ಕೆರೆ ಹೂಳೆತ್ತಲು ಪರ-ವಿರೋಧ ಚರ್ಚೆ

  • ಕುಕ್ಕರಹಳ್ಳಿ ಕೆರೆಯಲ್ಲಿ ಕಾಮಗಾರಿಯಿಂದ ಅಂತರ್ಜಲ ವೃದ್ಧಿ
  • ಜಲಚರ, ಪಕ್ಷಿ ಸಂಕುಲ ಸಮಸ್ಯೆ ಎದುರಿಸುವುದು ನಿಶ್ಚಿತ

ಸದೇಶ್ ಕಾರ್ಮಾಡ್ ಮೈಸೂರು
ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾರಂಜಿ ಕೆರೆ ಸಂಪೂರ್ಣ ಬರಿದಾಗಿದ್ದು, ಇದೀಗ ಕೆರೆಯ ಹೂಳೆತ್ತುವ ಕಾಮಗಾರಿ ಭರದಿಂದ ಸಾಗಿದೆ. ಕಾರಂಜಿ ಕೆರೆಯ ಮಾದರಿಯಲ್ಲೇ ಕುಕ್ಕರಹಳ್ಳಿ ಕೆರೆ ಕೂಡ ಬರಿದಾಗುತ್ತಿದ್ದು, ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕೆಂಬ ಚರ್ಚೆ ಪ್ರಾರಂಭವಾಗಿದೆ.

ಜಿಲ್ಲಾಡಳಿತ 2017 ಫೆಬ್ರವರಿ 14ರಂದು ಕುಕ್ಕರಹಳ್ಳಿ ಕೆರೆಯನ್ನು 1.40 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿತ್ತು. 1.40 ಕೋಟಿ ರೂ.ವೆಚ್ಚದಲ್ಲಿ ಕೆರೆಯ ಹೂಳೆತ್ತುವುದು, ಕೆರೆ ಏರಿ ಎತ್ತರಿಸುವುದು ಮತ್ತು ಅಗಲೀಕರಣ, ಪಾರ್ಕಿಂಗ್ ಸೌಲಭ್ಯ, ಶೌಚಗೃಹಗಳ ನಿರ್ಮಾಣ, ಮಹಾದ್ವಾರಗಳ ನಿರ್ಮಾಣ, ಚೈನ್‌ಲಿಂಕ್ ಫೆನ್ಸಿಂಗ್ ನಿರ್ಮಾಣ, ಕುವೆಂಪುವನ ಹಾಗೂ ಮಕ್ಕಳ ಉದ್ಯಾನ ನಿರ್ಮಾಣ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸಿತ್ತು. ಆದರೆ, ಯೋಜನೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು.

ಕೆರೆಯಲ್ಲಿ ಹೂಳೆತ್ತಿದರೆ ಆಗುವ ಸಾಧಕ ಭಾದಕ ಅಧ್ಯಯನ ನಡೆಸಿದ ಕೆರೆ ಅಭಿವೃದ್ಧಿ ಪ್ರಾಧಿಕಾರ ಹೂಳೆತ್ತುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳದೆ ಇರಲು ಜಿಲ್ಲಾಡಳಿತ ತೀರ್ಮಾನಿಸಿತು. ಇದೀಗ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಕುಕ್ಕರಹಳ್ಳಿ ಕೆರೆಯಲ್ಲಿ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದು, ಇದು ಹೂಳೆತ್ತಲು ಸೂಕ್ತ ಸಮಯ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೆರೆಯ ಹೂಳೆತ್ತಿದರೆ ಕೆರೆಯಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ಇದರಿಂದ ಕೆರೆಯ ಸುತ್ತಮುತ್ತ ಅಂತರ್ಜಲ ಮಟ್ಟ ಕೂಡ ವೃದ್ಧಿಯಾಗುತ್ತದೆ. ಅಲ್ಲದೆ ಮುಂದಿನ ಬೇಸಿಗೆಯಲ್ಲಿ ಕೆರೆ ಬರಿದಾಗುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಕುಕ್ಕರಹಳ್ಳಿ ಉಳಿಸಿ ಹೋರಾಟ ಸಮಿತಿಯ ಕೆರೆ ಜಯರಾಮಯ್ಯ.

ವಾಣಿವಿಲಾಸ ವಾಟರ್ ವರ್ಕ್ಸ್‌ನಿಂದ ಪ್ರತಿನಿತ್ಯ ಬರುವ 10 ಲಕ್ಷ ಲೀಟರ್ ನೀರಿನಿಂದ ಕುಕ್ಕರಹಳ್ಳಿ ಕೆರೆಯಲ್ಲಿ ಇಂದಿಗೂ ಅಲ್ಪಸ್ವಲ್ಪ ನೀರು ಉಳಿದಿದೆ. ಒಂದುವೇಳೆ ಈ ನೀರು ಬಾರದೆ ಇದ್ದರೆ ಕಾರಂಜಿ ಕೆರೆಗೆ ಒದಗಿ ಬಂದ ಸ್ಥಿತಿ ಕುಕ್ಕರಹಳ್ಳಿ ಕೆರೆಗೂ ಎದುರಾಗುತ್ತಿತ್ತು. ಹೀಗಾಗಿ ಜಿಲ್ಲಾಡಳಿತ ಕೆರೆಯ ಉಳಿವಿಗೆ ಹೂಳೆತ್ತುವ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿದೆ.


ಹೂಳೆತ್ತುವುದು ಸೂಕ್ತವಲ್ಲ: ಕಾರಂಜಿ ಕೆರೆ ಸಂಪೂರ್ಣ ಬರಿದಾಗಿದ್ದು, ಅಲ್ಲಿ ಜಲಚರಗಳು ಇಲ್ಲ. ಹೀಗಾಗಿ ಅಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿರುವುದು ಸೂಕ್ತವಾಗಿದೆ. ಕಾರಂಜಿ ಕೆರೆಯ ಮಾದರಿಯಲ್ಲೇ ಲಿಂಗಾಂಬುಧಿ ಕೆರೆ ಕೂಡ ಬರಿದಾಗಿದ್ದು, ಅಲ್ಲಿ ಬೇಕಾದರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಿ. ಕಾರಂಜಿ ಕೆರೆ, ಲಿಂಗಾಂಬುಧಿ ಕೆರೆ ಬರಿದಾಗಿರುವ ಹಿನ್ನೆಲೆಯಲ್ಲಿ ಹಕ್ಕಿಗಳು ಕುಕ್ಕರಹಳ್ಳಿ ಕೆರೆಯತ್ತ ಮುಖ ಮಾಡಿದ್ದು, ಇಂಥ ಸಂದರ್ಭದಲ್ಲಿ ಕುಕ್ಕರಹಳ್ಳಿ ಕೆರೆಯಲ್ಲಿ ಹೂಳೆತ್ತುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಪರಿಸರ ತಜ್ಞರಿಂದ ವ್ಯಕ್ತವಾಗುತ್ತಿದೆ.

ಹೆಜ್ಜಾರ್ಲೆ, ಬಣ್ಣದ ಕೊಕ್ಕರೆಗಳಿಗೆ ಕುಕ್ಕರಹಳ್ಳಿ ವಾಸಸ್ಥಾನವಾಗಿದೆ. ಇವುಗಳು ಇದೀಗ ಸಂತಾನೋತ್ಪತಿಯಲ್ಲಿ ತೊಡಗಿವೆ. ಹಜ್ಜಾರ್ಲೆ ಅಳಿವಿನ ಅಂಚಿನಲ್ಲಿರುವ ಹಕ್ಕಿಯಾಗಿದ್ದು, ಇವುಗಳ ಸಂತಾನೋತ್ಪತಿಗೆ ಧಕ್ಕೆಯಾದರೆ ಹೆಜ್ಜಾರ್ಲೆ ಸಂತತಿ ಸಂಪೂರ್ಣ ನಾಶವಾಗುವ ಭೀತಿಯನ್ನು ಪರಿಸರವಾದಿಗಳು ವ್ಯಕ್ತಪಡಿಸುತ್ತಿದ್ದಾರೆ.

ಕೆರೆ ಹೂಳೆತ್ತಲು ಜಿಲ್ಲಾಡಳಿತದ ಬಳಿ ಅನುದಾನ ಲಭ್ಯವಿದೆ. ಹೀಗಾಗಿ ಹೂಳೆತ್ತುವ ಕಾಮಗಾರಿ ಕೈಗೊಳ್ಳುವಂತೆ ಮೈಸೂರು ವಿಶ್ವ ವಿದ್ಯಾಲಯ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಕುಲಪತಿ ಪ್ರೊ. ಹೇಮಂತ್ ಕುಮಾರ್ ಯುರೋಪ್ ಪ್ರವಾಸದಲ್ಲಿ ಇದ್ದು, ಅವರು ನಗರಕ್ಕೆ ಬಂದ ನಂತರ ಮಂಗಳವಾರ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ.
ಕೆರೆ ಜಯರಾಮಯ್ಯ ಕುಕ್ಕರಹಳ್ಳಿ ಕೆರೆ ಉಳಿಸಿ ಹೋರಾಟ ಸಮಿತಿ

ಕುಕ್ಕರಹಳ್ಳಿ ಕೆರೆ ಸಂಪೂರ್ಣ ಬರಿದಾಗಿಲ್ಲ. ಇಂಥ ಸಮಯದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿ ಕೈಗೊಂಡರೆ ಜಲಚರಗಳಿಗೆ ಹಾಗೂ ಪಕ್ಷಿ ಸಂಕುಲ ಸಮಸ್ಯೆ ಎದುರಿಸುವುದು ನಿಶ್ಚಿತ. ವಿಶೇಷವಾಗಿ ಇದು ಹೆಜ್ಜಾರ್ಲೆ, ಬಣ್ಣದ ಕೊಕ್ಕರೆಗಳಿಗೆ ಸಂತಾನೋತ್ಪತಿಯ ಸಮಯವಾಗಿದ್ದು, ಇಂಥ ಸಂದರ್ಭದಲ್ಲಿ ಹೂಳೆತ್ತುವುದು ಬೇಡ.
ತನುಜಾ ಹಂಸಭಾವಿ, ಪರಿಸರವಾದಿ

Leave a Reply

Your email address will not be published. Required fields are marked *