ಹೆಣ್ಣ ಮಕ್ಕಳ ರಕ್ಷಣೆ ಸಂದೇಶದ ಚಿತ್ರ

ಮೈಸೂರು: ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆಯ ಕಾರ್ಯಕರ್ತರು ನಗರದ ಮಹಾರಾಣಿ ಕಾಲೇಜಿನ ಕಾಂಪೌಂಡ್ ಮೇಲೆ ಹೆಣ್ಣು ಮಕ್ಕಳ ರಕ್ಷಣೆಯ ಸಂದೇಶ ಸಾರುವ ಚಿತ್ರ ಬರೆದು ಗಮನ ಸೆಳೆದರು.

ಭ್ರೂಣ ಹತ್ಯೆ ತಡೆ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಕುರಿತು ಜನರಲ್ಲಿ ಅರಿವು ಮೂಡಿಸಲು ಇವರು ಚಿತ್ರಕಲೆಯ ಮೊರೆ ಹೋದರು.

ಸಂಸ್ಥೆಯ 15 ಸದಸ್ಯರು ಹೆಣ್ಣಿನಿಂದಲೇ ಸಾಧನೆ ಸಾಧ್ಯ, ಭ್ರೂಣ ಹತ್ಯೆ ಮಾಡಬೇಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೈಜೋಡಿಸಿ ಎಂಬ ಸಂದೇಶ ಬರೆದರು. ಜತೆಗೆ ಕಾಂಪೌಂಡ್ ಉದ್ದಕ್ಕೂ ಬಾಲಕಿಯರ, ಯುವತಿಯರ ಹಾಗೂ ವಿವಿಧ ಉದ್ಯೋಗದಲ್ಲಿರುವ ಮಹಿಳೆಯರ ಚಿತ್ರ ಬರೆಯುವ ಮೂಲಕ ಸ್ತ್ರೀ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸಿದರು.

ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು, ಸಂಸ್ಥೆಯ ಡಾ.ಸಾರಿಕಾ ಪ್ರಸಾದ್, ಅನಿತಾ ಸುರೇಶ್, ಸುಮಾ ಮಹೇಶ್, ಚಂದ್ರಿಕಾ ಸುಧೀರ್, ಸೌಜನ್ಯ ಅತ್ತಾವರ್ ಇತರರು ಹಾಜರಿದ್ದರು.