ಮತದಾನ ಪ್ರಮಾಣ ಶೇ.2.04ರಷ್ಟು ಏರಿಕೆ

  • ಈ ಬಾರಿ ಶೇ.69.25ರಷ್ಟು ಹಕ್ಕು ಚಲಾಯಿಸಿದ ಮತದಾರರು
  • ಮಹಿಳಾ ಮತದಾರರ ನಿರಾಸಕ್ತಿ
  • ಮತಕೇಂದ್ರದ ಕಡೆ ಮುಖ ಮಾಡದ ಮಂಗಳಮುಖಿಯರು
  • ಚಾಮರಾಜ ಕ್ಷೇತ್ರದಲ್ಲಿ ಅತಿಕಡಿಮೆ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.69.25 ಮತದಾನವಾಗಿದ್ದು, ಕಳೆದ ಬಾರಿಗೆ(ಶೇ.67.21)ಹೋಲಿಕೆ ಮಾಡಿದರೆ ಈ ಬಾರಿ ಮತದಾನ ಪ್ರಮಾಣ ಶೇ.2.04ರಷ್ಟು ಏರಿಕೆಯಾಗಿದೆ.

ಒಟ್ಟು 18,94,372 ಮತದಾರರ ಪೈಕಿ 9,44,577 ಪುರುಷರು, 9,49,702 ಮಹಿಳೆಯರು, 127 ಮಂಗಳಮುಖಿ ಮತದಾರರು ಇದ್ದಾರೆ. ಈ ಪೈಕಿ 6,64,712 ಪುರುಷರು, 6,47,203 ಮಹಿಳೆಯರು, 14 ಮಂಗಳಮುಖಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಿರಿಯಾಪಟ್ಟಣದಲ್ಲಿ ಅತಿಹೆಚ್ಚು (ಶೇ.78.86), ಚಾಮರಾಜದಲ್ಲಿ ಅತಿಕಡಿಮೆ (ಶೇ.59.93) ಮತದಾನವಾಗಿದೆ.


ವಿಧಾನಸಭೆವಾರು ಮತದಾನ ವಿವರ: ಮಡಿಕೇರಿಯಲ್ಲಿ ಒಟ್ಟು 2,21,157 ಮತದಾರರ ಪೈಕಿ 83,781 ಪುರುಷರು, 85,513 ಮಹಿಳೆಯರು ಸೇರಿದಂತೆ ಒಟ್ಟು 1,69,296 (ಶೇ.76.55) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿರಾಜಪೇಟೆಯಲ್ಲಿ ಒಟ್ಟು 2,19,573 ಮತದಾರರ ಪೈಕಿ 79,753 ಪುರುಷರು, 79,474 ಮಹಿಳೆಯರು ಸೇರಿದಂತೆ ಒಟ್ಟು 1,59,227 (ಶೇ.72.52) ಮತದಾರರು ಮತದಾನ ಮಾಡಿದ್ದಾರೆ.

ಪಿರಿಯಾಪಟ್ಟಣದಲ್ಲಿ ಒಟ್ಟು 1,83,641 ಮತದಾರರ ಪೈಕಿ 74,926 ಪುರುಷರು, 69,886 ಮಹಿಳೆಯರು ಸೇರಿ ಒಟ್ಟು 1,44,812 (ಶೇ.78.86) ಮತದಾರರು, ಹುಣಸೂರಿನಲ್ಲಿ ಒಟ್ಟು 2,26,920 ಮತದಾರರ ಪೈಕಿ 90,103 ಪುರುಷರು, 85,181 ಮಹಿಳೆಯರು ಸೇರಿ ಒಟ್ಟು 1,75,284 (ಶೇ.77.24), ಚಾಮುಂಡೇಶ್ವರಿಯಲ್ಲಿ ಒಟ್ಟು 3,02,782 ಮತದಾರರ ಪೈಕಿ 1,11,178 ಪುರುಷರು, 1,05,848 ಮಹಿಳೆಯರು, ಒಬ್ಬರು ಮಂಗಳಮುಖಿ ಸೇರಿ 2,17,026 (ಶೇ.71.68) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕೃಷ್ಣರಾಜದಲ್ಲಿ ಒಟ್ಟು 2,43,678 ಮತದಾರರ ಪೈಕಿ 73,788 ಪುರುಷರು, 73,119 ಮಹಿಳೆಯರು ಸೇರಿ ಒಟ್ಟು 1,46,907 (ಶೇ.60.29), ಚಾಮರಾಜ ಕ್ಷೇತ್ರದಲ್ಲಿ ಒಟ್ಟು 2,33,300 ಮತದಾರರ ಪೈಕಿ 71,320 ಪುರುಷರು, 68,488 ಮಹಿಳೆಯರು, ಒಬ್ಬರು ಮಂಗಳಮುಖಿ ಸೇರಿ ಒಟ್ಟು 1,39,809 (ಶೇ.59.93), ನರಸಿಂಹರಾಜದಲ್ಲಿ ಒಟ್ಟು 2,63,321 ಮತದಾರರ ಪೈಕಿ 79,863 ಪುರುಷರು, 79,694 ಮಹಿಳೆಯರು, 12 ಮಂಗಳಮುಖಿಯರು ಸೇರಿ ಒಟ್ಟು 1,59,569 (ಶೇ.60.60) ಮತದಾರರು ಮತದಾನ ಮಾಡಿದ್ದಾರೆ.

ಪುರುಷರೇ ಮೇಲುಗೈ: ಮತದಾನದ ಹಕ್ಕು ಚಲಾಯಿಸುವಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು ಮುಂದಿದ್ದು, ಸಾಕಷ್ಟು ಮಹಿಳಾ ಮತದಾರರು ಈ ಬಾರಿ ಮತಗಟ್ಟೆ ಕಡೆ ಮುಖ ಮಾಡಲು ಹೆಚ್ಚಿನ ಆಸಕ್ತಿ ತೋರಲಿಲ್ಲ.

ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಮತದಾನ ಮಾಡಲು ಪುರುಷರು ತೋರಿದಷ್ಟು ಆಸಕ್ತಿಯನ್ನು ಮಹಿಳಾ ಮತದಾರರು ತೋರಲಿಲ್ಲ.ಈ ಬಾರಿ 13,11,930 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಈ ಪೈಕಿ 6,64,712 ಪುರುಷರು, 6,47,203 ಮಹಿಳೆಯರು, 14 ಮಂಗಳಮುಖಿಯರು ಮತದಾನ ಮಾಡಿದ್ದಾರೆ.

ಮತದಾನಕ್ಕೆ ಮಂಗಳಮುಖಿಯರ ನಿರಾಸಕ್ತಿ: ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಒಟ್ಟು 127 ಮಂಗಳಮುಖಿಯರು ಮತದಾನದ ಹಕ್ಕು ಹೊಂದಿದ್ದಾರೆ. ಈ ಪೈಕಿ ಕೇವಲ 14 ಜನರು ಮಾತ್ರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 25 (ಮಡಿಕೇರಿ 10, ವಿರಾಜಪೇಟೆ 15) ಮಂಗಳಮುಖಿಯರು ಇದ್ದು, ಈ ಪೈಕಿ ಒಬ್ಬರು ಕೂಡ ತಮ್ಮ ಹಕ್ಕು ಚಲಾಯಿಸಿಲ್ಲ. ಮೈಸೂರಿನಲ್ಲಿ 102 ಮತದಾರರು ಇದ್ದು, ಈ ಪೈಕಿ ನರಸಿಂಹರಾಜ ಮತ್ತು ಚಾಮರಾಜ ಕ್ಷೇತ್ರದ ಮಂಗಳಮುಖಿಯರು ಮಾತ್ರ ಮತದಾನ ಮಾಡಲು ಆಸಕ್ತಿ ತೋರಿದ್ದಾರೆ.

ನರಸಿಂಹರಾಜ ಕ್ಷೇತ್ರದಲ್ಲಿ 42 ಮಂಗಳಮುಖಿ ಮತದಾರರ ಪೈಕಿ 12 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಇದ್ದ ಏಕೈಕ ಮಂಗಳಮುಖಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಉಳಿದ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳಮುಖಿಯರು ಮತದಾನ ಮಾಡಿಲ್ಲ. ಹುಣಸೂರಿನಲ್ಲಿ 4, ಚಾಮುಂಡೇಶ್ವರಿಯಲ್ಲಿ 34, ಕೃಷ್ಣರಾಜದಲ್ಲಿ 21 ಮಂಗಳಮುಖಿ ಮತದಾರರು ಇದ್ದಾರೆ. ಪಿರಿಯಾಪಟ್ಟಣದಲ್ಲಿ ಮಂಗಳಮುಖಿಯರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ.