ಕಸದ ಕೊಂಪೆಯಾಗಿದ್ದ ಅರಮನೆ ಆವರಣ

ಮೈಸೂರು: ದಸರಾ ಮಹೋತ್ಸವಕ್ಕೆ ನವವಧುವಿನಂತೆ ಕಂಗೊಳಿಸುತ್ತಿದ್ದ ಅಂಬಾವಿಲಾಸ ಅರಮನೆ ಆವರಣ ಜಂಬೂಸವಾರಿ ಮುಗಿದ ಮರುದಿನವಾದ ಬುಧವಾರ ಕಸದ ಕೊಂಪೆಯಾಗಿತ್ತು.

ಜಂಬೂಸವಾರಿ ವೀಕ್ಷಿಸಲು ಅರಮನೆ ಆವರಣದಲ್ಲಿ ಸಹಸ್ರಾರು ಜನರು ಸೇರಿದ್ದರು. ಆ ಸಂದರ್ಭದಲ್ಲಿ ಅವರು ಬಿಸಾಡಿದ ನೀರಿನ ಬಾಟಲ್‌ಗಳು ಇನ್ನಿತರ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಆವರಣದಲ್ಲಿ ಹರಡಿಕೊಂಡಿದ್ದ ಕಸದ ರಾಶಿಯನ್ನು ಪೌರಕಾರ್ಮಿಕರು ತೆರವುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು.

ಸ್ವಚ್ಛತೆಗಾಗಿ ಅರಮನೆ ಮಂಡಳಿಯಿಂದ 32 ಹಾಗೂ ನಗರಪಾಲಿಕೆಯಿಂದ 22 ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಮುಗಿದ ಬಳಿಕ ಮಂಗಳವಾರ ರಾತ್ರಿಯಿಂದಲೇ ಅರಮನೆ ಆವರಣದಲ್ಲಿ ಈ ಸಿಬ್ಬಂದಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದರು. ಇನ್ನು ಅರಮನೆ ಆವರಣದಲ್ಲಿ ಅಳವಡಿಸಿದ್ದ ಪೆಂಡಾಲ್, ಕುರ್ಚಿ, ಮೇಜುಗಳನ್ನು 200 ಕಾರ್ಮಿಕರು ತೆರವುಗೊಳಿಸುವ ಕಾರ್ಯ ನಡೆಸಿದರು.

ನಗರಪಾಲಿಕೆಯಿಂದ ನಿಯೋಜಿಸಿರುವ 400 ಕ್ಕೂ ಹೆಚ್ಚಿನ ಪೌರಕಾರ್ಮಿಕರು ಮೆರವಣಿಗೆ ಸಾಗಿದ ಸಯ್ಯಜಿರಾವ್ ರಸ್ತೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಸ್ವಚ್ಛತಾ ಕೆಲಸ ನಡೆಸಿದರು. ಸದರಿ ಮಾರ್ಗದಲ್ಲಿ 3 ಪಾಳಿಯಲ್ಲಿ ಪೌರಕಾರ್ಮಿಕರು, ಬುಧವಾರ ಸಂಜೆವರೆಗೂ ಸ್ವಚ್ಛತಾ ಕಾರ್ಯ ನಡೆಸಿದರು.

ಬನ್ನಿಮಂಟಪದಲ್ಲೂ ಸ್ವಚ್ಛತೆ: ಪಂಜಿನ ಕವಾಯತು ಕಾರ್ಯಕ್ರಮ ನಡೆದ ಬನ್ನಿಮಂಟಪದ ಕವಾಯತು ಮೈದಾನದಲ್ಲೂ ಬುಧವಾರ ಪಾಲಿಕೆ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.

ಪ್ಲಾಸ್ಟಿಕ್‌ಮಯ!: ದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೂ ಅರಮನೆ ಆವರಣ, ಪಂಜಿನ ಕವಾಯತು ಮೈದಾನ ಹಾಗೂ ದಸರಾ ಜಂಬೂಸವಾರಿ ಸಾಗಿದ ಮಾರ್ಗದುದ್ದಕ್ಕೂ ಪ್ಲಾಸ್ಟಿಕ್ ಕವರ್‌ಗಳು, ಬಾಟಲ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ವಿಐಪಿ ಇದ್ದ ಗ್ಯಾಲರಿಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳ ಕಂಡುಬಂತು.

Leave a Reply

Your email address will not be published. Required fields are marked *