ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

ಮೈಸೂರು: ನಗರಪಾಲಿಕೆ ಚುನಾವಣೆ ಜರುಗಿದ ಎರಡು ತಿಂಗಳ ಬಳಿಕ ನಡೆದ ಮೇಯರ್, ಉಪಮೇಯರ್ ಚುನಾವಣೆ ಬೆನ್ನಲ್ಲೆ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮೈತ್ರಿಧರ್ಮದಂತೆ ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಎರಡು ಕಾಂಗ್ರೆಸ್ ಪಡೆದುಕೊಂಡರೆ, ಇನ್ನೆರಡು ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿವೆ.

ಮೇಯರ್, ಉಪಮೇಯರ್ ಚುನಾವಣೆ ನಡೆದ ನ.17ರಂದೇ 2019ರ ನವೆಂಬರ್ 16 ರವರೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೂ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು.

ತೆರಿಗೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿಗೆ ವಾರ್ಡ್ ಸಂಖ್ಯೆ 61ರ (ವಿದ್ಯಾರಣ್ಯಪುರಂ) ಶೋಭಾಸುನೀಲ್ ಅವರು ನಾಮಪತ್ರ ಸಲ್ಲಿಸಿದ್ದರೆ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿಗೆ ವಾರ್ಡ್ ಸಂಖ್ಯೆ 24ರ (ಮಂಡಿ ಮೊಹಲ್ಲಾ) ರಮೇಶ್(ರಮಣಿ) ನಾಮಪತ್ರ ಸಲ್ಲಿಸಿದ್ದರು. ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಗೆ ವಾರ್ಡ್ ಸಂಖ್ಯೆ ಒಂದು (ಹೆಬ್ಬಾಳು-ಲಕ್ಷ್ಮೀಕಾಂತನಗರ) ಲಕ್ಷ್ಮಿಶಿವಣ್ಣ ನಾಮಪತ್ರ ಸಲ್ಲಿಸಿದ್ದರೆ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ವಾರ್ಡ್ ಸಂಖ್ಯೆ 5ರ (ಕುಂಬಾರಕೊಪ್ಪಲು) ಉಷಾ ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿ ದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷರಿಗೆ ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಅವರು ಹೂ ಗುಚ್ಚ ನೀಡಿ ಅಭಿನಂದಿಸಿದರು. ಉಪಮೇಯರ್ ಶಫೀ ಅಹಮ್ಮದ್, ಉಪಆಯುಕ್ತ ದಯಾನಂದ ಇತರರು ಹಾಜರಿದ್ದರು.