ಚುನಾವಣೆ ಕಾವೇರುವ ಮುನ್ನವೇ ಹರಿಯುತ್ತಿದೆ ಮದ್ಯದ ಹೊಳೆ

ಮೈಸೂರು: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಕಾವೇರುವ ಮುನ್ನವೇ ಮದ್ಯದ ಹೊಳೆ ಹರಿಯಲು ಪ್ರಾರಂಭವಾಗಿದೆ.

ಕೇವಲ 10 ದಿನಗಳಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ನಡೆಸಿದ ಕಾರ್ಯಾಚರಣೆಯಿಂದ ಪತ್ತೆಯಾದ ಅಕ್ರಮ ಮದ್ಯದ ಮೌಲ್ಯ ಬರೋಬ್ಬರಿ 1ಕೋಟಿ ರೂ…!

ದೇಶಾದ್ಯಂತ ಮಾ.10ರಿಂದ ನೀತಿಸಂಹಿತೆ ಜಾರಿಗೆ ಬಂದಿದ್ದು, ಮಾ.20ರವರೆಗಿನ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಪತ್ತೆಯಾದ ಅಕ್ರಮ ಮದ್ಯ ಮೊತ್ತ 1ಕೋಟಿ ರೂ.ಮೀರಿದ್ದು, ಚುನಾವಣೆ ಮುಗಿಯುವಷ್ಟರೊಳಗೆ ಇದರ ಪ್ರಮಾಣವನ್ನು ಊಹಿಸಲು ಅಸಾಧ್ಯ.

ಜಿಲ್ಲೆಯಲ್ಲಿ ಮತದಾರರನ್ನು ಒಲಿಸಿಕೊಳ್ಳಲು ವಿವಿಧ ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿದ್ದು, ಅದರಲ್ಲಿ ಮದ್ಯ ಪೂರೈಕೆಯೂ ಒಂದು. ಅಕ್ರಮ ಮದ್ಯ ಸಾಗಣೆ ತಡೆಗೆ ಜಿಲ್ಲಾಡಳಿತ ಹದ್ದಿನಕಣ್ಣಿರಿಸಿದ್ದು, ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಇದುವರೆಗೆ ಒಟ್ಟು 20,185.8 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಅಬಕಾರಿ ಇಲಾಖೆ 1,06,96,362 ರೂ.ಮೌಲ್ಯದ 20,117 ಲೀಟರ್, ಪೊಲೀಸ್ ಇಲಾಖೆ 24,102 ರೂ.ಮೌಲ್ಯದ 68.04 ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಅಬಕಾರಿ ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 220 ಪ್ರಕರಣಗಳನ್ನು ದಾಖಲಿಸಲಾಗಿದ್ದು, 151ಜನರನ್ನು ಬಂಧಿಸಲಾಗಿದೆ.

ಮದ್ಯ ಸಾಗಣೆಗೆ ಬೈಕ್: ಸಾಮಾನ್ಯವಾಗಿ ಚುನಾವಣೆ ಉದ್ದೇಶಕ್ಕೆ ನಾಲ್ಕು ಚಕ್ರದ ವಾಹನಗಳಲ್ಲಿ ಭಾರಿ ಪ್ರಮಾಣದಲ್ಲಿ ಮದ್ಯ ಪೂರೈಕೆಯಾಗುತ್ತದೆ. ಆದರೆ, ನಾಲ್ಕುಚಕ್ರದ ವಾಹನದಲ್ಲಿ ಮದ್ಯ ಸಾಗಣೆ ಮಾಡಿದರೆ ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚು ಎಂದು ಮನಗಂಡಿರುವ ಹಲವರು, ಈ ಬಾರಿ ಮದ್ಯ ಸಾಗಣೆಗೆ ದ್ವಿ ಚಕ್ರ ವಾಹನದ ಮೊರೆ ಹೋಗಿದ್ದಾರೆ. ಹೀಗಾಗಿ ಈ ಬಾರಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ವಶಪಡಿಸಿಕೊಂಡ ಒಟ್ಟು 28 ವಾಹನಗಳ ಪೈಕಿ 23 ವಾಹನಗಳು ದ್ವಿಚಕ್ರ ಎಂಬುದು ವಿಶೇಷ. 3 ಕಾರು, 2 ಮೂರು ಚಕ್ರದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ನೀತಿಸಂಹಿತೆ ಜಾರಿಯಾದ ನಂತರ ದಾಖಲಾತಿ ಇಲ್ಲದೆ ಸಾಗಣೆ ಮಾಡುತ್ತಿದ್ದ ಒಟ್ಟು 1,94,300 ರೂ.ನಗದು ಹಾಗೂ ಭಾರಿ ಪ್ರಮಾಣದಲ್ಲಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ನೀತಿಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *