ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್‌ಸಿಂಹ ಕಣಕ್ಕೆ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಂಸದ ಪ್ರತಾಪ್ ಸಿಂಹ ಅವರಿಗೆ ಪಕ್ಷದ ಹೈ ಕಮಾಂಡ್ ಗುರುವಾರ ಗ್ರೀನ್‌ಸಿಗ್ನಲ್ ನೀಡಿದೆ.

ದೆಹಲಿಯಲ್ಲಿ ಪಕ್ಷದ ವರಿಷ್ಠರು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿಯೇ ಪ್ರತಾಪ್ ಸಿಂಹ ಟಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಎರಡನೇ ಬಾರಿ ಟಿಕೆಟ್ ದೊರೆಯುವ ಕುರಿತು ಪ್ರತಾಪ್ ಸಿಂಹ ಸಾಕಷ್ಟು ಆತ್ಮವಿಶ್ವಾಸ ಹೊಂದಿದ್ದರು. ಆದರೆ, ಪಕ್ಷದಲ್ಲಿ ಟಿಕೆಟ್ ಪಡೆಯಲು ಸಾಕಷ್ಟು ಪ್ರಮುಖರು ಪೈಪೋಟಿಗೆ ಮುಂದಾಗಿದ್ದರು. ಮಡಿಕೇರಿ ಶಾಸಕ, ಪಕ್ಷದ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಟಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅಂತಿಮವಾಗಿ ಪಕ್ಷದ ವರಿಷ್ಠರು ಹಾಲಿ ಸಂಸದ ಪ್ರತಾಪ್‌ಸಿಂಹಗೆ ಮಣೆ ಹಾಕಿದ್ದಾರೆ.

ತಾನು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಕಷ್ಟು ಬಾರಿ ಸ್ಪಷ್ಟಪಡಿಸಿದರೂ ಅವರ ಹೆಸರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಆಗಿಂದಾಗ್ಗೆ ಕೇಳಿ ಬರುತಿತ್ತು. ಬಿಜೆಪಿ ಟಿಕೆಟ್ ಹಂಚಿಕೆ ವಿಳಂಬವಾಗುತ್ತಿದ್ದಂತೆಯೇ ಈ ಬಾರಿ ಮೈಸೂರು ಕ್ಷೇತ್ರದಿಂದ ಯದುವೀರ್‌ಗೆ ಟಿಕೆಟ್ ದೊರೆಯಲಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು. ಇದೀಗ ಎಲ್ಲ ಗೊಂದಗಳಿಗೆ ತೆರೆ ಎಳೆಯಲಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ವಿರುದ್ಧ 31,608 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಾಪ್ ಸಿಂಹ 5,03,908, ಎಚ್.ವಿಶ್ವನಾಥ್ 4,72,300 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ 1,38,587 ಮತಗಳನ್ನು ಪಡೆದಿದ್ದರು.

ಕಳೆದ ಬಾರಿ ಬಿಜೆಪಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ನೇರ ಎದುರಾಳಿಯಾಗಿತ್ತು. ಪ್ರತಾಪ್ ಸಿಂಹ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರ ಕೊಡುಗೆ ಗಣನೀಯ ಪ್ರಮಾಣದಲ್ಲಿ ಇತ್ತು. ಜೆಡಿಎಸ್ ಕಾರ್ಯಕರ್ತರಿಗೆ ಪ್ರತಾಪ್ ಸಿಂಹ ಗೆಲುವಿಗಿಂತ ಜೆಡಿಎಸ್ ಅನ್ನು ಟೀಕಿಸುತ್ತಿದ್ದ ಎಚ್.ವಿಶ್ವನಾಥ್ ಅವರ ಸೋಲು ಮುಖ್ಯವಾಗಿತ್ತು. ಇದು ಪ್ರತಾಪ್ ಸಿಂಹ ಗೆಲುವಿಗೆ ಸಹಕಾರಿ ಆಯಿತು. ಆದರೆ, ಈ ಬಾರಿ ರಾಜಕೀಯ ಚಿತ್ರಣ ಸಾಕಷ್ಟು ಬದಲಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕಳೆದ ಬಾರಿ ಜೆಡಿಎಸ್‌ನ ಅವಕೃಪೆಗೆ ಒಳಗಾಗಿ ಸೋಲು ಅನುಭವಿಸಿದ ಎಚ್.ವಿಶ್ವನಾಥ್ ಪ್ರಸ್ತುತ ಜೆಡಿಎಸ್‌ನ ರಾಜ್ಯಾಧ್ಯಕ್ಷರು…!

ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳು ಒಟ್ಟುಗೂಡಿದರೆ ಪ್ರತಾಪ್ ಸಿಂಹ ಗೆಲುವಿಗೆ ಸಾಕಷ್ಟು ಬೆವರು ಹರಿಸಬೇಕಾಗು ವುದು ನಿಶ್ಚಿತ. ಆದರೆ, ಜೆಡಿಎಸ್‌ನ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಬಹಿರಂಗವಾಗಿಯೇ ಕಾಂಗ್ರೆಸ್ ವಿರುದ್ಧ ಕಿಡಿಕಾ ರುತ್ತಿರುವುದು ಪ್ರತಾಪ್ ಸಿಂಹ ಅವರಿಗೆ ವರದಾನವಾಗುವ ಸಾಧ್ಯತೆ ಇದೆ.

ಜೆಡಿಎಸ್‌ನ ಒಂದಷ್ಟು ಮತಗಳು ಬಿಜೆಪಿ ಪಡೆದರೂ ಈ ಬಾರಿ ಬಿಜೆಪಿಗೆ ಗೆಲುವು ಸುಲಭ ಸಾಧ್ಯವಲ್ಲ ಎಂಬುದು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿರುವ ಮಾತುಗಳು. ಹೀಗಾಗಿ ಬಿಜೆಪಿ ಈ ಚುನಾವಣೆಯನ್ನು ಸಾಕಷ್ಟು ಗಂಭೀರವಾಗಿ ಪರಿಗಣಿಸಿ ಗೆಲುವಿಗೆ ಇನ್ನಿಲ್ಲದ ಕಸರತ್ತು ಪ್ರಾರಂಭಿಸಿದೆ.

ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ಜೆಡಿಎಸ್‌ಗೆ ಗೆಲುವು ಸಾಧಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್‌ನ ಬೆಂಬಲದ ಅವಶ್ಯಕತೆ ಇದೆ. ಹೀಗಾಗಿ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಅನ್ನು ಜೆಡಿಎಸ್ ಬೆಂಬಲಿಸದೆ ಅನ್ಯ ಮಾರ್ಗವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೂಪಿಸಿದ ಈ ರಾಜಕೀಯ ತಂತ್ರಗಾರಿಕೆ ಫಲಿಸಿದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿಗೆ ಕ್ಷೇತ್ರ ಸಾಕ್ಷಿಯಾಗಲಿದೆ.