನವರ ನಿರಾಸಕ್ತಿಯೂ ಸ್ಟುಡಿಯೋ ಮುಚ್ಚಲು ಮಗದೊಂದು ಕಾರಣ.

1954ರಲ್ಲಿ ಮೈಸೂರಿನ ಸರಸ್ವತಿಪುರದ ಸ್ವಿಮ್ಮಿಂಗ್​ಪೂಲ್ ರಸ್ತೆಯಲ್ಲಿದ್ದ ‘ನವಜ್ಯೋತಿ ಸ್ಟುಡಿಯೋ’ವನ್ನು ತಮ್ಮ ವಶಕ್ಕೆ ಪಡೆದುಕೊಂಡ ಚಿತ್ರ ನಿರ್ವಪಕ, ಚಿತ್ರೋದ್ಯಮಿ ಬಸವರಾಜಯ್ಯ ಅವನತಿಯ ಅಂಚಿನಲ್ಲಿದ್ದ ಅದನ್ನು ಪುನರ್​ನಿರ್ವಣ ಮಾಡಲು ಹೊರಟರು. ಆದರೆ ಅದು ಸಾಧ್ಯವಾಗದಿದ್ದಾಗ ಅದೇ ವರ್ಷ ಈಗಿನ ಪಾರಂಪರಿಕ ಕಟ್ಟಡ ‘ಚಿತ್ತರಂಜನ್ ಮಹಲ್’ ಇರುವ 10 ಎಕರೆಯಷ್ಟು ವಿಶಾಲವಾದ ಆವರಣದಲ್ಲಿ ‘ಪ್ರೀಮಿಯರ್ ಸ್ಟುಡಿಯೋ’ ಹುಟ್ಟು ಹಾಕಿದರು.

ಇದನ್ನು 1954ರ ಆಗಸ್ಟ್ 6ನೇ ತಾರೀಕಿನಂದು ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತರಾಯರು ಉದ್ಘಾಟಿಸಿದರು.

ಒಟ್ಟು ಏಳು ಮಹಡಿಗಳ ಈ ಸ್ಟುಡಿಯೋ ಆಗಿನ ಕಾಲದಲ್ಲಿ ದೇಶದ ಅತಿದೊಡ್ಡ ಸ್ಟುಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಚಿತ್ರಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ. ಅಷ್ಟೇ ಏಕೆ, ಹತ್ತಾರು ಹಾಲಿವುಡ್ ಚಿತ್ರಗಳ ಚಿತ್ರೀಕರಣವೂ ನಡೆದ ಖ್ಯಾತಿ ಈ ಸ್ಟುಡಿಯೋದ್ದು. ಈ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಕನ್ನಡ ಚಿತ್ರ ‘ಸ್ತ್ರೀರತ್ನ’. ಇದು ಬಸವರಾಜಯ್ಯ ಅವರ ಸ್ವಂತ ಪೊ›ಡಕ್ಷನ್. ಈ ಚಿತ್ರದ ಮೂಲಕ ಕೆ.ಎಸ್.ಅಶ್ವಥ್ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರೆ, ನಾಯಕಿಯಾಗಿ ಪಂಡರೀಬಾಯಿ ಪದಾರ್ಪಣೆ ಮಾಡಿದ್ದರು. ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ಕೃತಿಯಾಧರಿಸಿ ಅವರು ಪಾಲುದಾರರಾಗಿ ನಿರ್ವಿುಸಿದ ಮತ್ತೊಂದು ಅಮೂಲ್ಯ ಚಿತ್ರರತ್ನ ‘ವಂಶವೃಕ್ಷ’. ಈ ಚಿತ್ರದ ಮೂಲಕ ಬಿ.ವಿ.ಕಾರಂತರನ್ನು ನಿರ್ದೇಶಕರನ್ನಾಗಿ ಮಾಡಿದ್ದು ಇದೇ ಬಸವರಾಜಯ್ಯ. ಮುಂಬೈ ರಂಗಭೂಮಿಯಲ್ಲಿ ಹೆಸರಾಗಿದ್ದ ಗಿರೀಶ ಕಾರ್ನಾಡರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಬಸವರಾಜಯ್ಯನವರೇ. ಇಂಗ್ಲೀಷಿನ ಪ್ರತಿಷ್ಠಿತ ‘ಮೆಟ್ರೋ ಗೋಲ್ಡ್ವಿನ್ ಮೇಯರ್’ ಸಂಸ್ಥೆಯವರು ಇದೇ ಸ್ಟುಡಿಯೋದಲ್ಲಿ ನಿರ್ವಿುಸಿದ ‘ದಿ ಎಲಿಫೆಂಟ್ ಬಾಯ್’ ಚಿತ್ರ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದೊಂದು ದಾಖಲೆ. ಎಂ.ಜಿ.ಆರ್., ಶಿವಾಜಿಗಣೇಶನ್, ರಜನೀಕಾಂತ್, ಎನ್.ಟಿ.ಆರ್., ನಾಗೇಶ್ವರರಾವ್, ಅಮಿತಾಭ್ ಬಚ್ಚನ್, ದೇವಾನಂದ್, ಮೆಹಮೂದ್, ಜಯಲಲಿತಾ… ಮೊದಲಾದ ಅತಿರಥ ಮಹಾರಥರೆಲ್ಲ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳನ್ನು ಕಳೆದದ್ದು ಇದೇ ಸ್ಟುಡಿಯೋದಲ್ಲೇ. ಕರ್ನಾಟಕದಲ್ಲೇ ಚಿತ್ರೀಕರಣ ಮಾಡಿದರೆ ಆ ಚಿತ್ರಕ್ಕೆ ಸಬ್ಸಿಡಿ ನೀಡುವ ಸರ್ಕಾರದ ಕ್ರಮದ ಹಿಂದಿನ ವ್ಯಕ್ತಿ ಶಕ್ತಿ ಈ ಬಸವರಾಜಯ್ಯ. ಆಗಿನ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ಮತ್ತು ಹಣಕಾಸು ಸಚಿವರಾಗಿದ್ದ ರಾಜಶೇಖರಮೂರ್ತಿಯವರಿಗೆ ಕನ್ನಡ ಚಿತ್ರರಂಗದ ದಯನೀಯ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಸಬ್ಸಿಡಿಗೆ ಅಡಿಪಾಯ ಹಾಕಿಕೊಟ್ಟವರೇ ಈ ಬಸವರಾಜಯ್ಯ. ಬದುಕಿನ ಎಲ್ಲ ಸುಖ ದುಃಖ ಅನುಭವಿಸಿದ ಬಸವರಾಜಯ್ಯ ಒಂದು ಹಂತದಲ್ಲಿ ಜಿಗುಪ್ಸೆಗೊಂಡು ಹೃಷಿಕೇಶಕ್ಕೆ ಹೋಗಿ ಸನ್ಯಾಸಿಯಾಗಲು ಪ್ರಯತ್ನಿಸಿದ ಪ್ರಸಂಗವೂ ನಡೆದಿತ್ತು.

ಬಸವರಾಜಯ್ಯನವರ ಹೃದಯವಂತಿಕೆ: ನಿಮಗೆ ಗೊತ್ತೇ? ಬಸವರಾಜಯ್ಯನವರು ಕಾಲವಾಗಿ ಆಗಲೇ 14 ವರ್ಷ ಕಳೆದರೂ ಅವರ ಕಣ್ಣುಗಳು ಈಗಲೂ ಈ ಜಗತ್ತನ್ನು ನೋಡುತ್ತಿವೆ! ಹೌದು, ಅವರು ನೇತ್ರದಾನ ಮಾಡಿದ್ದರು. ಅವರ ಎರಡೂ ಕಣ್ಣುಗಳನ್ನು ತಲಾ ಒಂದರಂತೆ ಇಬ್ಬರಿಗೆ ಜೋಡಿಸಲಾಗಿದೆ. ಬಸವರಾಜಯ್ಯನವರ ಹೃದಯವಂತಿಕೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?

‘ಲೈಫ್ ಇನ್​ಶೂರೆನ್ಸ್’ ಆರಂಭಿಸಿದ ಸಾಹಸಿ: ಬಸವರಾಜಯ್ಯನವರು ‘ದಿ ಪ್ರೀಮಿಯರ್ ಲೈಫ್ ಅಂಡ್ ಜನರಲ್ ಇನ್​ಶೂರೆನ್ಸ್ ಕಂಪನಿ’ಯನ್ನು ಸ್ಥಾಪಿಸಿದ್ದು ತಮ್ಮ 20ನೇ ವಯಸ್ಸಿನಲ್ಲಿ. ತಕ್ಷಣಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗದಿದ್ದರೂ ಕ್ರಮೇಣ ಜನಪ್ರಿಯವಾದ ಈ ಕಂಪನಿಯನ್ನು ಪಾಕಿಸ್ತಾನಕ್ಕೂ ವಿಸ್ತರಿಸಿದ್ದರಂತೆ! ವಿಶೇಷವೆಂದರೆ, 1933ರ ಕಾಲದಲ್ಲೇ ಈ ಕಂಪನಿಯ 60 ಶಾಖೆಗಳನ್ನು ದೇಶಾದ್ಯಂತ ಸ್ಥಾಪಿಸಿದ್ದರು. ಇವರ ಕುಟುಂಬ ವರ್ಗದವರು ಹೇಳುವ ಪ್ರಕಾರ ಪಂಡಿತ್ ಜವಾಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್ ಅವರೂ ಈ ಕಂಪನಿಯಲ್ಲಿ ಪಾಲಿಸಿದಾರರಾಗಿದ್ದರಂತೆ. ವಿಶೇಷವೆಂದರೆ ‘ಮೋಟಾರು ವಾಹನ ಇನ್​ಶೂರೆನ್ಸ್ ಕಾಯ್ದೆ’ ಕೂಡ ಬಸವರಾಜಯ್ಯನವರ ಮಿದುಳ ಕೂಸು.

ಹೋಟೇಲಾಗಿತ್ತು ಕಟ್ಟಡ!

1953-54ರಲ್ಲಿ ಬಸವರಾಜಯ್ಯನವರು ತಮ್ಮ ಔದ್ಯಮಿಕ ವಿಕಾಸಕ್ಕಾಗಿ ಮೈಸೂರಿನಲ್ಲಿ ಜಮೀನು ಖರೀದಿಸಲು ಹೊರಟಾಗ ಸಿಕ್ಕಿದ್ದೇ ‘ಚಿತ್ತರಂಜನ್ ಮಹಲ್’. ಈ ಅದ್ಭುತ ಕಟ್ಟಡವನ್ನೇ ಆಫೀಸ್ ಮಾಡಿಕೊಂಡು, ಉಳಿದ ಹತ್ತಾರು ಎಕರೆ ಜಾಗದಲ್ಲಿ ಮಹಡಿಗಳನ್ನು ನಿರ್ವಿುಸಿ ಚಿತ್ರೀಕರಣಕ್ಕೆ ಅನುಕೂಲ ಮಾಡಿಕೊಟ್ಟರು ಬಸವರಾಜಯ್ಯ. ಆದರೆ ನಷ್ಟದಿಂದಾಗಿ ಸ್ಟುಡಿಯೋವನ್ನು ಬಂದ್ ಮಾಡಿದಾಗ ಇದೇ ‘ಚಿತ್ತರಂಜನ್ ಮಹಲ್’ಅನ್ನು ಹೋಟೆಲೊಂದಕ್ಕೆ ಬಾಡಿಗೆಗೆ ನೀಡಿದರು. ಇದರ ಹೆಸರು ‘ದಿ ಗ್ರೀನ್ ಹೋಟೆಲ್’.

ದೇವಾನಂದ್ ಅಂತ ಗೊತ್ತಾಗಲಿಲ್ಲ!

ಒಂದು ಸಾರಿ ಯುವಕನೊಬ್ಬ ಸ್ಟುಡಿಯೋಕ್ಕೆ ಬಂದ. ಬಂದವನೇ ಬಸವರಾಜಯ್ಯನವರ ಜತೆ ಹರಟೆಗೆ ಕುಳಿತುಬಿಟ್ಟ. ಅವರಿಗೆ ರೇಗಿತು; ‘ಏನಾದರೂ ವಿಷಯವಿದ್ದರೆ ನೇರವಾಗಿ ಹೇಳಿಬಿಡು. ನಂಗೆ ಹರಟೆ ಹೊಡೆಯಲು ಟೈಮಿಲ್ಲ…’ ಅಂದುಬಿಟ್ಟರು ಬಸವರಾಜಯ್ಯ. ಬಂದಾತ ವಿಷಯ ವಿವರಿಸಿದ. ಮಾತುಕತೆ ಐದೇ ನಿಮಿಷದಲ್ಲಿ ಮುಗಿಯಿತು. ಬಸವರಾಜಯ್ಯನವರು ಮರುಮಾತಿಗೂ ಅವಕಾಶ ಕೊಡದೆ ಎದ್ದು ಹೊರಟು ಬಿಟ್ಟರು. ಹಾಗೆ ಬಂದು ಅವರ ಜತೆ ರ್ಚಚಿಸಿದ ಯುವಕ ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ದೇವಾನಂದ್!