ಮೈಸೂರಿನ ಹಲವು ಮತಗಟ್ಟೆಯಲ್ಲಿ ಜನಜಾತ್ರೆ

ಮೈಸೂರು: ನಗರದ ಬಹುತೇಕ ಮತಗಟ್ಟೆಗಳಿಗೆ ನಿರೀಕ್ಷಿತ ಪ್ರಮಾಣದಷ್ಟು ಮತದಾರರು ಆಗಮಿಸಲಿಲ್ಲ. ಆದರೆ, ಕುವೆಂಪುನಗರದ ಜ್ಞಾನಗಂಗಾ, ಶಾರದಾದೇವಿನಗರ ಇಂದಿರಾ, ಕನಕಗಿರಿ, ಜಯನಗರ, ಕೃಷ್ಣಮೂರ್ತಿಪುರಂ, ಟಿ.ಕೆ.ಬಡಾವಣೆ, ಜೆ.ಪಿ.ನಗರ ಬಡಾವಣೆಗಳ ಮತಗಟ್ಟೆಗಳಲ್ಲಿ ಜನಜಾತ್ರೆಯೇ ನೆರೆದಿತ್ತು.

ಮತಕೇಂದ್ರದಲ್ಲಿ ನೂರಾರು ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಸದರಿ ಬಡಾವಣೆಗಳ ಎಲ್ಲ ಮತಗಟ್ಟೆಗಳು ಜನರಿಂದ ತುಂಬಿಹೋಗಿದ್ದವು. ಕುವೆಂಪುನಗರದಲ್ಲಿ ವಿವಿಧ ಪಕ್ಷಗಳು ತೆರೆದಿದ್ದ ಚುನಾವಣಾ ಕಟ್ಟೆಯಲ್ಲಿ ಮತದಾರರು ಗುರುತಿನ ಪತ್ರ ಪಡೆಯಲು ಮುಗಿಬಿದ್ದರು. ಕನಕಗಿರಿಯ ಶಾರದಾ ವಿಲಾಸ ಶಾಲೆ ಹಾಗೂ ಜೆ.ಪಿ.ನಗರದ ಮಹರ್ಷಿ ಶಾಲೆಯಲ್ಲಿ ತೆರೆದಿದ್ದ ಮತಗಟ್ಟೆಯಲ್ಲಿ ಮಧ್ಯಾಹ್ನ ಕೂಡ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ವಿಶೇಷ ಎನಿಸಿತು.

ಮೊಬೈಲ್ ಆ್ಯಪ್ ಬಳಕೆ: ಪ್ರತಿ ಮತಗಟ್ಟೆ ಬಳಿ ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರ ಹೆಸರು ಹುಡುಕಲು ಹರಸಾಹಸ ಪಡುತ್ತಿದ್ದರು.

ಶಾರದಾದೇವಿನಗರ, ಗಂಗೋತ್ರಿ ಬಡಾವಣೆ, ಟಿ.ಕೆ.ಬಡಾವಣೆ, ಕುವೆಂಪುನಗರ ಸೇರಿದಂತೆ ಅನೇಕ ಬಡಾವಣೆಗಳ ಬೂತ್‌ಗಳಲ್ಲಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರ ಹೆಸರನ್ನು ಸುಲಭವಾಗಿ ಹುಡುಕಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು ವಿಶೇಷವಾಗಿತ್ತು.

ಮತ ಕೇಂದ್ರಗಳ ಬಳಿಗೆ ಮತದಾರರ ಲಿಸ್ಟ್ ಇರುವ ಆ್ಯಪ್ ಬಳಕೆ ಮಾಡಿಕೊಂಡು ಕ್ಷಣಾರ್ಧದಲ್ಲಿ ಮತದಾರರ ಮಾಹಿತಿ ಕಲೆ ಹಾಕಿ ಗುರುತಿನ ಪತ್ರ ನೀಡುತ್ತಿದ್ದರು.

ರಾರಾಜಿಸಿದ ಬ್ಯಾನರ್, ಬಾವುಟ: ಪ್ರತಿಯೊಂದು ಮತಗಟ್ಟೆ ಬಳಿ ವಿವಿಧ ಪಕ್ಷಗಳ ಬಾವುಟಗಳು ರಾರಾಜಿಸುತ್ತಿದ್ದವು. ಮತದಾನ ಕೇಂದ್ರ ಸುತ್ತಮುತ್ತ ಬಾವುಟ, ಬ್ಯಾನರ್, ಬಂಟಿಂಗ್ಸ್ ಬಳಕೆ ನಿಷೇಧಿಸಲಾಗಿತ್ತು. ಆದರೆ, ಚುನಾವಣಾ ಆಯೋಗದ ಸೂಚನೆಯನ್ನು ಯಾವುದೇ ಪಕ್ಷಗಳ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಲಿಲ್ಲ.

ಚುನಾವಣಾ ವೀಕ್ಷಕರು, ಪೊಲೀಸರು ಮತಗಟ್ಟೆಗೆ ತೆರಳಿ ಬಾವುಟ, ಬ್ಯಾನರ್‌ಗಳನ್ನು ತೆರವುಗೊಳಿಸುತ್ತಿದ್ದರು. ಆದರೆ, ಸ್ಥಳದಿಂದ ಅವರು ತೆರಳುತ್ತಿದ್ದಂತೆಯೇ ಮತ್ತೆ ಯಥಾಸ್ಥಿತಿಗೆ ಮರಳುತ್ತಿತ್ತು. ಪಕ್ಷಗಳ ಟೋಪಿ, ಶಲ್ಯಗಳನ್ನು ಹಾಕಿಕೊಂಡೆ ಮತ ಕೇಳುತ್ತಿದ್ದರು.

ಕುವೆಂಪುನಗರದ ಜ್ಞಾನಗಂಗಾ ಮತಗಟ್ಟೆ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರು ಹಾಕಿದ್ದ ಬ್ಯಾನರ್‌ರನ್ನು ಪೊಲೀಸರು ತೆರವುಗೊಳಿಸುತ್ತಿದ್ದ ಸಂದರ್ಭ ರಾಜಕೀಯ ಪಕ್ಷಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ಕಡೆ ತೆರವುಗಳಿಸಿ ನಂತರ ಇಲ್ಲಿಗೆ ಬನ್ನಿ ಎಂದು ಪೊಲೀಸರಿಗೆ ದಬಾಯಿಸಿದರು. ನಾವು ಜಿಲ್ಲಾಧಿಕಾರಿ ಅನುಮತಿ ಪಡೆದೆ ಇಲ್ಲಿ ಟೇಬಲ್ ಬ್ಯಾನರ್ ಹಾಕಿದ್ದೇವೆ ಎಂದು ಪೊಲೀಸರ ವಿರುದ್ಧವೆ ಮಾತಿನ ಚಕಮಕಿ ನಡೆಸಿದರು.

ಅಷ್ಟರಲ್ಲಿ ಪಾಲಿಕೆ ಸದಸ್ಯ ರಮೇಶ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಪೊಲೀಸರು ಎಲ್ಲವನ್ನು ಚದುರಿಸಿದರು.

ಪಾಲನೆಯಾಗದ ನಿಯಮ: ಮತದಾರರಿಗೆ ಗುರುತಿನ ಪತ್ರ ನೀಡಲು ಮತಗಟ್ಟೆಯಿಂದ 100 ಮೀ. ದೂರದಲ್ಲಿ ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ತೆರೆದಿದ್ದ ಚುನಾವಣಾ ಕಟ್ಟೆಯಲ್ಲಿ ಕಾರ್ಯಕರ್ತರ ಜಾತ್ರೆಯೇ ನೆರೆದಿತ್ತು.

ನಿಯಮದ ಪ್ರಕಾರ, ಚುನಾವಣಾ ಕಟ್ಟೆಯಲ್ಲಿ ಎರಡು ಕುರ್ಚಿಗಳನ್ನು ಮಾತ್ರ ಬಳಕೆ ಮಾಡಲು ಅವಕಾಶವಿತ್ತು. ಆದರೆ, ಬಹುತೇಕ ಮತಗಟ್ಟೆಗಳಲ್ಲಿ ಹತ್ತಕ್ಕೂ ಹೆಚ್ಚು ಕುರ್ಚಿಗಳನ್ನು ಬಳಕೆ ಮಾಡಲಾಗುತ್ತಿತ್ತು. ಅಲ್ಲದೆ, ಸ್ಥಳದಲ್ಲಿ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರ ಗುಂಪು ಅಲ್ಲಿತ್ತು.

ವಿಡಿಯೋ ಚಿತ್ರಣ: ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ವೀಕ್ಷಕರು ಮತಗಟ್ಟೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ಪ್ರತಿ ಮತಗಟ್ಟೆ ಬಳಿ ಗುಂಪುಗೂಡಿದ್ದ ಜನರ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಗುಂಪುಗೂಡಿದ್ದ ಜನರನ್ನು ಚುನಾವಣಾಧಿಕಾರಿಗಳು ಚದುರಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.

ವ್ಯಾಪಾರ-ವಹಿವಾಟು ಬಂದ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು. ಹೀಗಾಗಿ ನಗರದ ಪ್ರಮುಖ ವಾಣಿಜ್ಯ ರಸ್ತೆಗಳು ರಜೆಯ ಮೂಡ್‌ನಲ್ಲಿದ್ದವು. ಇನ್ನು ಸದಾ ರಜೆಯ ಮೂಡ್‌ನಲ್ಲಿರುತ್ತಿದ್ದ ವಿವಿಧ ಬಡಾವಣೆಗಳು ಗುರುವಾರ ಚಟುವಟಿಕೆಯ ತಾಣವಾಗಿದ್ದವು.
ನಗರದ ಜನರು ತಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸಲು ಹಾಗೂ ಕಾರ್ಯಕರ್ತರು ಮತದಾರರ ಮನವೊಲಿಸುವ ಕಾರ್ಯದಲ್ಲಿ ಬೆಳಗಿನಿಂದ ಸಂಜೆವರೆಗೆ ನಿರತರಾಗಿದ್ದರು.

ಪ್ರತಾಪ್ ಸಿಂಹ ಭೇಟಿ
ಬಿಜೆಪಿ ಅಭ್ಯರ್ಥಿ, ಸಂಸದ ಪ್ರತಾಪ್ ಸಿಂಹ ಗುರುವಾರ ನಗರದ ಬಹುತೇಕ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಜತೆಗೆ ಆಯಾಯ ಮತಗಟ್ಟೆಯ ಬಿಜೆಪಿ ಪ್ರಮುಖರ ಜತೆ ಮತದಾನದ ವಿವರ ಪಡೆದುಕೊಂಡರು.

ಸಿಂಗಾರಗೊಂಡಿದ್ದ ಮಹರ್ಷಿ ಶಾಲೆ ಮತಕೇಂದ್ರ
ವಿಶ್ವೇಶ್ವರನಗರದ ಮಹರ್ಷಿ ಶಾಲೆಯ ಮತಗಟ್ಟೆಯನ್ನು ವಿಶೇಷವಾಗಿ ಸಿಂಗರಿಸಿ, ಇಡೀ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು.

ಮತದಾನ ಹಬ್ಬದ ವಿಶೇಷವಾಗಿ ಶಾಲೆಯ ಹೊರಗಡೆ ಬಾಳೆಕಂದು, ಹಸಿರು ತೋರಣ ಕಟ್ಟಿ, ಬೃಹತ್ ರಂಗೋಲಿಯನ್ನು ಬಿಡಿಸಿ, ಸಾಂಪ್ರದಾಯಿಕವಾಗಿ ಮೊದಲ ಮತದಾನಕ್ಕೆ ಬಂದಿರುವವರನ್ನು ಆರತಿ ಎತ್ತಿ, ಹಾರ ಹಾಕಿ, ತಿಲಕವಿರಿಸಿ ಸ್ವಾಗತಿಸಲಾಯಿತು. ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆದು ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು.

ಮತ ಚಲಾಯಿಸಿದ ಶತಾಯುಷಿ: 104 ವರ್ಷದ ವೃದ್ಧ ವೀರಣ್ಣ ಆರಾಧ್ಯ ಅವರು ‘ನನ್ನ ಮತ ನನ್ನ ಹಕ್ಕು’ ಎಂದು ಉತ್ಸಾಹದಿಂದ ಮತದಾನ ಮಾಡಿದರು. ಅಗ್ರಹಾರದ ನಿವಾಸಿಯಾಗಿರುವ ವೀರಣ್ಣ ಆರಾಧ್ಯ, ಮತಗಟ್ಟೆಗೆ ಮೊಮ್ಮಗನೊಂದಿಗೆ ಬಂದು ಯುವಕರೇ ನಾಚಿಕೊಳ್ಳುವಂತೆ ಮಾಡಿದ್ದಾರೆ. ಕೃಷ್ಣರಾಜ ಕ್ಷೇತ್ರದ ಮತಗಟ್ಟೆ ಸಂಖ್ಯೆ 142ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಇನ್ನು ನಿವೃತ್ತ ಶಿಕ್ಷಕರಾದ 78 ವರ್ಷದ ಶ್ರೀನಿವಾಸ ಆಚಾರ್, ಕೃಷ್ಣಮೂರ್ತಿಪುರಂ ಬಡಾವಣೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. 80 ವರ್ಷದ ಪಿ.ಆರ್.ವೆಂಕಟೇಶ್ ತನ್ನ ಮಗ ಮತ್ತು ಪತ್ನಿ ಜತೆ ಕುವೆಂಪುನಗರದ ಜ್ಞಾನಗಂಗಾ ಶಾಲೆಯಲ್ಲಿ ಮತ ಚಲಾಯಿಸಿದರು. ನಿವೃತ್ತ ಎಸಿ 80 ವರ್ಷದ ಚನ್ನಬಸಪ್ಪ ತನ್ನ ಪತ್ನಿ ಗೌರಮ್ಮರ ಜತೆ ಕುವೆಂಪುನಗರದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬೆಂಗಳೂರಿನಿಂದ ಬಂದ ದಂಪತಿ: ಬೆಂಗಳೂರಿನಲ್ಲಿ ನೆಲೆಸಿರುವ ಐಟಿ ಉದ್ಯೋಗಿ ಸುನೀಲ್ ತಮ್ಮ ಹಕ್ಕು ಚಲಾಯಿಸಲು ಮೈಸೂರಿಗೆ ಆಗಮಿಸಿ, ಕುವೆಂಪುನಗರದ ಜ್ಞಾನ ಗಂಗಾ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜತೆಗೆ ಇವರ ಪತ್ನಿ ಜೆಸ್ಮಿ ಅವರ ಮತ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಇದ್ದ ಕಾರಣ, ಮೈಸೂರಿನಿಂದ ಮತ್ತೆ ಮಡಿಕೇರಿಗೆ ತೆರಳಿದರು.

Leave a Reply

Your email address will not be published. Required fields are marked *