ಕೆಲಸ ಮಾಡದ ಅಧಿಕಾರಿಗಳನ್ನು ಅಮಾನತುಗೊಳಿಸಿ

ಜಿಪಂ ಸಿಇಒ ಜ್ಯೋತಿ ಅವರಿಗೆ ಸಚಿವ ಜಿ.ಟಿ.ದೇವೇಗೌಡ ಸೂಚನೆ

ಮೈಸೂರು ; ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಸತಾಯಿಸುತ್ತಿರುವ ಅಧಿಕಾರಿಗಳನ್ನು ಮುಲಾಜಿಲ್ಲದೇ ಅಮಾನತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಜಿಪಂ ಸಿಇಒ ಜ್ಯೋತಿ ಅವರಿಗೆ ಸೂಚಿಸಿದರು.

ಇಲವಾಲ ಹೋಬಳಿ ವ್ಯಾಪ್ತಿಯ ಕಂದಾಯ ಅದಾಲತ್ ಹಾಗೂ ಜನಸಂಪರ್ಕ ಸಭೆಯಲ್ಲಿ ಶನಿವಾರ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿ, ಗ್ರಾಪಂ ಕಚೇರಿಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಿಮ್ಮ ಸಮಸ್ಯೆಗಳು ಏನೇ ಇದ್ದರೂ ತಿಳಿಸಿ, ಮನವಿ ಕೊಡಿ. ಅಧಿಕಾರಿಗಳೇ ನಿಮ್ಮ ಊರುಗಳಿಗೆ ಬಂದು ನಿಮ್ಮ ಸಮಸ್ಯೆ ಬಗೆಹರಿಸುವರು. ಚಳಿಗಾಲ ಅಧಿವೇಶನ ಮುಗಿದ ಬಳಿಕ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡುವೆ. ಆ ಸಂದರ್ಭದಲ್ಲಿ ಜನರ ಸಮಸ್ಯೆ ಹಾಗೇ ಉಳಿದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವೆ ಎಂದರು.