ಜಂಬೂ ಸವಾರಿಗೆ ಹರಿದು ಬಂದ ಜನಸಾಗರ

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಆಕರ್ಷಣೆಯ ಕೇಂದ್ರ ಬಿಂದು ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಶುಕ್ರವಾರ ಸಾಂಸ್ಕೃತಿಕ ನಗರಿಯತ್ತ ಜನಸಾಗರವೇ ಹರಿದು ಬಂತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.

ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಜನರು ಜೀವದ ಹಂಗು ತೊರೆದು ಪಾರಂಪರಿಕ ಕಟ್ಟಡಗಳು, ಮರಗಳ ಮೇಲೆ ಏರಿ ಜಂಬೂ ಸವಾರಿ ಮೆರವಣಿಗೆಯನ್ನು ನೋಡಿ ಕಣ್ತುಂಬಿ ಕೊಂಡರು. ಈ ಬಾರಿ ದಸರಾ ಉತ್ಸವ ಹೆಚ್ಚು ಆಕರ್ಷಕವಾಗಿದ್ದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಿತು. ದಸರಾ ಪ್ರಾರಂಭವಾಗುವ ಮುನ್ನವೇ ನಗರದ ಎಲ್ಲ ಹೋಟೆಲ್‌ಗಳ ರೂಂಗಳು ಭರ್ತಿಯಾಗಿತ್ತು.

ಪಾರಂಪರಿಕ ಕಟ್ಟಡ ಏರಿದ ಜನ: ಕೆ.ಆರ್. ವೃತ್ತದಿಂದ ಆಯುರ್ವೇದ ವೃತ್ತದವರೆಗೆ ಇರುವ ಬಹುತೇಕ ಎಲ್ಲ ಪಾರಂಪರಿಕ ಕಟ್ಟಡಗಳು ದುಸ್ಥಿತಿಯಲ್ಲಿ ಇವೆ. ಕೆಲವು ವರ್ಷಗಳ ಹಿಂದೆ ಪಾರಂಪರಿಕ ಕಟ್ಟಡಗಳ ಮೇಲೆ ಕುಳಿತು ಜಂಬೂ ಸವಾರಿ ವೀಕ್ಷಣೆಗೆ ನಿಷೇಧ ಹೇರಲಾಗಿತ್ತು. ಆದರೆ, ದುಸ್ಥಿತಿಯಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಏರುವುದು ಅಪಾಯ ಎಂದು ತಿಳಿದಿದ್ದರೂ ಜನರು ಕಟ್ಟಡಗಳನ್ನು ಏರಿ ಜಂಬೂ ಸವಾರಿ ವೀಕ್ಷಿಸಿದರು.

ಜನರು ರಸ್ತೆ ಮೇಲೆ, ವಾಹನಗಳ ಮೇಲೆ ಕುಳಿತು ಜಂಬೂ ಸವಾರಿ ವೀಕ್ಷಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಜಂಬೂ ಸವಾರಿ ಹತ್ತಿರ ಬರುತ್ತಿದ್ದಂತೆ ತಾಯಿ ಚಾಮುಂಡೇಶ್ವರಿಗೆ ಕೈ ಮುಗಿದು ಭಕ್ತಿ ಮೆರೆದರು. ಸಾಕಷ್ಟು ಜನರು ಮೊಬೈಲ್ನಲ್ಲಿ ಜಂಬೂ ಸವಾರಿ ಮೆರವಣಿ ಗೆಯ ದೃಶ್ಯಗಳನ್ನು ಸೆರೆ ಹಿಡಿದು ಸಂಭ್ರಮಿಸಿದರು.

ತಳ್ಳಾಟ, ನೂಕಾಟ: ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸಾಕಷ್ಟು ಜನರು ನೆರೆದಿದ್ದ ಹಿನ್ನೆಲೆಯಲ್ಲಿ ಜಂಬೂಸವಾರಿ ವೀಕ್ಷಿಸಲು ತಳ್ಳಾಟ- ನೂಕಾಟ ನಡೆಯಿತು. ಆಯುರ್ವೇದ ವೃತ್ತ, ಭಾರತೀಯ ವೈದ್ಯಕೀಯ ಸಭಾ, ಪಂಚಮುಖಿ ಗಣಪತಿ ವೃತ್ತ, ಹೈವೇ ವೃತ್ತ ಸೇರಿದಂತೆ ಎಲ್ಲ ಕಡೆಯೂ ತಳ್ಳಾಟ-ನೂಕಾಟ ಕಂಡು ಬಂತು.

ಲಘು ಲಾಠಿ ಪ್ರಹಾರ: ಜಂಬೂ ಸವಾರಿ ಮೆರವಣಿಗೆ ಸಯ್ಯಜಿರಾವ್ ರಸ್ತೆ ಬಳಿ ತಲುಪಿದಾಗ ನೂಕುನುಗ್ಗಲು ಉಂಟಾಯಿತು. ಚಾಮುಂಡೇಶ್ವರಿ ಸಿನಿಮಾ ಮಂದಿರದ ಪಕ್ಕದ ರಸ್ತೆಗೆ ಹೋಗದಂತೆ ತಡೆಯಲು ನಿರ್ಮಿಸಿದ್ದ ಬ್ಯಾರಿಕೇಡ್‌ಅನ್ನು ಹತ್ತಿ ಇಳಿಯಲು ಕೆಲವರು ಪ್ರಯತ್ನಿಸಿದರು. ಈ ಸಂದರ್ಭ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಜಂಬೂ ಸವಾರಿಗೆ ಅಡ್ಡಿ, ಆತಂಕ: ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ತಲುಪಲು ಈ ಬಾರಿ ಸಾಕಷ್ಟು ಅಡ್ಡಿ ಆತಂಕ ಎದುರಿಸಿತು.

ಜಂಬೂ ಸವಾರಿ ಸಾಗುವ ಮಾರ್ಗದ ಉದ್ದಕ್ಕೂ ಜನರಿಗೆ ಮೆರವಣಿಗೆಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಎಚ್ಚರ ವಹಿಸಲು ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಈ ಬಾರಿ ಜಂಬೂ ಸವಾರಿ ಪ್ರಾರಂಭಗೊಂಡರೂ ಸ್ತಬ್ಧಚಿತ್ರ ಹಾಗೂ ಕಲಾತಂಡಗಳು ಮೆರವಣಿಗೆ ಪೂರ್ಣಗೊಳ್ಳಲಿಲ್ಲ. ಇದರಿಂದ ಅರ್ಜುನ ಚಾಮರಾಜ ವೃತ್ತದಲ್ಲಿ 15 ನಿಮಿಷ ಅಂಬಾರಿ ಹೊತ್ತು ನಿಲ್ಲಬೇಕಾಯಿತು. ಅಲ್ಲದೆ ಆಯುರ್ವೇದ ವೃತ್ತ, ಹೈವೇ ವೃತ್ತ ಸೇರಿದಂತೆ ವಿವಿಧೆಡೆ ಅಂಬಾರಿಗೆ ಅಡ್ಡಿ ಎದುರಾಯಿತು.

ಅಪರಿಚಿತ ವ್ಯಕ್ತಿ ಸಾವು: ದಸರಾ ವೀಕ್ಷಿಸಲು ಆಗಮಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟರು.
ಚಿಕ್ಕಗಡಿಯಾರ ಬಳಿ ಜಂಬೂಸವಾರಿ ಮೆರವಣಿಗೆ ವೀಕ್ಷಿಸುತ್ತಿದ್ದ ಸಂದರ್ಭ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರ ಪಾಲಿಕೆಯ ವಾಹನದಲ್ಲಿ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದರು.

ಕುದುರೆ ಸವಾರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯಿಮಾ ಸುಲ್ತಾನ್ ಮೂರನೇ ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿ ದರು. ಮಾರ್ಗದ ಉದ್ದಕ್ಕೂ ಸಾರ್ವಜನಿಕರತ್ತ ಕೈ ಬೀಸಿ ಸಂಭ್ರಮ ಹಂಚಿಕೊಂಡರು.
ಪ್ರತಿ ಬಾರಿ ಜಿ.ಪಂ. ಅಧ್ಯಕ್ಷರೊಂದಿಗೆ ಮೇಯರ್ ಕೂಡ ಕುದುರೆ ಸವಾರಿ ಮಾಡುತ್ತಾರೆ. ಆದರೆ, ಈ ಬಾರಿ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ಸದಸ್ಯರೊಬ್ಬರಿಗೆ ಕುದುರೆ ಏರುವ ಅವಕಾಶ ಕೈತಪ್ಪಿತು.

ನಾಡದೇವಿಗೆ ಪೂಜೆ: ಜಂಬೂ ಸವಾರಿ ಮೆರವಣಿಗೆ ನಗರದ ಹಳೇ ಎಪಿಎಂಸಿ ಬಳಿ ತಲುಪಿದಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಹೈವೇ ವೃತ್ತದ ಬಳಿ ಮಂಜುನಾಥ ದೇವಸ್ಥಾನ ಸಮಿತಿ ವತಿಯಿಂದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು.