More

    ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮೇಯರ್ ಪಟ್ಟ

    ಮೈಸೂರು: ನಗರಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಒಲಿದಿದ್ದು, ಮೇಯರ್ ಆಗಿ ತಸ್ನಿಂ, ಉಪ ಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾದರು.

    ಪಾಲಿಕೆ ಇತಿಹಾಸದಲ್ಲೇ ಮುಸ್ಲಿಂ ಸಮುದಾಯದ ಮಹಿಳೆ ಮೇಯರ್ ಸ್ಥಾನ ಅಲಂಕರಿಸಿರಲಿಲ್ಲ. ಆದರೆ, ತಸ್ನಿಂ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

    ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶನಿವಾರ ಪ್ರಾದೇಶಿಕ ಆಯುಕ್ತ ಯಶ್ವಂತ್ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ 26ನೇ ವಾರ್ಡ್‌ನ (ಮೀನಾ ಬಜಾರ್) ಜೆಡಿಎಸ್ ಸದಸ್ಯೆ ತಸ್ನಿಂ, ಉಪಮೇಯರ್ ಆಗಿ 38ನೇ ವಾರ್ಡ್‌ನ (ಗಿರಿಯಾಭೋವಿಪಾಳ್ಯ) ಕಾಂಗ್ರೆಸ್ ಸದಸ್ಯ ಸಿ.ಶ್ರೀಧರ್ ಆಯ್ಕೆಯಾದರು. ಮೇಯರ್ ಸ್ಥಾನ ಬಿಸಿಎ ಮಹಿಳೆ, ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.

    ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಗೀತಾಶ್ರೀ ಯೋಗಾನಂದ, ಉಪ ಮೇಯರ್ ಸ್ಥಾನಕ್ಕೆ ಶಾಂತಮ್ಮ ವಡಿವೇಲು ಸ್ಪರ್ಧಿಸಿದ್ದರು. ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಪರವಾಗಿ 47, ಬಿಜೆಪಿ ಪರವಾಗಿ 23 ಮತಗಳು ಚಲಾವಣೆಗೊಂಡವು. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಹಾಗೂ ಬಿಜೆಪಿ ಸದಸ್ಯರು ತಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರು.

    ಫಲಿಸದ ಬಿಜೆಪಿ ತಂತ್ರಗಾರಿಕೆ: ಮುಸ್ಲಿಂ ಸಮುದಾಯದ ಮಹಿಳೆಯನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದರೆ ಜೆಡಿಎಸ್ ಸದಸ್ಯರಲ್ಲಿ ಉಂಟಾಗಬಹುದಾದ ಅಸಮಾಧಾನದ ಲಾಭವನ್ನು ಪಡೆಯಲು ಬಿಜೆಪಿ ಪ್ರಯತ್ನ ನಡೆಸಿತ್ತು. ಜೆಡಿಎಸ್‌ನಿಂದ ಮೇಯರ್ ಸ್ಥಾನಕ್ಕೆ ಬಂಡಾಯ ಅಭ್ಯರ್ಥಿಯಾಗಿ ಯಾರಾದರೂ ಸ್ಪರ್ಧಿಸಿದರೆ ಅವರಿಗೆ ಬೆಂಬಲ ನೀಡಲು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಆದರೆ, ಜೆಡಿಎಸ್ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕನಸು ಭಗ್ನಗೊಂಡಿತು.

    ಸ್ಥಾಯಿ ಸಮಿತಿಗೆ ಆಯ್ಕೆ:  ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆಯಿತು. ತೆರಿಗೆ ಸುಧಾರಣೆ ಮತ್ತು ಅಪೀಲು ಸ್ಥಾಯಿ ಸಮಿತಿ ಸದಸ್ಯರಾಗಿ ನಿರ್ಮಲಾ, ಸೌಮ್ಯಾ, ಸವಿತಾ, ಲಕ್ಷ್ಮೀ, ಅಕ್ಮಲ್ ಪಾಷ, ಶಮಿವುಲ್ಲಾ, ಜಿ.ಎಸ್.ಸತ್ಯರಾಜ್, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಶೋಭಾ, ಗೋಪಿ, ಭಾಗ್ಯ, ಅಯಾಜ್ ಪಾಷ, ಉಷಾ, ಶಾರದಮ್ಮ, ಭುವನೇಶ್ವರಿ ಅವಿರೋಧವಾಗಿ ಆಯ್ಕೆಯಾದರು.

    ಪಟ್ಟಣ ಯೋಜನೆ ಸುಧಾರಣಾ ಸ್ಥಾಯಿ ಸಮಿತಿಗೆ ಸಯ್ಯದ್ ಅಶ್ರತುಲ್ಲ, ಶ್ರೀನಿವಾಸ್, ರುಕ್ಮಿಣಿ, ರಮೇಶ್, ಹಾಜಿರಾಸೀಮಾ, ಸುನಂದಾ ಪಾಲನೇತ್ರ, ಪ್ರಮೀಳಾ ಭರತ್, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಅಶ್ವಿನಿ ಅನಂತು, ಬೇಗಂ ಪಲ್ಲವಿ, ಛಾಯಾದೇವಿ, ವೇದಾವತಿ, ಅಯೂಬ್‌ಖಾನ್, ಆರಿಫ್ ಹುಸೇನ್, ಪ್ರದೀಪ್‌ಚಂದ್ರ ಅವಿರೋಧವಾಗಿ ಆಯ್ಕೆಗೊಂಡರು.

    ಫಲಿತಾಂಶ ಅರಿತಿದ್ದ ಬಿಜೆಪಿ: ಮೇಯರ್, ಉಪ ಮೇಯರ್ ಸ್ಥಾನ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಒಲಿಯುವುದು ನಿಶ್ಚಿತ ಎಂಬುದು ಮನದಟ್ಟಾದ ಹಿನ್ನೆಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್, ಸಂಸದ ಪ್ರತಾಪ್‌ಸಿಂಹ ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.

    ಜೆಡಿಎಸ್‌ಗೆ ಮತ ಚಲಾಯಿಸಿದ ಜಿಟಿಡಿ: ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ದೂರ ಉಳಿದಿದ್ದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ರಾಜಕೀಯ ನಡೆ ಕುರಿತು ಸಾಕಷ್ಟು ಕುತೂಹಲ ಮೂಡಿತ್ತು. ಶನಿವಾರ ಪಾಲಿಕೆಗೆ ಆಗಮಿಸಿದ ಅವರು ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರು.

    ತನ್ವೀರ್ ಗೈರು: ದುಷ್ಕರ್ಮಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಚಿಕಿತ್ಸೆ ನಂತರ ಇದೀಗ ವಿಶ್ರಾಂತಿ ಪಡೆಯುತ್ತಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ. ಕಳೆದ ಬಾರಿ ಮೇಯರ್ ಆಯ್ಕೆಯಲ್ಲಿ ತನ್ವೀರ್ ಸೇಠ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.

    ಬಿಜೆಪಿ ಬೆಂಬಲಿಸಿದ ಮ.ವಿ.ರಾಮಪ್ರಸಾದ್: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮ.ವಿ.ರಾಮಪ್ರಸಾದ್ ಕಳೆದ ಬಾರಿಯ ಮೇಯರ್ ಚುನಾವಣೆ ಸಂದರ್ಭ ಯಾರ ಪರವಾಗಿಯೂ ಮತ ಚಲಾಯಿಸದೆ ತಟಸ್ಥರಾಗಿ ಉಳಿದಿದ್ದರು. ಈ ಬಾರಿ ಅವರು ಬಿಜೆಪಿ ಪರವಾಗಿ ಮತ ಚಲಾಯಿಸಿದರು. ಬಿಎಸ್‌ಪಿ ಸದಸ್ಯೆ ಬೇಗಂ ಪಲ್ಲವಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸಿದರು.

    ಇವರೇ ನಮ್ಮ ಮೇಯರ್: ನಗರದ ಮೀನಾ ಬಜಾರ್ ನಿವಾಸಿಯಾದ ತಸ್ನಿಂ ಸತತ ಎರಡನೇ ಬಾರಿ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡಿದ್ದು, ಇದೀಗ ಮೇಯರ್ ಸ್ಥಾನ ಅಲಂಕರಿಸಿದ್ದಾರೆ.

    ತಸ್ನಿಂ ಅವರದ್ದು ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬ. ಅವರ ಮಾವ ನಾಸಿರುದ್ದೀನ್ ಬಾಬು ನಾಲ್ಕು ಬಾರಿ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಬಿಎ ಪದವೀಧರೆಯಾಗಿರುವ ತಸ್ನಿಂ ಕಳೆದ ಬಾರಿ ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಕಳೆದ ಅವಧಿಯಲ್ಲಿ ಆಯ್ಕೆಗೊಂಡವರ ಪೈಕಿ ಅವರು ಅತ್ಯಂತ ಕಿರಿಯ ವಯಸ್ಸಿನ ಸದಸ್ಯರಾಗಿದ್ದರು. ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನಂತರ ನಡೆದ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts