ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಅದರ ಅಂಟಿನಲ್ಲಿ ಸ್ವತಃ ಸಿಕ್ಕಿಕೊಂಡ ನಕಲಿ ಐಪಿಎಸ್ ಅಧಿಕಾರಿ ಕಥೆ ಇದು…

ಮೈಸೂರು: ಪೊಲೀಸ್​ ಇನ್ಸ್​ಪೆಕ್ಟರ್​ಗೆ ಐಪಿಎಸ್​ (ಭಾರತೀಯ ಪೊಲೀಸ್​ ಸೇವೆ) ಅಧಿಕಾರಿ ಎಂದು ಸುಳ್ಳು ಹೇಳಿ ಮೋಸ ಮಾಡಲು ಪ್ರಯತ್ನಿಸಿದ ನಕಲಿ ಐಪಿಎಸ್​​ ಅಧಿಕಾರಿಯನ್ನು ಕೆ.ಆರ್​.ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕೆ.ಆರ್.​ ಠಾಣೆ ಇನ್ಸ್​ಪೆಕ್ಟರ್​ ವಿ.ನಾರಾಯಣಸ್ವಾಮಿಗೆ ದಿಲೀಪ್​ ಎಂಬಾತ ತಾನು ಐಪಿಎಸ್​ ಪ್ರೊಬೆಷನರಿ ಅಧಿಕಾರಿ ಎಂದು ಪರಿಚಯಿಸಿಕೊಂಡು, ತನ್ನ ಕುಟುಂಬಸ್ಥರನ್ನು ಪ್ರವಾಸಕ್ಕೆ ಕರೆದೊಯ್ಯಲು ಇನೋವಾ ಕಾರೊಂದರ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾನೆ. ಕಾರಿನ ಬಾಡಿಗೆ, ಚಾಲಕನ ಬಾಟಾವನ್ನು ಪೊಲೀಸರೆ ಪಾವತಿಸುವಂತೆ ತಿಳಿಸಿದ್ದಾನೆ.

ಆತನ ಮಾತಿನಿಂದ ಅನುಮಾನಗೊಂಡ ಪೊಲೀಸರು ಆತನ ಬಗ್ಗೆ ಪರಿಶೀಲನೆ ನಡೆಸಿದಾಗ ಆತ ನಕಲಿ ಪೊಲೀಸ್​ ಅಧಿಕಾರಿ ಎಂಬುದು ಸಾಬೀತಾಗಿದ್ದು ತಕ್ಷಣವೇ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ದಿಲೀಪ್​ ಐಪಿಎಸ್​ ಆಯ್ಕೆ ಪಟ್ಟಿಯನ್ನು ಪಡೆದು ಅದರಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಕೆ.ಆರ್​.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)