ರಿಲ್ಯಾಕ್ಸ್ ಮೂಡ್‌ನಲ್ಲಿ ಅಭ್ಯರ್ಥಿಗಳು

ಮೈಸೂರು: ಲೋಕಾಸಭಾ ಚುನಾವಣೆ ಹಿನ್ನೆಲೆಯಲ್ಲಿ ಉರಿ ಬಿಸಿಲ ನಡುವೆಯೇ ಒಂದೂವರೆ ತಿಂಗಳಿಂದ ವಿಶ್ರಾಂತಿ ಇಲ್ಲದೆ ಕ್ಷೇತ್ರವ್ಯಾಪ್ತಿ ಸುತ್ತಾಡಿ ಬಸವಳಿದಿದ್ದ ಮೈಸೂರು-ಕೊಡಗು ಕ್ಷೇತ್ರದ ಪ್ರಮುಖ ಎರಡು ಪಕ್ಷಗಳ ಅಭ್ಯರ್ಥಿಗಳೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.

ಮತದಾನದ ಮಾರನೇ ದಿನವಾದ ಶುಕ್ರವಾರ ಅಭ್ಯರ್ಥಿಗಳ ಮೊಗದಲ್ಲಿ ‘ಫಲಿತಾಂಶ ಏನಾಗುವುದೋ’ ಎನ್ನುವ ಆತಂಕದ ಜತೆಗೆ ನಿರಾಳತೆಯ ಭಾವ ಎದ್ದು ಕಾಣುತ್ತಿತ್ತು. ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ತಮ್ಮ ಕುಟುಂಬದವರಿಗೆ ಸಮಯ ಕೊಡಲಾಗದೆ ಹಲವು ದಿನಗಳಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದವರು, ಮನೆಯವರೊಂದಿಗೆ ಕಾಲಕಳೆದರು.

ಮತದಾನದ ಬೆಳವಣಿಗೆಗಳ ಕುರಿತಂತೆ ಶುಕ್ರವಾರ ಕೂಡ ಕೆಲ ಪಕ್ಷೇತರ ಅಭ್ಯರ್ಥಿಗಳು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿದರೆ, ಮತ್ತೆ ಕೆಲವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇನ್ನು ಕೆಲವರು ಸ್ನೇಹಿತರ ಜತೆ ಹೊರಗೆ ತೆರಳಿದ್ದರು.

ಮತದಾನ ಶಾಂತ ರೀತಿಯಲ್ಲಿ ನಡೆದ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಗುರುವಾರ ರಾತ್ರಿಯೇ ತಮ್ಮ ಕುಟುಂಬದವರ ಜತೆ ಕೂಡಿಕೊಂಡು, ಶುಕ್ರವಾರ ಮಗಳು ಮತ್ತು ಪತ್ನಿಯ ಜತೆ ಕಾಲ ಕಳೆದರು.

ಶುಕ್ರವಾರ ಬೆಳಗ್ಗೆ ತಮ್ಮ ಮನೆಗೆ ಆಗಮಿಸಿದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು. ಮಾತುಕತೆ ನಡುವೆ ಚುನಾವಣೆಯ ಮತದಾನದ ವಿವರ, ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆದಿದ್ದವು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಶಂಕರ್, ಚುನಾವಣೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದೇ ಶಾಂತಿಯುತವಾಗಿ ನಡೆದಿರುವುದು ಸಮಾಧಾನ ತಂದಿದೆ. ದಾಖಲೆಯ ರೀತಿಯಲ್ಲಿ ಮತದಾನವಾಗಿದೆ. ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿದ್ದು, ಅದನ್ನು ಪಾಲಿಸುವಂತೆ ಜನರಿಗೆ ಹೇಳಿದ್ದೆ. ಜನರು ಸ್ವಯಂಪ್ರೇರಣೆಯಿಂದ ಮತದಾನದಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ. ಜನ ಭಾಗವಹಿಸಿ ಹಕ್ಕು ಚಲಾಯಿಸಿದ್ದಾರೆ. ಜನರ ಭಾವನೆ ಸೂಕ್ಷ್ಮವಾದದ್ದು. ಜನರಿಗೆ ಏನೂ ನೀಡದಿದ್ದರೂ ಪರವಾಗಿಲ್ಲ, ಗೌರವ ನೀಡಬೇಕು. ಮುಜುಗರದ ಸನ್ನಿವೇಶವನ್ನು ಜನರು ಸಹಿಸಲ್ಲ. ಗ್ರಾಮೀಣ ಭಾಗದಲ್ಲಿ ದಾಖಲೆಯ ಮತದಾನವಾಗಿದೆ. ಜನ ನನ್ನ ಕೈಬಿಟ್ಟಿಲ್ಲ ಎನ್ನುವ ನಂಬಿಕೆಯಿದೆ ಎಂದರು.

ಮಗಳ ಜತೆ ಆಟ: ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಅವರು ವಿಜಯನಗರದ ತಮ್ಮ ಮನೆಯಲ್ಲಿ ಶುಕ್ರವಾರ ತಮ್ಮ ಮಗಳ ಜತೆ ಆರಾಮವಾಗಿ ಗಂಟೆಗಟ್ಟಲೆ ಆಟವಾಡಿ ಸಮಯ ಕಳೆದರು. ಬಳಿಕ ಮತ ಎಣಿಕೆ ನಡೆಯುವ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ತಮ್ಮ ಪಾರ್ಟಿ ಕಚೇರಿಗೆ ಭೇಟಿ ನೀಡಿದರು. ಆ ವೇಳೆ ಅಲ್ಲಿಗೆ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿ ಗುರುವಾರದ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತಿದ್ದರು. ಹೀಗಾಗಿ, ಬಿಜೆಪಿ ಕಚೇರಿ ಶುಕ್ರವಾರವೂ ಕಾರ್ಯಕರ್ತರಿಂದ ತುಂಬಿತ್ತು.

ಪ್ರತಾಪ್ ಸಿಂಹ ಮಾತನಾಡಿ, ಇಷ್ಟು ದಿನ ಚುನಾವಣೆ ಪ್ರಚಾರ ಅಂತ ಬ್ಯುಸಿಯಾಗಿದ್ದೆ. ಶುಕ್ರವಾರ ರಾತ್ರಿ ಬೆಂಗಳೂರಿಗೆ ಹೋಗುತ್ತೇನೆ. ಶನಿವಾರ ಬೆಳಗ್ಗೆ ಅಲ್ಲಿಂದ ಬೀದರ್‌ಗೆ ಹೋಗಿ ಪಕ್ಷದ ಕಾರ್ಯಕರ್ತನಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಜತೆಗೆ ಉತ್ತರ ಭಾರತದಲ್ಲೂ ಚುನಾವಣಾ ಪ್ರಚಾರದಲ್ಲಿ ತೊಡಗಿ, ಅನುಭವ ಪಡೆದುಕೊಳ್ಳುತ್ತೇನೆ ಎಂದರು.

2014ಕ್ಕಿಂತ ಹೆಚ್ಚಿನ ಮತದಾನವಾಗಿದೆ. ಕೊಡಗು ಬಿಜೆಪಿ ಪಾಲಿಗೆ ಹೆಚ್ಚು ಅನುಕೂಲಕರ ವಾತಾವರಣ ಹೊಂದಿದೆ. ಗ್ರಾಮೀಣ ಭಾಗದವರು ಕೂಡ ದೇಶಕ್ಕೆ ಮೋದಿ ಬೇಕು. ಮೋದಿ ಜತೆ ನಾವಿರಬೇಕು ಎಂದು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮೈತ್ರಿ ವಿಷಯಕ್ಕೆ ಬಂದರೆ ನಿಜಕ್ಕೂ ಮೈತ್ರಿ ಇತ್ತಾ ಎಂಬುದನ್ನು ಮಾಧ್ಯಮದವರನ್ನೇ ಕೇಳಬೇಕು. ಸಿದ್ದರಾಮಯ್ಯನವರು ಮೋಸದ ರಾಜಕಾರಣ ಮಾಡುತ್ತಿದ್ದಾರೆ. ಒಳ್ಳೆಯ ಅಂತರದಲ್ಲಿ ಗೆಲುವು ನಿಶ್ಚಿತವಾಗಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು