ಮಂಕಾಯ್ತು ಮುಕ್ತ ವಿವಿ

ಮೈಸೂರು : ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ)ದ ಹೊಸ ನೀತಿಯಿಂದ ಮೈಸೂರು ಕೇಂದ್ರೀತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಂಕಾಗಿದೆಯೇ?

ವಿದ್ಯಾರ್ಥಿಗಳ ದಾಖಲಾತಿ ಕುಸಿದಿರುವುದು ಇಂತಹವೊಂದು ಆತಂಕಕ್ಕೆ ಪುಷ್ಠಿ ನೀಡಿದೆ. ಸೊರಗಿರುವ ಮುಕ್ತ ವಿವಿಯ ಬಹಳಷ್ಟು ಪ್ರಾಧ್ಯಾಪಕರು ಇದನ್ನು ಒಪ್ಪಿಕೊಳ್ಳುತ್ತಾರೆ.

ಅಂಚೆ ತೆರಪಿನ ಶಿಕ್ಷಣಕ್ಕಾಗಿಯೇ ಮೀಸಲಾಗಿರುವ ರಾಜ್ಯದ ಏಕೈಕ ವಿವಿಯಾದ ಮುಕ್ತ ವಿಶ್ವವಿದ್ಯಾಲಯವು ಯುಜಿಸಿ ಮಾನ್ಯತೆ ಕಳೆದುಕೊಂಡು ನಾಲ್ಕು ವರ್ಷ ವನವಾಸ ಅನುಭವಿಸಿತ್ತು. ಇದರಿಂದ ವಿವಿ ವಿಶ್ವಾಸಾರ್ಹತೆಗೆ ಬಲವಾದ ಪೆಟ್ಟು ಬಿತ್ತು. ಇದರ ಮೇಲಿಟ್ಟಿದ್ದ ವಿದ್ಯಾರ್ಥಿಗಳ ನಂಬಿಕೆಯೂ ಕಳಚಿ ಬಿದ್ದಿತ್ತು. ಕೊನೆಗೆ ಭಗೀರಥ ಪ್ರಯತ್ನದ ಬಳಿಕ ಮಾನ್ಯತೆ ಏನೋ ಸಿಕ್ಕಿದೆ. ಆದರೆ, ಕಳೆದುಕೊಂಡ ಘನತೆಯನ್ನು ಮರಳಿ ಪಡೆಯಲು ಇನ್ನೂ ಅದಕ್ಕೆ ಸಾಧ್ಯವಾಗಿಲ್ಲ. ಇದು ಕುಸಿದಿರುವ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಸ್ಪಷ್ಟವಾಗಿಯೇ ಗೋಚರವಾಗುತ್ತಿದೆ.

ಆ.9ರಂದು ಮುಕ್ತ ವಿವಿಯ 17 ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ನೀಡಿತು. ಇದರ ಬೆನ್ನಹಿಂದೆಯೇ ಪ್ರವೇಶಾತಿ ಶುರು ಮಾಡಿದ ಮುಕ್ತ ವಿವಿಗೆ ಆರಂಭದಿಂದಲೂ ತಣ್ಣನೆಯ ಸ್ಪಂದನೆ ದೊರೆಯಿತು. ಅಕ್ಟೋಬರ್ ಮೊದಲ ವಾರದ ವೇಳೆಗೆ ಪ್ರವೇಶಾತಿಯು 10 ಸಾವಿರ ಗಡಿ ದಾಟಲು ಉಸಿರುಬಿಟ್ಟಿತು. ಈ ನಡುವೆ, ಅ.3ರಂದು ಮತ್ತೆ 14 ಕೋರ್ಸ್‌ಗಳಿಗೆ ಮಾನ್ಯತೆ ದೊರೆಯಿತು. 31 ಕೋರ್ಸ್‌ಗಳ ಪೈಕಿ 29 ವಿಷಯಗಳ ದಾಖಲಾತಿ ಅ.20ರಂದು ಮುಕ್ತಾಯಗೊಂಡಿದೆ. ಆದರೆ, ಬರೀ 12 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಹಿಂದಿನ ದಾಖಲಾತಿಗೆ ಹೋಲಿಸಿದರೆ ಅದು ತೀರಾ ಕಡಿಮೆ.

ವಿವಿಯು ಮಾನ್ಯತೆ ಕಳೆದುಕೊಳ್ಳುವ ಮುನ್ನ ಬರೀ ಇನ್‌ಹೌಸ್ ಕೋರ್ಸ್‌ಗಳಿಗೆ ಒಂದು ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಆಗ ಅಂದಾಜು 62 ಕೋರ್ಸ್‌ಗಳ ಪೈಕಿ ಪ್ರತಿ ಕೋರ್ಸ್‌ನಲ್ಲೂ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಈಗ ಪ್ರವೇಶಾತಿಗೆ ಲಭ್ಯವಿರುವ 29 ಕೋರ್ಸ್‌ಗಳ ಪೈಕಿ 2-3 ಕೋರ್ಸ್‌ಗಳನ್ನು ಬಿಟ್ಟು ಉಳಿದ ವಿಷಯಗಳಿಗೆ ಸಾವಿರಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದು ಪ್ರವೇಶಾತಿಯೊಂದಿಗೆ ಆದಾಯವನ್ನೂ ತಗ್ಗಿಸಿದೆ.

ಇದಕ್ಕೆ ಮತ್ತೊಂದು ಕಾರಣ ಯುಜಿಸಿಯ ಹೊಸ ನೀತಿಗಳು. ದೂರ ಶಿಕ್ಷಣ ಪದ್ಧತಿ ಅಡಿ ಉನ್ನತ ಶಿಕ್ಷಣ ನೀಡಲು ರಾಜ್ಯದ 4 ಸಾಂಪ್ರದಾಯಿಕ ವಿವಿಗಳಿಗೂ ಅವಕಾಶ ಮಾಡಿಕೊಟ್ಟಿದೆ. ಇದು ಮುಕ್ತ ವಿವಿಯ ಏಕಸಾಮ್ಯತೆಯನ್ನೇ ಮುರಿದು ಅದನ್ನು ದುರ್ಬಲಗೊಳಿಸಿದೆ.

ಯುಜಿಸಿ ಹೊಸ ನೀತಿಯು ಮುಕ್ತ ವಿವಿ ಕಾಯ್ದೆಗೆ ವಿರುದ್ಧ ನಡೆಯಾಗಿದೆ. ಬಾಹ್ಯ ಶಿಕ್ಷಣಕ್ಕಾಗಿಯೇ ಈ ವಿವಿ ಸ್ಥಾಪಿಸಲಾಗಿದೆ. ಆದರೀಗ ರೆಗ್ಯುಲರ್ ವಿವಿಗಳಿಗೂ ಈ ಪದ್ಧತಿಯಡಿ ಉನ್ನತ ಶಿಕ್ಷಣ ಕಲಿಸಲು ಅವಕಾಶ ನೀಡಿದರೆ ಹೇಗೆ? ಎಂದು ಮುಕ್ತ ವಿವಿ ಪ್ರಾಧ್ಯಾಪಕರೊಬ್ಬರು ಪ್ರಶ್ನಿಸಿದ್ದಾರೆ.

4 ವಿವಿಗಳೊಂದಿಗೆ ಪೈಪೋಟಿ : ಮಂಗಳೂರು ವಿಶ್ವವಿದ್ಯಾಲಯ(13 ಕೋರ್ಸ್), ಬೆಂಗಳೂರು ವಿಶ್ವವಿದ್ಯಾಲಯ(11 ಕೋರ್ಸ್), ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ(26 ಕೋರ್ಸ್) ಮತ್ತು ಮೈಸೂರು ವಿಶ್ವವಿದ್ಯಾಲಯ(17 ಕೋರ್ಸ್‌ಗಳಿಗೆ)ಗಳು ಬಾಹ್ಯ ಶಿಕ್ಷಣ ಶುರು ಮಾಡಿವೆ. ಇದು ಮುಕ್ತ ವಿವಿಗೆ ಪೈಪೋಟಿ ಹೆಚ್ಚಿಸಿದೆ.

ಮುಕ್ತ ವಿವಿಗೆ ಪ್ರವೇಶಾತಿ ಪಡೆಯಲು ಹಿಂದೇಟು ಹಾಕುತ್ತಿರುವ ವಿದ್ಯಾರ್ಥಿಗಳು, ಈ ಸಾಂಪ್ರದಾಯಿಕ ವಿವಿಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿಯೇ ಮೈಸೂರು ಪ್ರಾಂತ್ಯದ ಆಚೆಯಿಂದ ಮುಕ್ತ ವಿವಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರವೇಶಾತಿ ಅರ್ಜಿಗಳು ಬಂದಿಲ್ಲ. ಕೋಲಾರ, ಚಿಕ್ಕಬಳ್ಳಾಪುರ ಇತರೆ ಅಕ್ಕಪಕ್ಕದ ಜಿಲ್ಲೆಯವರು ಬೆಂಗಳೂರು ವಿವಿಯ ದೂರ ಶಿಕ್ಷಣ ಕೇಂದ್ರದತ್ತ ವಾಲಿದ್ದಾರೆ. ಇದೇ ಸ್ಥಿತಿ ಮಂಗಳೂರು ವಿವಿ, ಕುವೆಂಪು ವಿವಿಯ ಸುತ್ತಲಿನ ಜಿಲ್ಲೆಯ ವಿದ್ಯಾರ್ಥಿಗಳು ತಮಗೆ ಸಮೀಪವಾಗಿರುವ ಈ ವಿವಿಯಲ್ಲಿ ಬಾಹ್ಯ ಶಿಕ್ಷಣ ಕಲಿಯಲು ಹೆಚ್ಚು ಆಸಕ್ತಿ ತೋರಿದ್ದಾರೆ. ಇದು ವಿದ್ಯಾರ್ಥಿಸಮೂಹ ಚದುರಿ ಹೋಗಲು ಕಾರಣವಾಗಿದೆ. ಹೀಗಾಗಿ, ರಾಜ್ಯಾದ್ಯಂತ ವಿವಿಧ ಪ್ರದೇಶದಿಂದ ಮುಕ್ತ ವಿವಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಜತೆಗೆ, ಈ ಸಾಂಪ್ರದಾಯಿಕ ವಿವಿಗಳ ದೂರ ಶಿಕ್ಷಣದ ದಾಖಲಾತಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರಾಧ್ಯಾಪಕರೊಬ್ಬರು ವಿಶ್ಲೇಷಿಸಿದರು.

ಅಕ್ಕಪಕ್ಕದಲ್ಲಿರುವ ಮೈಸೂರು ವಿವಿ ಮತ್ತು ಮುಕ್ತ ವಿವಿ ನಡುವೆ ಪೈಪೋಟಿ ಸೃಷ್ಟಿಯಾಗಿದೆ. ಮೈಸೂರು ವಿವಿಯ ದೂರ ಶಿಕ್ಷಣಕ್ಕೆ 9 ಕೋರ್ಸ್‌ಗಳಿಂದ 33 ವಿದ್ಯಾರ್ಥಿಗಳು ಈಗ ದಾಖಲಾಗಿರಬಹುದು. ಆದರೆ ಭವಿಷ್ಯದಲ್ಲಿ ಈ ಸಂಖ್ಯೆ ವೃದ್ಧಿಯಾಗುವ ಮೂಲಕ ಮುಕ್ತ ವಿವಿಗೆ ತಕ್ಕ ಸ್ಪರ್ಧೆ ನೀಡಲು ಅದು ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಮುಕ್ತ ವಿವಿ ಹೇಗೆ ಸಜ್ಜಾಗಲಿದೆ ಎನ್ನುವುದರ ಮೇಲೆ ಅದರ ಅಳಿವು-ಉಳಿವು ನಿರ್ಧಾರವಾಗಲಿದೆ.ಆದರೆ, ಯುಜಿಸಿ ಈ ಕ್ರಮದಿಂದ ರಾಜ್ಯದ 4 ವಿವಿಗಳಲ್ಲೇ ಬಾಹ್ಯ ಶಿಕ್ಷಣ ಕಲಿಯಲು ಆಯಾ ಪ್ರಾಂತ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದು ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆಯನ್ನು ಹೆಚ್ಚಿಸಲಿದೆ.

ರಾಜ್ಯದ 4 ವಿವಿಗಳು ದೂರ ಶಿಕ್ಷಣ ನೀಡುತ್ತಿರುವುದರಿಂದ ಮುಕ್ತ ವಿವಿಗೆ ಏನೂ ತೊಂದರೆ ಇಲ್ಲ. ಈ ವಿಷಯವಾಗಿ ಯಾವುದೇ ಆತಂಕವೂ ಇಲ್ಲ. ಪ್ರವೇಶಾತಿಗೆ ಕಡಿಮೆ ಅವಧಿಯಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಪ್ರತಿಭಾವಂತ ಬೋಧಕರು, ಗುಣಮಟ್ಟದ ಸಿದ್ಧಪಾಠಗಳಿವೆ. ಈ ಸೌಲಭ್ಯ ಬೇರೆ ವಿವಿಗಳಲ್ಲಿ ಇಲ್ಲ. ರಾಜ್ಯದಲ್ಲಿ ಮುಕ್ತ ವಿವಿ ಮಾತ್ರ ದೂರ ಶಿಕ್ಷಣ ನೀಡಬೇಕು. ಈ ವಿಷಯವಾಗಿ ರಾಜ್ಯ ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

ಅಂಚೆ ತೆರಪಿನ ಶಿಕ್ಷಣ ನೀಡಲು ಯುಜಿಸಿ ಅವಕಾಶ ನೀಡಿದೆ. ಆ ಪ್ರಕಾರ ನಾವು ಕಾರ್ಯೋನ್ಮುಖವಾಗಿದ್ದೇವೆ. ಈ ವಿಷಯದಲ್ಲಿ ಮೈಸೂರು ವಿವಿಗೆ ಅನುಭವ ಇದೆ. ಹಾಲಿ ಇರುವ ಪರಿಣಿತ, ನುರಿತ ಬೋಧಕರು, ಮೂಲಸೌಕರ್ಯ ಬಳಕೆ ಮಾಡಿಕೊಂಡು ಗುಣಮಟ್ಟ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಇದುವೇ ಮೈಸೂರು ವಿವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿಕ್ಕೆ ಇರುವ ಮುಖ್ಯ ವ್ಯತ್ಯಾಸ ಎಂದು ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಆಯಿಷಾ ಎಂ. ಶರೀಫ್ ತಿಳಿಸಿದ್ದಾರೆ.