ವೈದ್ಯರಾಗುವವರಿಗೆ ಶುದ್ಧ ಅಂತಃಕರಣ ಇರಲಿ

*ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಸಲಹೆ

ಮೈಸೂರು: ವೈದ್ಯರಾಗುವವರಿಗೆ ನಿರಂತರ ಕಲಿಯುವ ಆಸಕ್ತಿ ಜತೆಗೆ ಶುದ್ಧ ಅಂತಃಕರಣವೂ ಇರಬೇಕು ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ಶಿವರಾತ್ರೀಶ್ವರ ನಗರದ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ 9ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಿ ಮಾತನಾಡಿದರು.

ವೈದ್ಯರ ವೃತ್ತಿ ಅತ್ಯಂತ ಶ್ರೇಷ್ಠ ಹಾಗೂ ಕಠಿಣವಾಗಿದ್ದು, ವೈದ್ಯರಿಗೆ ಜೀವ ಉಳಿಸುವ ಹಕ್ಕಿದೆ ಹೊರತು ಜೀವ ತೆಗೆಯುವ ಹಕ್ಕಿಲ್ಲ. ವೈದ್ಯರು ಹಣ, ಜಾತಿ, ಧರ್ಮ, ದ್ವೇಷಕ್ಕೆ ಆದ್ಯತೆ ನೀಡದೆ, ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು, ಬದ್ಧತೆಯಿಂದ ಕರ್ತವ್ಯ ಮಾಡಬೇಕು ಎಂದರು.

ಪ್ರತಿಯೊಬ್ಬ ರೋಗಿ, ವೈದ್ಯರ ಮೇಲೆ ಅಪಾರ ನಂಬಿಕೆ ಹೊಂದಿರುತ್ತಾರೆ. ಈ ನಂಬಿಕೆಗೆ ತಕ್ಕಂತೆ ವೈದ್ಯರು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಪ್ರತಿಯೊಬ್ಬರ ನೆರವಿಗೆ ಮುಂದಾಗಬೇಕು. ಹಣ ಸಂಪಾದಿಸಬೇಕು ನಿಜ, ಆದರೆ, ಹಣವೇ ಬದುಕಲ್ಲ ಎಂಬುದನ್ನು ಅರಿತು ಶುದ್ಧ ಅಂತಃಕರಣದಿಂದ, ರೋಗಿಗಳನ್ನು, ಪಾಲಕರನ್ನು, ಗುರುಗಳನ್ನು ಮರೆಯದೆ ವೃತ್ತಿ ನಿರ್ವಹಿಸಬೇಕು ಎಂದರು.

1279 ವಿದ್ಯಾರ್ಥಿಗಳಿಗೆ ಪದವಿ
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 1279 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಸ್ವೀಕರಿಸಿದರು. 35 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪಡೆದರೆ, 41 ವಿದ್ಯಾರ್ಥಿಗಳಿಗೆ 65 ಚಿನ್ನದ ಪದಕ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಇವರಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಅತಿರಾ ಜಿ.ದಾಸ್ 7 ಚಿನ್ನದ ಪದಕಗಳಿಗೆ ಭಾಜನವಾಗಿ 9ನೇ ಘಟಿಕೋತ್ಸವದಲ್ಲಿ ಹೆಚ್ಚು ಚಿನ್ನದ ಪದಕ ಪಡೆದ ಗೌರವಕ್ಕೆ ಭಾಜನರಾದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಬೋಧಿಸಿದರು.