ಚೆನ್ನೈ ಚಾಲೆಂಜರ್ಸ್‌ ವಿರುದ್ಧ ಮುಂಬೈ ತಂಡಕ್ಕೆ ರೋಚಕ ಗೆಲುವು

ಮೈಸೂರು: ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದರೂ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾದ ಮುಂಬೈ ಚೆ ರಾಜೆ ತಂಡ ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌ನಲ್ಲಿ 4 ಅಂಕಗಳಿಂದ ರೋಚಕ ಗೆಲುವು ಪಡೆಯಿತು.

ಇಲ್ಲಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಚೆನ್ನೈ ಚಾಲೆಂಜರ್ಸ್‌ ತಂಡದ ವಿರುದ್ಧ 32-28 ಅಂಕಗಳಿಂದ ಗೆಲುವು ಪಡೆಯಿತು.

ಪಂದ್ಯದ ಆರಂಭದಲ್ಲಿ ಎರಡೂ ತಂಡದ ಆಟಗಾರರು ಸಮಬಲ ಹೋರಾಟ ನೀಡುವಲ್ಲಿ ಯಶಸ್ವಿಯಾದರು. ಒಮ್ಮೆ ಮುಂಬೈ ತಂಡದ ಆಟಗಾರರು, ಮತ್ತೊಮ್ಮೆ ಚೆನ್ನೈ ತಂಡದ ಆಟಗಾರರು ಅಂಕಪಡೆಯುತ್ತಿದ್ದರು. ಹೀಗಾಗಿ ಮೊದಲ ಅವಧಿಯ 10 ನಿಮಿಷದ ವೇಳೆಗೆ ಪಂದ್ಯ 7-7 ಅಂಕಗಳಿಂದ ಸಮಬಲ ಕಂಡಿತು.

ಬಳಿಕವೂ ರೋಚಕ ಸಮಬಲ ಹೋರಾಟ ಮೂಡಿಬಂದರೂ ಬಲಿಷ್ಠ ರೈಡಿಂಗ್ ಮತ್ತು ರಕ್ಷಣಾತ್ಮಕ ಪಡೆ ಹೊಂದಿರುವ ಚೆನ್ನೈ ತಂಡ, ಮುಂಬೈ ತಂಡದ ಮೇಲೆ ಸವಾರಿ ಮಾಡಿತು. ನಾಯಕ ಇಳೆರಾಜ ಅದ್ಭುತ ರೈಡಿಂಗ್ ಪ್ರದರ್ಶಿಸಿ 6 ಅಂಕ ಪಡೆದರು. ಇದರೊಂದಿಗೆ ಮೊದಲಾರ್ಧದಲ್ಲಿ ಚೆನ್ನೈ ತಂಡ 15-12 ಅಂಕಗಳಿಂದ ಮುನ್ನಡೆ ಸಾಧಿಸಿತು.

ತಿರುಗೇಟು ನೀಡಿದ ಮುಂಬೈ: 3 ಆಟಗಾರರೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಮುಂಬೈ ತಂಡವನ್ನು 2.30 ನಿಮಿಷದಲ್ಲೇ ಆಲೌಟ್ ಮಾಡಿದ ಚೆನ್ನೈ 17-13 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು. ಬಳಿಕ ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಂತ ಮುಂಬೈ ತಂಡದ ಆಟಗಾರರು ಚೆನ್ನೈ ತಂಡವನ್ನು ದ್ವಿತೀಯಾವಧಿಯ 16ನೇ ನಿಮಿಷದಲ್ಲಿ ಆಲೌಟ್ ಬಲೆಗೆ ಕೆಡವಿ 26-26 ಅಂಕಗಳಿಂದ ಮತ್ತೆ ಸಮಬಲ ಸಾಧಿಸಿತು.

ಕಡೇ ಎರಡು ನಿಮಿಷದಲ್ಲಿ ಮುಂಬೈ ಪರ ರೈಡಿಂಗ್ ಮಾಡಿದ ಮಣಿವೀರ್ ಕಾಂತ ಎರಡು ಅಂಕ ಪಡೆದು ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಮುಂಬೈನ ಮಹೇಶ್ 7 ಅಂಕ, ಮಣಿವೀರ್‌ಕಾಂತ್ ಮತ್ತು ಎ.ಆರುಲ್ ತಲಾ ಆರು ಅಂಕಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಡೀಲರ್ ಡೆಲ್ಲಿಗೆ ಗೆಲುವು: ಶುಕ್ರವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಡೀಲರ್ ಡೆಲ್ಲಿ ತಂಡ 40-37 ಅಂಕಗಳಿಂದ ತೆಲುಗು ಬುಲ್ಸ್ ತಂಡವನ್ನು ಮಣಿಸಿತು.

ಡೆಲ್ಲಿ ತಂಡ ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಕ್ರಮವಾಗಿ 9-14, 8-8, 6-11ರಲ್ಲಿ ಹೋರಾಟ ತೋರಿತು. ಆದರೆ ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲಿ ಟ್ಯಾಕಲ್ ಮತ್ತು ರೇಡಿಂಗ್‌ನಲ್ಲಿ ಅಬ್ಬರಿಸಿದ ಡೆಲ್ಲಿ ಆಟಗಾರರು 17-4ರಲ್ಲಿ ಪ್ರಾಬಲ್ಯ ಮೆರೆದು ಪಂದ್ಯವನ್ನು ವಶಪಡಿಸಿಕೊಂಡರು.

Leave a Reply

Your email address will not be published. Required fields are marked *