ಹೈದರಾಬಾದ್, ಗೋವಾ, ಕೊಚ್ಚಿಗೆ ವಿಮಾನ ಹಾರಾಟ ಆರಂಭ

ಮೈಸೂರು: ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಶುಕ್ರವಾರ ಮೂರು ವಿಮಾನಗಳು ಹೈದರಾಬಾದ್, ಗೋವಾ ಮತ್ತು ಕೊಚ್ಚಿ ನಡುವೆ ಹಾರಾಟ ಪ್ರಾರಂಭಿಸಿದವು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 3.20ಕ್ಕೆ ಮೈಸೂರು-ಗೋವಾ ನಡುವಿನ ವಿಮಾನ ಸಂಚಾರಕ್ಕೆ ಹಸಿರು ನಿಶಾನೆ ತೋರಲಾಯಿತು. ಒಟ್ಟು 70 ಸೀಟುಗಳ ಸಾಮರ್ಥ್ಯಯುಳ್ಳ ವಿಮಾನದಲ್ಲಿ 58 ಜನರು ಪ್ರಯಾಣ ಬೆಳೆಸಿದರು. ಈಗಾಗಲೇ ಅಲಯನ್ಸ್ ಏರ್ ಸಂಸ್ಥೆಯು ಮೈಸೂರು-ಬೆಂಗಳೂರು ನಡುವೆ ವಿಮಾನಯಾನ ಸೇವೆ ಒದಗಿಸುತ್ತಿದ್ದು, ಇದೀಗ ಹೈದರಾಬಾದ್, ಗೋವಾ ಮತ್ತು ಕೊಚ್ಚಿ ನಗರಗಳಿಗೂ ವಿಸ್ತರಿಸಿದೆ. ಟ್ರೂ ಜೆಟ್ ವಿಮಾನಯಾನ ಸಂಸ್ಥೆಯು ಮೈಸೂರು-ಚೆನ್ನೈ ನಡುವೆ ವಿಮಾನಯಾನ ಸೇವೆ ಒದಗಿಸುತ್ತಿದೆ. ಒಟ್ಟಾರೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಇನ್ಮುಂದೆ ಪ್ರತಿನಿತ್ಯ ಐದು ವಿಮಾನಗಳು ಹಾರಾಟ ನಡೆಸಲಿವೆ.

ಸಂಚಾರ ಸಮಯ: ಹೈದರಾಬಾದ್‌ನಿಂದ ಬೆ.6.05ಕ್ಕೆ ವಿಮಾನ (ವಿಮಾನ ಸಂಖ್ಯೆ 9ಐ 891) ಹೊರಟು ನಗರಕ್ಕೆ 7.50ಕ್ಕೆ ತಲುಪಲಿದೆ. ಮತ್ತೊಂದು ವಿಮಾನ (9ಐ 892) ನಗರದಿಂದ ರಾತ್ರಿ 7.20ಕ್ಕೆ ಹೊರಟು 9.05ಕ್ಕೆ ಹೈದರಾಬಾದ್ ತಲುಪಲಿದೆ. ನಗರದಿಂದ ಬೆ.8.15ಕ್ಕೆ ವಿಮಾನ (9ಐ 893) ಹೊರಟು ಕೊಚ್ಚಿಗೆ ಬೆ.9.45ಕ್ಕೆ ತಲುಪಲಿದೆ. ಮತ್ತೊಂದು ವಿಮಾನ ಕೊಚ್ಚಿಯಿಂದ ಬೆ.10.10ಕ್ಕೆ ಹೊರಟು ನಗರಕ್ಕೆ 11.40ಕ್ಕೆ ತಲುಪಲಿದೆ. ನಗರದಿಂದ ಗೋವಾಕ್ಕೆ ವಿಮಾನ (9ಐ 895) ಮ.3.20ಕ್ಕೆ ಹೊರಟು ಸಂ.4.50ಕ್ಕೆ ತಲುಪಲಿದೆ. ಮತ್ತೊಂದು ವಿಮಾನ (9ಐ 896) ಗೋವಾದಿಂದ ಸಂ.5.20ಕ್ಕೆ ಹೊರಟು 6.50ಕ್ಕೆ ನಗರಕ್ಕೆ ತಲುಪಲಿದೆ.
ಮೈಸೂರು-ಬೆಳಗಾವಿ ವಿಮಾನ ಸಂಚಾರ: ಟ್ರೂಜೆಟ್ ವಿಮಾನಯಾನ ಸಂಸ್ಥೆಯು ಅಕ್ಟೋಬರ್ 27 ರಿಂದ ಮೈಸೂರು-ಬೆಳಗಾವಿ ನಡುವೆ ವಿಮಾನ ಸೇವೆ ಪ್ರಾರಂಭಿಸಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ತಿಳಿಸಿದರು.

ಮೈಸೂರು-ಚೆನ್ನೈ ನಡುವಿನ ಸಂಚಾರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಶೀಘ್ರದಲ್ಲಿಯೇ ಟ್ರೂಜೆಟ್ ಸಂಸ್ಥೆ ಬೆಳಗ್ಗೆ ಕೂಡ ಮೈಸೂರಿನಿಂದ ಚೆನ್ನೈಗೆ ವಿಮಾನ ಹಾರಾಟ ಪ್ರಾರಂಭಿಸಲಿದೆ. ಕೆಲವೇ ತಿಂಗಳಿನಲ್ಲಿ ಮೈಸೂರು-ಹೈದರಾಬಾದ್ ನಡುವೆಯೂ ವಿಮಾನ ಹಾರಾಟ ನಡೆಸಲಿದೆ. ಮಂಗಳೂರು, ತಿರುವನಂತಪುರಂ ನಡುವೆ ಕೂಡ ವಿಮಾನ ಹಾರಾಟಕ್ಕೆ ಬೇಡಿಕೆಗಳು ಕೇಳಿ ಬರುತ್ತಿವೆ ಎಂದು ಹೇಳಿದರು.

ವರ್ಷಾಂತ್ಯಕ್ಕೆ ನಗರಕ್ಕೆ 8 ರಿಂದ 10 ವಿಮಾನಗಳು ಬರಲಿದ್ದು, ಇದಕ್ಕೆ ಪೂರಕವಾಗಿ ರನ್‌ವೇ ಕೂಡ ವಿಸ್ತರಣೆ ಮಾಡಲಾಗುವುದು. ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಅಲಯನ್ಸ್ ಏರ್ ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ಮನು ಆನಂದ್, ಉದ್ಯಮಿಗಳಾದ ಎಸ್.ಕೆ. ದಿನೇಶ್, ಜಯಕುಮಾರ್ ಇತರರು ಇದ್ದರು.

Leave a Reply

Your email address will not be published. Required fields are marked *