ಮೈಸೂರು: ಪೌರ ಕಾರ್ಮಿಕರಿಗೆ ಪ್ರಸ್ತುತ ಪೂರೈಕೆ ಮಾಡುತ್ತಿರುವ ಉಪಹಾರ ಯೋಜನೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಉಪಹಾರ ಪೂರೈಕೆಯ ಟೆಂಡರ್‌ಗೆ ಘಟನೋತ್ತರ ಮಂಜೂರಾತಿ ನೀಡದೆ ಟೆಂಡರ್ ರದ್ದು ಪಡಿಸಲು ಗುರುವಾರ ನಗರ ಪಾಲಿಕೆ ಕೌನ್ಸಿಲ್ ತೀರ್ಮಾನಿಸಿತು.
ಮೇಯರ್ ತಸ್ನಿಂ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಉಪಾಹಾರ ಯೋಜನೆ ವಿರುದ್ಧ ವ್ಯಾಪಕ ಟೀಕೆ ಮಾಡಿದರು. ಪೌರಕಾರ್ಮಿಕರಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಿ. ಇಲ್ಲವಾದಲ್ಲಿ ಯೋಜನೆ ರದ್ದುಪಡಿಸಿ ಅವರ ಖಾತೆಗೆ ಪ್ರತಿನಿತ್ಯ 20 ರೂ. ಪಾವತಿಸಲು ಕ್ರಮ ವಹಿಸಿ ಎಂದು ಸದಸ್ಯರು ಒತ್ತಾಯಿಸಿದರು.
ಸರ್ಕಾರ ಒಬ್ಬ ಪೌರಕಾರ್ಮಿಕನಿಗೆ ಆಹಾರ ಪೂರೈಕೆ ಮಾಡಲು 20 ರೂ. ನಿಗದಿ ಮಾಡಿದೆ. ಆದರೆ ಟೆಂಡರ್ ಪಡೆದಿರುವ ರಾವ್ ರಘುಬೀರ್ ಸಿಂಗ್ ಸೇವಾ ಸಮಿತಿಯು 19 ರೂ.ಗೆ ಉಪಾಹಾರ ನೀಡುತ್ತಿದೆ. ಸಂಸ್ಥೆಗೆ ಪಾಲಿಕೆ ವಾರ್ಷಿಕ 1,74,06,850 ರೂ. ಪಾವತಿಸಬೇಕು. ಆದರೆ ಸಂಸ್ಥೆ ಪೂರೈಸುತ್ತಿರುವ ಉಪಾಹಾರ ಗುಣಮಟ್ಟದಿಂದ ಕೂಡಿಲ್ಲ. ಆದ್ದರಿಂದ ಪೌರಕಾರ್ಮಿಕರು ಈ ಆಹಾರ ಸೇವಿಸುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಆಹಾರ ಪೂರೈಕೆಯನ್ನು ಒಬ್ಬರಿಗೆ ವಹಿಸುವ ಬದಲು ವಲಯವಾರು ಪೂರೈಕೆ ಜವಾಬ್ದಾರಿಯನ್ನು ವಿವಿಧ ಟೆಂಡರ್‌ದಾರರಿಗೆ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಆರೋಗ್ಯ ಸ್ಥಾಯಿ ಸಮಿತಿಗೆ ವಹಿಸಲು ತೀರ್ಮಾನಿಸಲಾಯಿತು.
ಪೌರ ಕಾರ್ಮಿಕರಿಗೆ ಪ್ರೋತ್ಸಾಹಧನ: ಕಳೆದ ವರ್ಷ ದಸರಾ ಉತ್ಸವ ಹಾಗೂ ಸ್ವಚ್ಛ ಸರ್ವೇಕ್ಷಣ್ ಸಂದರ್ಭ ಕಾಯಂ ಹಾಗೂ ಗುತ್ತಿಗೆ ಪೌರ ಕಾರ್ಮಿಕರು 48 ದಿನಗಳ ಕಾಲ ಹೆಚ್ಚುವರಿ ಅವಧಿ ದುಡಿದಿದ್ದು, ಪ್ರತಿ ಪೌರ ಕಾರ್ಮಿಕರಿಗೆ 3,000 ರೂ. ಗೌರವಧನ ನೀಡಲು ಕೌನ್ಸಿಲ್ ತೀರ್ಮಾನಿಸಿತು. ಒಟ್ಟು 2,453 ಪೌರ ಕಾರ್ಮಿಕರಿಗೆ ತಲಾ 3,000 ರೂ.ನಂತೆ ಒಟ್ಟು 73,59,000 ರೂ.ಗಳನ್ನು ಶೇ.42.10ರ ನಿಧಿಯಿಂದ ಭರಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪ ಮೇಯರ್ ಸಿ. ಶ್ರೀಧರ್, ಆಯುಕ್ತ ಗುರುದತ್ತ ಹೆಗಡೆ ಇದ್ದರು.
ಪಾಲಿಕೆ ಹೆಸರಿಟ್ಟರೆ ಸಾವು ನಿಶ್ಚಿತ!: ನಗರದ ರಸ್ತೆ, ವೃತ್ತ ಹಾಗೂ ಮುಂತಾದ ಸ್ಥಳಗಳಿಗೆ ಜೀವಂತ ವ್ಯಕ್ತಿಗಳ ಹೆಸರು ದಯವಿಟ್ಟು ಇಡಬೇಡಿ. ಒಂದು ವೇಳೆ ಹೆಸರಿಟ್ಟರೆ ಅಂಥ ವ್ಯಕ್ತಿಗಳು ಸಾಯುವುದು ನಿಶ್ಚಿತ…. ಈ ರೀತಿ ಹೇಳಿಕೆ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದವರು ಮಾಜಿ ಮೇಯರ್ ಆರಿಫ್ ಹುಸೇನ್. ಇವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಎಸ್‌ಬಿಎಂ ಮಂಜು, ಬದುಕಿರುವ ವ್ಯಕ್ತಿಗಳ ಹೆಸರು ಇಟ್ಟಿರುವ ಉದಾಹರಣೆ ಕೂಡ ಇದೆ. ಈ ರೀತಿಯ ಹೇಳಿಕೆಗಳನ್ನು ನೀಡಬೇಡಿ ಎಂದರು.
ರಂಗಪ್ಪ ಹೆಸರಿಗೆ ಆಕ್ಷೇಪ: ನಿವೇದಿತಾನಗರದ ಸುಬ್ಬರಾವ್ ಉದ್ಯಾನದ ರಂಗಮಂಟಪಕ್ಕೆ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೆಸರಿಡುವ ಪ್ರಸ್ತಾವನೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಿವಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ರಾಜ್ಯಪಾಲರ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಾಗಿದೆ. ಇಂಥ ವ್ಯಕ್ತಿ ಹೆಸರಿಟ್ಟರೆ ಪಾಲಿಕೆಗೆ ಕಳಂಕ ಬರಲಿದೆ ಎಂದು ಹೇಳಿದರು.
ಯಾವುದೇ ವ್ಯಕಿ ಮೇಲೆ ಆರೋಪ ಬಂದ ತಕ್ಷಣ ಅವರನ್ನು ಅಪರಾಧಿ ಎಂದು ಪರಿಗಣಿಸುವುದು ಸರಿಯಲ್ಲ. ರಂಗಪ್ಪ ಅವರು ವಿಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಹೀಗಾಗಿ ಅವರ ಹೆಸರನ್ನು ಇಡಲೇ ಬೇಕೆಂದು ಜೆಡಿಎಸ್‌ನ ಎಸ್‌ಬಿಎಂ ಮಂಜು ಹಾಗೂ ಪ್ರೇಮಶಂಕರೇಗೌಡ ಪಟ್ಟು ಹಿಡಿದರು.
ಇದಕ್ಕೆ ಜೆಡಿಎಸ್‌ನ ಎಲ್ಲ ಸದಸ್ಯರು ಧ್ವನಿಗೂಡಿಸಿದರು. ಪರ-ವಿರೋಧ ಚರ್ಚೆ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ರಂಗಪ್ಪ ಸೇರಿ ವಿವಿಧ ಗಣ್ಯರ ಹೆಸರನ್ನು ವಿವಿಧ ವೃತ್ತ, ರಸ್ತೆಗಳಿಗೆ ಇಡುವ ಪ್ರಸ್ತಾವನೆ ವಿಷಯವನ್ನು ಮುಂದೂಡಲಾಯಿತು.
ವಾರ್ಡ್ ಸಮಿತಿಗೆ ಆಕ್ಷೇಪ: ವಾರ್ಡ್ ಸಮಿತಿ ರಚನೆ ಕುರಿತು ಸಾಕಷ್ಟು ಗೊಂದಲಗಳು ಇವೆ. ಕೆಲವೊಂದು ವಾರ್ಡ್‌ಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯದವರೇ ಇಲ್ಲ. ಆದರೆ ಸಮಿತಿಗೆ ತಲಾ ಒಬ್ಬರು ಎಸ್ಸಿ, ಎಸ್ಟಿ ಸಮುದಾಯದವರನ್ನು ನೇಮಕ ಮಾಡುವುದು ಕಡ್ಡಾಯ. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಪಡೆದ ನಂತರ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ವಿವಿಧ ಸಮಿತಿಗೆ ಆಯ್ಕೆ: ಮೈಸೂರು ರಂಗಚಾರ್ಲು ಸ್ಮಾರಕ ಭವನ (ಪುರಭವನ) ಸಮಿತಿಗೆ ಸದಸ್ಯರಾದ ಶರತ್ ಕುಮಾರ್, ಎಂ.ಪಿ.ರಮೇಶ್, ಉಷಾ, ಎಂ.ಶಿವಕುಮಾರ್, ಆರ್. ನಾಗರಾಜ್, ಮಹಮ್ಮದ್ ರಫಿ, ಸವೂದ್ ಖಾನ್, ಲೋಕಸೇವಾ ನಿರತ ಅಂಬಾಳೆ ಅಣ್ಣಯ್ಯ ಪಂಡಿತರ ಉಚಿತ ವಿದ್ಯಾರ್ಥಿ ನಿಲಯಕ್ಕೆ ಮ.ವಿ.ರಾಮಪ್ರಸಾದ್, ಎಂ.ಎಸ್. ಶೋಭಾ, ಲೋಕೇಶ್ ಪಿಯ, ಶಾಂತಮ್ಮ, ಅಶ್ವಿನಿ ಅನಂತು, ನಗರ ಪಾಲಿಕೆ ಫಾರ್ಮ್‌ಗಳ ಉಸ್ತುವಾರಿ ಸಮಿತಿ ಶಫಿ ಅಹಮ್ಮದ್, ಬಿ.ವಿ. ಮಂಜುನಾಥ್, ಕೆ.ವಿ.ಶ್ರೀಧರ್, ಜಿ.ರೂಪಾ, ಲಕ್ಷ್ಮಿ, ಎಚ್. ಶಾಂತಕುಮಾರಿ ಆಯ್ಕೆಗೊಂಡರು.
ಕೇಸರಿ ಸೀರೆ ತೊಟ್ಟ ಬಿಜೆಪಿ ಸದಸ್ಯರು: ಬಿಜೆಪಿಯ ಮಹಿಳಾ ಸದಸ್ಯರು ಕೇಸರಿ ಸೀರೆ ತೊಟ್ಟು ಹಾಗೂ ಬಿಜೆಪಿಯ ಕೆಲವು ಪುರುಷ ಸದಸ್ಯರು ಕೇಸರಿ, ಹಸಿರು ಬಣ್ಣದ ಶಾಲು ಧರಿಸಿ ಸಭೆಗೆ ಆಗಮಿಸಿದ್ದರು. ಬಿಜೆಪಿ ಶಿಸ್ತಿನ ಪಕ್ಷ, ಈ ಕಾರಣಕ್ಕೆ ಸಮವಸ್ತ್ರದ ಮಾದರಿಯಲ್ಲಿ ಒಂದೇ ಬಣ್ಣ ಧರಿಸಿದ್ದೇವೆ ಎಂದು ಬಿಜೆಪಿ ಸದಸ್ಯರು ಹೇಳಿದರು. ಇದುವರೆಗೆ ಈ ರೀತಿಯ ಒಂದೇ ಬಣ್ಣದ ಬಟ್ಟೆ ಧರಿಸಿರಲಿಲ್ಲ. ಹಾಗಾದರೆ ಇದುವರೆಗೆ ಶಿಸ್ತು ಇರಲಿಲ್ಲವೇ ಎಂದು ಜೆಡಿಎಸ್, ಕಾಂಗ್ರೆಸ್ ಸದಸ್ಯರು ಕಾಲೆಳೆದರು.
ಆಡಳಿತ, ಪ್ರತಿಪಕ್ಷ ನಾಯಕರ ನೇಮಕ: ಕಾಂಗ್ರೆಸ್ ಆಡಳಿತ ಪಕ್ಷದ ನಾಯಕರಾಗಿ ಮಾಜಿ ಮೇಯರ್ ಅಯೂಬ್ ಖಾನ್ ಹಾಗೂ ಪ್ರತಿಪಕ್ಷ ನಾಯಕರಾಗಿ ಸುಬ್ಬಯ್ಯ ನೇಮಕಗೊಂಡಿರುವ ವಿಚಾರವನ್ನು ಮೇಯರ್ ತಸ್ನಿಂ ಸಭೆಯ ಗಮನಕ್ಕೆ ತಂದರು.