ಕಾಲಘಟ್ಟಕ್ಕೆ ತಕ್ಕಂತೆ ಜ್ಞಾನ ವಿಮರ್ಶೆಗೆ ಒಳಗಾಗಲಿ

ಮೈಸೂರು: ಆಯಾ ಕಾಲಘಟಕ್ಕೆ ತಕ್ಕಂತೆ ಜ್ಞಾನವನ್ನು ವಿಮರ್ಶೆಗೆ ಒಳಪಡಿಸಿ ಪರಿಷ್ಕರಣೆ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಹೇಳಿದರು.

ಲಯನ್ಸ್ ಕ್ಲಬ್ ಆಫ್ ಮೈಸೂರು ಸೌತ್ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ದಕ್ಷಿಣ ಕೇಸರಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗ ಬಹಳಷ್ಟು ಜನರು ಮೂರ‌್ನಾಲ್ಕು ಪದವಿ ಪಡೆದಿರುತ್ತಾರೆ. ಆದರೆ, ಅವರಲ್ಲಿ ವಿದ್ಯೆ ಇರುತ್ತದೆ, ಜ್ಞಾನ ಇರಲ್ಲ. ಜತೆಗೆ ವಿವೇಕ, ವಿನಯವೂ ಇರಲ್ಲ. ಅವರಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲ್ಲ. ಆದ್ದರಿಂದ ವಿದ್ಯೆಯೊಂದಿಗೆ ಜ್ಞಾನ, ಕೌಶಲ ಈಗಿನ ಅಗತ್ಯ. ಇದುವೇ ಉಜ್ವಲ ಜೀವನ ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.

ಜ್ಞಾನ ಮನುಕುಲದ ಶಕ್ತಿ. ಅದು ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಾಗಲಿದ್ದು, ಜೀವನಕ್ಕೆ ಬುನಾದಿಯನ್ನು ಹಾಕಿಕೊಡುತ್ತದೆ. ಜ್ಞಾನ ಸಂಪಾದನೆ ಮಾರ್ಗವಾದ ಶಿಕ್ಷಣದ ಕುರಿತು ಈ ಹಿಂದೆ ಅರಿವು ಇರಲಿಲ್ಲ. ಆದರೀಗ, ಈ ಕುರಿತು ಜಾಗೃತಿ ಮೂಡಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಪರಿಪೂರ್ಣ ಕಲಿಕೆಯಿಂದ ವ್ಯವಸ್ಥಿತ ಜೀವನ ಕ್ರಮ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 25 ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಜನರಿಗೆ ದಕ್ಷಿಣ ಕೇಶರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಎಸ್.ಸುರೇಶ್ ಬಾಬು, ಜಯಕುಮಾರ್, ಕೆ.ಕೆ.ಮೋಹನ್, ಜಿ.ಎಸ್.ಸಂತೋಷ್, ಪಿ.ರಾಜನ್ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *