ತಮಿಳುನಾಡು ಸರ್ಕಾರದ ನಡೆಗೆ ಖಂಡನೆ

ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರದ ಕ್ರಮ ಮೈಸೂರು ಕನ್ನಡ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಈ ಹಿಂದೆ ಕೆಆರ್‌ಎಸ್, ಶಿವನಸಮುದ್ರ ಜಲವಿದ್ಯುತ್ ನಿರ್ಮಾಣ ಸಮಯದಲ್ಲಿಯೂ ಇದೇ ರೀತಿಯ ಕ್ಯಾತೆ ತೆಗೆದಿದ್ದ ತಮಿಳುನಾಡು ಸರ್ಕಾರ, ಈಗ ಮೇಕೆದಾಟು ಯೋಜನೆ ವಿಷಯದಲ್ಲಿಯೂ ತಕರಾರು ತೆಗೆದಿದೆ ಎಂದು ದೂರಿದರು.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲು ಅವಕಾಶ ಕಲ್ಪಿಸಿಕೊಟ್ಟು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದೆ. ಆದರೆ ತಮಿಳುನಾಡು ಸರ್ಕಾರ ಯೋಜನೆ ಜಾರಿಗೆ ಅವಕಾಶ ನೀಡಬಾರದು ಎಂದು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ವಾಸ್ತವವಾಗಿ ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ನಷ್ಟವಿಲ್ಲದಿದ್ದರೂ ರಾಜಕೀಯ ಲಾಭಕ್ಕಾಗಿ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದರು.
ರಾಜ್ಯ ಸರ್ಕಾರ, ಸಂಸದರು ಒಗ್ಗಟ್ಟಿನಿಂದ ಮೇಕೆದಾಟು ಯೋಜನೆ ವಿಷಯದಲ್ಲಿ ಪಕ್ಷಾತೀತವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಬೇಕು. ಆ ಮೂಲಕ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಡಿಪಿಆರ್ ತಯಾರಿಸಿ, ಕೇಂದ್ರ ನದಿ ಪ್ರಾಧಿಕಾರದ ಮುಂದಿಟ್ಟು ಯೋಜನೆಗೆ ಅನುಮೋದನೆ ಪಡೆಯಬೇಕು ಎಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಡಾ.ರಂಗಸ್ವಾಮಿ, ಡಾ.ಸುಭಾಷ್, ನಾಗರಾಜು, ಮಮತಾ, ನಾಲಾಬೀದಿ ರವಿ, ರೇವಣ್ಣ, ರಾಧಾಕೃಷ್ಣ, ಬಾಬು, ಪಾಪಣ್ಣಿ, ಗೋಪಿ, ಶಂಕರ್ ಉತ್ತನಹಳ್ಳಿ, ಗುರುಬಸಪ್ಪ ಇತರರು ಹಾಜರಿದ್ದರು.